ಬಿ.ಎಸ್.ಯಡಿಯೂರಪ್ಪನವರ ಜನ್ಮದಿನದ ಅಂಗವಾಗಿ ರೈತರ ಬೃಹತ್ ಸಮಾವೇಶ

ದಾವಣಗೆರೆ,ಫೆ.26- ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರ ಜನ್ಮದಿನದ ಅಂಗವಾಗಿ ನಾಳೆ ನಗರದ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಮಧ್ಯಾಹ್ನ 3 ಗಂಟೆಗೆ ನಡೆಯಲಿರುವ ರೈತರ ಬೃಹತ್ ಸಮಾವೇಶವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೇ ವೇಳೆ ಮುಷ್ಟಿ ಅಕ್ಕಿ ಅಭಿಯಾನಕ್ಕೆ ಚಾಲನೆ ದೊರೆಯಲಿದ್ದು, ರಾಜ್ಯದ ಎಲ್ಲ ಗ್ರಾಮ ಪಂಚಾಯ್ತಿ ಕೇಂದ್ರ ಸ್ಥಾನಗಳಲ್ಲಿ ಅಭಿಯಾನ ನಡೆಯಲಿದೆ ಎಂದು ವಿವರಿಸಿದರು.

ಪ್ರತಿ ಕೇಂದ್ರದಲ್ಲಿ 100ರಿಂದ 150 ರೈತರನ್ನು ಸೇರಿಸಿ ಪ್ರತಿಜ್ಞಾ ಬೋಧನೆ ಮಾಡಿಸಲಾಗುವುದು, ಇದುವರೆಗೂ ಪ್ರತಿ ಗ್ರಾಮ ಪಂಚಾಯತ್ ಕೇಂದ್ರಗಳಿಂದ 10 ಮನೆಗಳಿಂದ ಅಕ್ಕಿ, ಗೋಧಿ ಸಂಗ್ರಹ ಮಾಡಿ ಅದನ್ನು ಜಿಲ್ಲಾ ಕೇಂದ್ರಕ್ಕೆ ತಂದು ಅಡುಗೆ ಮಾಡಿ ಸೇರಿಸಿ ಈ ಮೂಲಕ ರೈತ ಪರ ಕೆಲಸ ಮಾಡುವ ಸಂಕಲ್ಪವನ್ನು ಕಾರ್ಯಕರ್ತರು ಮಾಡಲಿದ್ದಾರೆ ಎಂದರು.

ಈಗಾಗಲೇ ಆತ್ಮಹತ್ಯೆ ಮಾಡಿಕೊಂಡಿರುವ ರೈತ ಕುಟುಂಬಗಳಿಗೆ ಆತ್ಮವಿಶ್ವಾಸದ ಪತ್ರ ನೀಡಿ ಆತ್ಮಸ್ಥೈರ್ಯ ಮೂಡಿಸುವ ಅಭಿಯಾನವನ್ನು ಕೈಗೊಳ್ಳಲಾಗುತ್ತಿದೆ. ನಾಳೆ ಸಮಾವೇಶವು ಮಾಯಕೊಂಡ ವಿಧಾನಸಭಾ ಕ್ಷೇತ್ರದ ಕೆರೆಯಾಗಳ ಹಳ್ಳಿಯಲ್ಲಿ ನಡೆಯಲಿದ್ದು, ಈ ವೇಳೆಗೆ ಆತ್ಮಹತ್ಯೆಗೆ ಶರಣಾದ ರೈತ ರಂಗಸ್ವಾಮಿ ಅವರ ಮನೆಗೆ ತೆರಳಿ ಪ್ರಧಾನಿಯವರು ಕುಟುಂಬಕ್ಕೆ ಸಾಂತ್ವನ ಹೇಳಲಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ, ಮಾಜಿ ಸಚಿವರಾದ ರವೀಂದ್ರನಾಥ್, ಕರುಣಾಕರ ರೆಡ್ಡಿ, ಮಾಜಿ ಶಾಸಕ ಬಸವರಾಜ್ ನಾಯಕ್ ಮತ್ತಿತರರು ಇದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ