ಬೆಂಗಳೂರು, ಫೆ.26- ಅತ್ಯಂತ ಹಿಂದುಳಿದ ಪ್ರದೇಶಗಳು ಎಂದು ಗುರುತಿಸಲಾಗಿರುವ ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಕೇಂದ್ರ ನೀತಿ ಆಯೋಗ ಮುಂದಾಗಿದ್ದು, ಈ ಕುರಿತು ನೀಲನಕ್ಷೆ ತಯಾರಿಸಲು ಚರ್ಚೆ ಆರಂಭಿಸಿದೆ.
ನೀತಿ ಆಯೋಗ ದೇಶಾದ್ಯಂತ 115 ಜಿಲ್ಲೆಗಳನ್ನು ಅತ್ಯಂತ ಹಿಂದುಳಿದ ಪ್ರದೇಶ ಎಂದು ಗುರುತಿಸಿದ್ದು, ಅವುಗಳ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸುತ್ತಿದೆ. ಅವುಗಳಲ್ಲಿ ಕರ್ನಾಟಕದ ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳು ಸೇರಿದ್ದು, ಈ ಎರಡೂ ಜಿಲ್ಲೆಗಳ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಇಂದು ವಿಧಾನಸೌಧದಲ್ಲಿ ಕೇಂದ್ರ ಸಚಿವರಾದ ಅನಂತ್ಕುಮಾರ್, ಡಿ.ವಿ.ಸದಾನಂದಗೌಡ, ರಮೇಶ್ಜಿಗಜಿಣಗಿ ಅವರ ನೇತೃತ್ವದಲ್ಲಿ ಸಭೆ ನಡೆಯಿತು.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರು, ದೇಶದ ಪ್ರತಿಯೊಂದು ಭಾಗವೂ ಅಭಿವೃದ್ಧಿಯಾದಾಗ ಮಾತ್ರ ಸಮಗ್ರ ಅಭಿವೃದ್ಧಿ ಸಾಧ್ಯ ಎಂಬುದು ಪ್ರಧಾನಮಂತ್ರಿಯವರ ಆಶಯವಾಗಿದೆ. ಹಾಗಾಗಿ ಹಿಂದುಳಿದ ಜಿಲ್ಲೆಗಳನ್ನು ಪಟ್ಟಿ ಮಾಡಲಾಗಿದೆ. ಈ ಭಾಗದಲ್ಲಿ ಶಿಕ್ಷಣ, ಆರೋಗ್ಯ, ಕೃಷಿ, ಮೂಲಸೌಲಭ್ಯ, ಆರ್ಥಿಕ ಸೇರ್ಪಡೆಯಂತಹ ಆದ್ಯತಾ ಕ್ಷೇತ್ರಗಳನ್ನು ಗುರುತಿಸಲಾಗಿದೆ ಎಂದರು.
ಶಿಕ್ಷಣ ಮತ್ತು ಆರೋಗ್ಯಕ್ಕೆ ತಲಾ 30ರಷ್ಟು ಹಣ ನೀಡುವುದು, ಕೃಷಿ, ಮೂಲಸೌಲಭ್ಯ ಮತ್ತು ಆರ್ಥಿಕ ಸೇರ್ಪಡೆಯ ವಲಯಗಳಿಗೆ ತಲಾ 40ರಷ್ಟು ಅನುದಾನವನ್ನು ಹಂಚಿಕೆ ಮಾಡಲು ನಿರ್ಧರಿಸಲಾಗಿದೆ. ಈ ಯೋಜನೆಗಳ ಅನುಷ್ಠಾನದಲ್ಲಿ ಸಚಿವರ ಯಾವುದೇ ಹಸ್ತಕ್ಷೇಪ ಇರುವುದಿಲ್ಲ. ಕೇವಲ ಸಲಹೆ, ಸೂಚನೆ ನೀಡಿ ಉಸ್ತುವಾರಿ ನೋಡಿಕೊಳ್ಳಬಹುದಷ್ಟೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ಜಂಟಿ ಕಾರ್ಯದರ್ಶಿಗಳು ಮತ್ತು ರಾಜ್ಯ ಸರ್ಕಾರದ ಅಪರ ಮುಖ್ಯ ಆಯುಕ್ತ ರಜನೀಸ್ ಗೋಯಲ್ ಅವರುಗಳ ನೇತೃತ್ವದ ತಂಡ ಅಭಿವೃದ್ಧಿ ಕಾಮಗಾರಿಗಳ ಉಸ್ತುವಾರಿ ನೋಡಿಕೊಳ್ಳಲಿದೆ. ಶೌಚಾಲಯ ನಿರ್ಮಾಣ ಸೇರಿದಂತೆ ಹಲವಾರು ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಏಪ್ರಿಲ್ 30ರೊಳಗೆ ನೀಲನಕ್ಷೆಯನ್ನು ತಯಾರಿಸಲಾಗುವುದು. ಮುಂದಿನ ಎರಡು ವರ್ಷಗಳಲ್ಲಿ ಹಂತ ಹಂತವಾಗಿ ಈ ಯೋಜನೆಗಳನ್ನು ಜಾರಿಗೊಳಿಸಲಾಗುವುದು ಎಂದು ಹೇಳಿದರು.
ಅಭಿವೃದ್ಧಿಗೆ ಅನುಕೂಲವಾಗುವಂತೆ ಅಗತ್ಯ ಕಾನೂನು ತಿದ್ದುಪಡಿ ಮಾಡಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಿದ್ದ ಇವೆ ಎಂದ ಅವರು, 115 ಹಿಂದುಳಿದ ಜಿಲ್ಲೆಗಳ ಪೈಕಿ ಬಹುತೇಕ ನಕ್ಸಲ್ಪೀಡಿತ ಪ್ರದೇಶಗಳೂ ಇವೆ ಎಂದರು.
ಆದರೆ ರಾಜ್ಯ ಸರ್ಕಾರದ ಸಚಿವರ ಅನುಪಸ್ಥಿತಿಯಲ್ಲೇ ಕೇಂದ್ರ ಸಚಿವರೇ ಸಭೆ ನಡೆಸಿದ್ದು ರಅಜಯ ಸಚಹಿವರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಬಗ್ಗೆ ಸ್ಪ¸ತನೆ ನೀದಿರುವ ಸದಾನಂದಗೌಡ ನೀತಿ ಆಯೋಗದ ಜತೆಗೆ ರಾಜ್ಯ ಸರ್ಕಾರದ ಯೋಜನಾ ಸಚಿವರು ಸೇರಿದಂತೆ ಯಾವುದೇ ಜನಪ್ರತಿನಿಧಿಗಳು ಭಾಗವಹಿಸದೇ ಇರುವುದರಲ್ಲಿ ನಾನು ರಾಜಕೀಯ ಕಾರಣ ಬೆರೆಸಲು ಇಷ್ಟಪಡುವುದಿಲ್ಲ ಎಂದು ಹೇಳಿದರು.
ನೀತಿ ಆಯೋಗದ ಅನುಷ್ಠಾನದ ಬಗ್ಗೆ ಸಭೆ ನಡೆಸಲು ನನಗೆ ಪ್ರಧಾನಿ ನರೇಂದ್ರ ಮೋದಿ ನಿರ್ದೇಶಿಸಿದ್ದಾರೆ. ಅದರಂತೆ ಸಭೆ ಕರೆಯಲಾಗಿದ್ದು, ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ನಾನೇ ಖುದ್ದಾಗಿ ಪತ್ರ ಬರೆದು ಆಹ್ವಾನ ನೀಡಿದ್ದೆ. ಆದರೂ ಅವರು ಸಭೆಯಲ್ಲಿ ಭಾಗವಹಿಸಿಲ್ಲ. ಆದರೆ, ನಾನು ಇದರಲ್ಲಿ ರಾಜಕೀಯ ಹುಡುಕಲು ಯತ್ನಿಸುವುದಿಲ್ಲ. ಸರ್ಕಾರ, ಪಕ್ಷ, ರಾಜಕಾರಣ ಹೊರತಾಗಿ ಅಭಿವೃದ್ಧಿಯ ಬಗ್ಗೆ ಚಿಂತಿಸುವ ಅಗತ್ಯವಿದೆ ಎಂದರು.
ಅಧಿಕಾರಿಗಳು ಇದರ ಉಸ್ತುವಾರಿ ನೋಡಿಕೊಳ್ಳುತ್ತಾರೆ. ಸಚಿವರು ಯಾವ ಕಾರಣಕ್ಕೆ ಬಂದಿಲ್ಲ ಎಂಬುದು ನನಗೆ ಗೊತ್ತಿಲ್ಲ. ಇವೆಲ್ಲ ಬದಿಗಿಟ್ಟು ಅಭಿವೃದ್ಧಿಯ ಕುರಿತಷ್ಟೆ ತಾವು ಗಮನ ಕೇಂದ್ರೀಕರಿಸುವುದಾಗಿ ಅವರು ಹೇಳಿದರು.