ನವದೆಹಲಿ:ಫೆ-26: ಮುಖ್ಯ ಕಾರ್ಯದರ್ಶಿ ಅಂಶು ಪ್ರಕಾಶ್ ಮೇಲೆ ಆಮ್ ಆದ್ಮಿ ಪಕ್ಷದ(ಎಎಪಿ) ಶಾಸಕರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಹಿನ್ನಲೆಯಲ್ಲಿ ಇನ್ಮುಂದೆ ಅಧಿಕಾರಿಗಳೊಂದಿಗಿನ ಸಭೆಗಳನ್ನು ನೇರಪ್ರಸಾರ ಮಾಡಲು ದೆಹಲಿ ಸರ್ಕಾರ ನಿರ್ಧರಿಸಿದೆ.
ಸಭೆಗಳ ನೇರಪ್ರಸಾರದಿಂದ ಆಡಳಿತದಲ್ಲಿ ಪಾರದರ್ಶಕತೆ ಹೆಚ್ಚಲಿದೆ. ಅಲ್ಲದೆ ಅಧಿಕಾರಿಗಳಿಂದ ಬರುವ ಹಲ್ಲೆಯ ಆರೋಪಗಳನ್ನು ತಪ್ಪಿಸಬಹುದು. ಸರ್ಕಾರದ ಅಧಿಕೃತ ವೆಬ್ಸೈಟ್ನಲ್ಲಿಯೇ ಸಭೆಗಳನ್ನು ಬಿತ್ತರಿಸಲು ಚಿಂತನೆ ನಡೆದಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಅಲ್ಲದೇ ಸರ್ಕಾರದ ಎಲ್ಲ ಕಡತಗಳನ್ನು ಆನ್ಲೈನ್ನಲ್ಲಿ ಅಪ್ಲೋಡ್ ಮಾಡಲು ಯೋಚಿಸುತ್ತಿದ್ದೇವೆ. ಇದರಿಂದ ಕಡತಕ್ಕೆ ಯಾರು ಸಹಿ ಮಾಡಿದ್ದಾರೆ, ಮಾಡಿಲ್ಲ ಎಂಬುದು ಜನರೆಲ್ಲರಿಗೂ ತಿಳಿಯಲಿದೆ. ಯಾರು, ಯಾವ ಕಾರಣಕ್ಕಾಗಿ ಕಡತವನ್ನು ತಡೆಹಿಡಿದಿದ್ದಾರೆ ಎಂಬುದು ಸಹ ಗೊತ್ತಾಗಲಿದೆ ಎಂದು ತಿಳಿಸಿವೆ.
ಸಭೆಗಳ ನೇರಪ್ರಸಾರ ಮತ್ತು ಕಡತಗಳ ಅಪ್ಲೋಡ್ಗೆ ಸಿಎಂ ಅರವಿಂದ್ ಕೇಜ್ರಿವಾಲ್ ಸಂಪುಟವು ಒಪ್ಪಿಗೆ ಸೂಚಿಸಿದರೆ, ಸರ್ಕಾರ ಮಾರ್ಚ್ನಲ್ಲಿ ಮಂಡಿಸುವ ಬಜೆಟ್ನಲ್ಲಿ ಈ ಆಡಳಿತ ಸುಧಾರಣೆಗಳಿಗೆ ಅನುದಾನ ಮೀಸಲಿಡಲು ಯೋಚಿಸಿದೆ.
ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಿವಾಸದಲ್ಲಿ ಕಳೆದ ಸೋಮವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಶಾಸಕರಾದ ಪ್ರಕಾಶ್ ಜರ್ವಾಲ್ ಮತ್ತು ಅಮಾನತ್ಉಲ್ಲಾ ಖಾನ್ ತಮ್ಮ ಮೇಲೆ ಹಲ್ಲೆ ನಡೆಸಿದ್ದರು ಎಂದು ಮುಖ್ಯಕಾರ್ಯದರ್ಶಿ ಅಂಶು ಪ್ರಕಾಶ್ ಆರೋಪಿಸಿದ್ದಾರೆ. ಈ ಹಿನ್ನಲೆಯಲ್ಲಿ ಇಬ್ಬರು ಶಾಸಕರನ್ನು ಪೊಲೀಸರು ಬಂಧಿಸಿದ್ದಾರೆ.