![modi](http://kannada.vartamitra.com/wp-content/uploads/2018/02/modi-678x381.jpeg)
ನವದೆಹಲಿ: ದೇಶದಲ್ಲಿ ನಡೆದಿರುವ ಹಣಕಾಸಿನ ಅಕ್ರಮಗಳ ಕುರಿತು ನಮ್ಮ ಸರ್ಕಾರ ಯಾವುದೇ ಮುಲಾಜಿಲ್ಲದ ಕ್ರಮ ತೆಗೆದುಕೊಳ್ಳುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಉದ್ದೇಶಪೂರ್ವಕ ಸುಸ್ತಿದಾರರಿಗೆ ಎಚ್ಚರಿಕೆ ನೀಡಿದ್ದಾರೆ.
ದಿಲ್ಲಿಯಲ್ಲಿ ನಡೆಯುತ್ತಿರುವ ಜಾಗತಿಕ ವ್ಯಾಪಾರ ಶೃಂಗಸಭೆಯಲ್ಲಿ ಮಾತನಾಡಿದ ಪ್ರಧಾನಿ, ಸಾರ್ವಜನಿಕರ ಹಣದಲ್ಲಿ ನಡೆಯುವ ಅಕ್ರಮಗಳ ವಿರುದ್ಧ ಸರಕಾರ ಯಾವುದೇ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳುತ್ತದೆ, ಈ ಹಿಂದೆಯೂ ಇದೇ ರೀತಿ ನಾವು ನಡೆದುಕೊಂಡಿದ್ದೆವು, ಇನ್ನು ಮುಂದೆಯೂ ಹೀಗೇಯೆ ನಡೆದುಕೊಳ್ಳುತ್ತೇವೆ ಎಂದು ನೀರವ್ ಮೋದಿ ಹಾಗೂ ವಿಜಯ್ ಮಲ್ಯ ಪ್ರಕರಣವನ್ನು ಪ್ರಸ್ತಾಪಿಸದೆಯೇ ತಿಳಿಸಿದರು.
ಸರಿಯಾಗಿ ನಾಲ್ಕು ವರ್ಷಗಳ ಹಿಂದೆ ನಮ್ಮ ದೇಶವನ್ನು ಐದು ದುರ್ಬಲ ರಾಷ್ಟ್ರಗಳ ಪಟ್ಟಿಯಲ್ಲಿ ಗುರುತಿಸಲಾಗಿತ್ತು, ಆದರೆ ಇದೀಗ ಭಾರತದ ಐದು ಟ್ರಿಲಿಯನ್ ಅಮೆರಿಕನ್ ಡಾಲರ್ ವಹಿವಾಟಿನ ಕುರಿತು ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ ಇದು ಭಾರತದ ಶಕ್ತಿ ಎಂದರು.
ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ನೀಡಿರುವ ದಾಖಲೆ ಪ್ರಕಾರ 2013ರವರೆಗೆ ಭಾರತದ ಜಾಗತಿಕ ಜಿಡಿಪಿ ಕೇವಲ ಶೇ.2.4ರಷ್ಟಿತ್ತು. ಆದರೆ ಇಂದು ನಮ್ಮ ಜಾಗತಿಕ ಜಿಡಿಪಿ ಮಟ್ಟ 3.1 ದಾಟಿದೆ. ಇದು ನಾಲ್ಕು ವರ್ಷಗಳಲ್ಲಿ ನಮ್ಮ ಸರ್ಕಾರದ ಸಾಧನೆ ಎಂದು ಮೋದಿ ಹೇಳಿದರು.