ಅಮೆರಿಕ ಕ್ರಮದಿಂದ ಭಾರತೀಯ ಐಟಿ ಕಂಪನಿಗಳಿಗೆ ಸಂಕಷ್ಟ

ವಾಷಿಂಗ್ಟನ್‌:ಎಚ್‌1ಬಿ ವೀಸಾ ಕುರಿತಂತೆ ಅಮೆರಿಕ ಮತ್ತಷ್ಟು ಕಠಿಣ ಕ್ರಮಗಳನ್ನು ತೆಗೆದುಕೊಂಡಿದ್ದು, ಭಾರತೀಯ ಐಟಿ ಕಂಪನಿಗಳು ಮತ್ತು ಅದರ ಉದ್ಯೋಗಿಗಳು ಸಂಕಷ್ಟ ಎದುರಿಸುವಂತಾಗಿದೆ.

2018ರ ಅಮೆರಿಕ ನಾಗರಿಕತ್ವ ಮತ್ತು ವಲಸೆ ಸೇವೆ ನೀತಿಯಡಿ ಅಮೆರಿಕ ಸರಕಾರ ಹೊಸ ನಿಯಮಗಳನ್ನು ಜಾರಿಗೆ ತಂದಿದೆ.

ಅಮೆರಿಕದ ಐಟಿ ಕಂಪನಿಗಳು ತಮ್ಮ ಕೆಲಸಕ್ಕಾಗಿ ಮೂರನೇ ಸಂಸ್ಥೆಗಳ ಉದ್ಯೋಗಿಗಳನ್ನು ಬಳಸಿಕೊಳ್ಳುವಾಗ ಅಮೆರಿಕದ ನಾಗರಿಕತ್ವ ಮತ್ತು ವಲಸೆ ನೀತಿಯ ನಿಯಮಗಳನ್ನು ಪಾಲಿಸಬೇಕು ಎಂದು ಹೇಳಲಾಗಿದೆ.

ನಿರ್ದಿಷ್ಟ ಕೆಲಸಕ್ಕೆ ಹಾಗೂ ನಿರ್ದಿಷ್ಟ ಅವಧಿಗೆ ಮಾತ್ರ ವಿದೇಶಿ ಉದ್ಯೋಗಿಗಳನ್ನು ಕರೆಸಿಕೊಳ್ಳಬಹುದು ಎಂಬುದು ಪ್ರಸಕ್ತ ನೀತಿಯ ಪ್ರಮುಖ ಅಂಶವಾಗಿದೆ.


ಇದು ಜಾರಿಗೆ ಬಂದರೆ ಅಮೆರಿಕದಲ್ಲಿ ಕೆಲಸ ಮಾಡುವ ವಿದೇಶಿ ಉದ್ಯೋಗಿಗಳಿಗೆ ಎಚ್‌1ಬಿ ವೀಸಾ ಪಡೆಯಲು ಕಠಿಣ ಪರಿಸ್ಥಿತಿ ಎದುರಾಗಲಿದೆ.

ಇದಲ್ಲದೇ ಈ ರೀತಿಯ ವೀಸಾ ಬಯಸುವವರು ಬಹು ಕೌಶಲ್ಯವನ್ನು ಹೊಂದಿರಬೇಕು ಎಂದು ಹೇಳಲಾಗಿದೆ. ಎಚ್‌1ಬಿ ವೀಸಾ ಪಡೆಯುವವರ ಸಂಪೂರ್ಣ ವಿವರವನ್ನು ಸರಕಾರಕ್ಕೆ ಸಲ್ಲಿಸಬೇಕು ಎಂದು ನೀತಿಯಲ್ಲಿ ಸ್ಪಷ್ಟಪಡಿಸಲಾಗಿದೆ.

ಉದ್ದೇಶಿತ ಕಾರ್ಯ ಪೂರ್ಣಗೊಂಡ ವೀಸಾ ಅವಧಿ ಕೂಡ ಕಡಿತಗೊಳ್ಳುವಂತೆ ನೀತಿ ರೂಪಿಸಲಾಗಿದೆ. ಒಂದು ವೇಳೆ ವೀಸಾ ಅವಧಿ 3 ವರ್ಷವಿದ್ದು ಅದಕ್ಕಿಂತಲೂ ಮುನ್ನವೇ ಕೆಲಸ ಪೂರ್ಣಗೊಂಡಾಗಲೂ ವೀಸಾ ಅವಧಿ ಅಲ್ಲಿಗೆ ಕೊನೆಗೊಳ್ಳುತ್ತದೆ ಎಂದು ವಿವರಿಸಲಾಗಿದೆ.

ಈ ಎಚ್‌1ಬಿ ವೀಸಾ ಮೇಲೆ ಲಕ್ಷಾಂತರ ಭಾರತೀಯ ಉದ್ಯೋಗಿಗಳು ಆಧಾರವಾಗಿದ್ದಾರೆ.

ಸದ್ಯ ಅಮೆರಿಕದಲ್ಲಿ ಬ್ಯಾಂಕಿಂಗ್, ಪ್ರವಾಸ, ವಾಣಿಜ್ಯ, ತಂತ್ರಜ್ಞಾನ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದಾರೆ.

ಅಕ್ಟೋಬರ್‌ ತಿಂಗಳಿನಿಂದ ಹೊಸ ನೀತಿಯಡಿ ಎಚ್‌1ಬಿ ವೀಸಾ ಮಂಜೂರು ಮಾಡಲು ಅಮೆರಿಕ ನಿರ್ಧರಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ