ಬೆಂಗಳೂರು, ಫೆ.23- ರೈತರ ಸಾಲ ಮನ್ನಾಕ್ಕೆ ಹಣ ನೀಡದ ಕೇಂದ್ರ ಸರ್ಕಾರ, ಉದ್ಯಮಿಗಳ ಸಾಲ ಮನ್ನಾ ಮಾಡಲು ರಾಷ್ಟ್ರೀಕೃತ ಬ್ಯಾಂಕ್‍ಗಳಿಗೆ ಲಕ್ಷಾಂತರ ಕೋಟಿ ಹಣ ನೀಡುತ್ತಿದೆ ಎಂದು ಕಾಂಗ್ರೆಸ್ ಶಾಸಕ ಕೆ.ಎನ್.ರಾಜಣ್ಣ ಮಾಡಿದ ಆರೋಪ ವಿಧಾನಸಭೆಯಲ್ಲಿ ಕೋಲಾಹಲಕ್ಕೆ ಕಾರಣವಾಯಿತು. ಇದನ್ನು ಖಂಡಿಸಿ ಪ್ರತಿಪಕ್ಷಗಳು ಧರಣಿ ನಡೆಸಿದವು. ಗದ್ದಲ ಗೊಂದಲಗಳಿಂದಾಗಿ ಕಲಾಪ ಕೆಲ ಕಾಲ ಮುಂದೂಡಿಕೆಯಾಗಿ, ಅಂತಿಮವಾಗಿ ಗದ್ದಲದ ನಡುವೆಯೇ ರಾಜ್ಯ ಬಜೆಟ್‍ನ ಲೇಖಾನುದಾನಕ್ಕೆ ಸದನದಲ್ಲಿ ಧ್ವನಿಮತದ ಅಂಗೀಕಾರ ಪಡೆಯಲಾಯಿತು.
ರಾಜ್ಯ ಬಜೆಟ್ ಕುರಿತು ವಿಧಾನಸಭೆಯಲ್ಲಿ ಕಳೆದ ವಾರದಿಂದ ನಡೆದ ಚರ್ಚೆಗೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ನೀಡುತ್ತಿದ್ದರು. ಈ ಸಂದರ್ಭದಲ್ಲಿ ಸಾಲ ಮನ್ನಾ ವಿಷಯ ಪ್ರಸ್ತಾಪವಾಗಿ ಪ್ರಣಾಳಿಕೆಯಲ್ಲಿ ಭರವಸೆ ನೀಡದೇ ಇದ್ದರೂ ಎರಡು ವರ್ಷ ಭೀಕರ ಬರ ಇದ್ದುದ್ದನ್ನು ಅರ್ಥ ಮಾಡಿಕೊಂಡು ರೈತರ ಅನುಕೂಲಕ್ಕಾಗಿ ಸಹಕಾರ ಸಂಘಗಳ ಮೂಲಕ ನೀಡಿದ್ದ ಸಾಲದ ಪೈಕಿ 8165 ಕೋಟಿ ರೂ.ಗಳನ್ನು ಮನ್ನಾ ಮಾಡಿದ್ದೇವೆ. ಇದರಿಂದ 50 ಸಾವಿರ ವರೆಗೂ ಸಾಲ ಮಾಡಿದ 22,27,506ಮಂದಿಗೆ ಅನುಕೂಲವಾಗಿದೆ. ಸಹಕಾರ ಬ್ಯಾಂಕುಗಳಿಂದ ಒಟ್ಟು 10,736ಕೋಟಿ ರೂ. ಸಾಲ ನೀಡಲಾಗಿದೆ ಎಂದು ಹೇಳಿದರು.
ನೀವು ಸಾಲ ಮನ್ನಾ ಮಾಡಿದ್ದೀರಾ. ಮುಂದಿನ ಅವಧಿಗೆ ನಾವು ಅಧಿಕಾರಕ್ಕೆ ಬರುತ್ತೇವೆ. ಅದರ ಬಾಕಿಯನ್ನು ನಾವು ತೀರಿಸಬೇಕೆಂದು ಶೆಟ್ಟರ್ ಹೇಳಿದರು. ಅದಕ್ಕೆ ಉತ್ತರಿಸಿದ ಸಿಎಂ, ನಿಮಗೆ ಆ ತೊಂದರೆ ಕೊಡುವುದಿಲ್ಲ ಮುಂದಿನ ಅವಧಿಗೂ ನಾವೇ ಅಧಿಕಾರಕ್ಕೆ ಬರುತ್ತೇವೆ.. ನಾವೇ ಸಾಲ ತೀರಿಸಿಕೊಳ್ಳುತ್ತೇವೆ. ನೀವು ಭ್ರಮಾ ಲೋಕದಲ್ಲಿದ್ದೀರಿ, ನಿಮ್ಮ ಭ್ರಮೆಗೆ, ಕನಸುಗಳಿಗೆ ಅಡ್ಡಿಪಡಿಸುವುದಿಲ್ಲ. ನಾವು ವಾಸ್ತವ ನೆಲೆಗಟ್ಟಿನಲ್ಲಿ ಯೋಚಿಸುತ್ತೇವೆ. ಹಾಗಾಗಿ ಸಾಲದ ಮನ್ನಾ ಹೊರೆ ಹೆಚ್ಚಾಗದಂತೆ ನಿರ್ಧಾರ ಕೈಗೊಂಡಿದ್ದೇವೆ ಎಂದರು.
ಯಾರು ಅಧಿಕಾರಕ್ಕೆ ಬರುತ್ತಾರೆ ಎಂಬುದಾಗಿ ಕೆಲ ಕಾಲ ಲಘುದಾಟಿಯ ಚರ್ಚೆಗಳು ನಡೆದವು. ಈ ಹಂತದಲ್ಲಿ ಮಧ್ಯ ಪ್ರವೇಶಿಸಿದ ಶಾಸಕ ಕೆ.ಎನ್.ರಾಜಣ್ಣ, ಉತ್ತರ ಪ್ರದೇಶ, ಹರಿಯಾಣದಲ್ಲಿ ರೈತರು ಸಾಲ ಮಾಡಿರುವುದನ್ನು ಬಿಜೆಪಿಯವರು ಪದೇ ಪದೇ ಹೇಳುತ್ತಾರೆ. ಆದರೆ, ಅಲ್ಲಿ ಸಣ್ಣ ಮತ್ತು ಮಧ್ಯಮ ವರ್ಗದ ರೈತರ ಸಾಲವನ್ನು ಮಾತ್ರ ಮನ್ನಾ ಮಾಡಲಾಗಿದೆ. ನಮ್ಮ ಸರ್ಕಾರ ಎಲ್ಲಾ ವರ್ಗದ ರೈತರ ಸಾಲವನ್ನು ಮನ್ನಾ ಮಾಡಿದೆ ಎಂದು ಹೇಳಿದರು. ಇದನ್ನು ಬಿಜೆಪಿಯ ಶಾಸಕ ಸಿ.ಟಿ.ರವಿ ಅಲ್ಲಗಳೆದರು.
ಕೆ.ಎನ್.ರಾಜಣ್ಣ, ನನ್ನ ಬಳಿ ದಾಖಲೆಗಳಿವೆ ಬೇಕಾದರೆ ತೋರಿಸುತ್ತೇನೆ ಎಂದು ಸವಾಲು ಹಾಕಿ ವಾದಕ್ಕೆ ಅಂಟಿಕೊಂಡರು. ಮಾತು ಮುಂದುವರೆಸಿದ ರಾಜಣ್ಣ, ರಾಷ್ಟ್ರೀಕೃತ ಬ್ಯಾಂಕುಗಳ ಸಾಲವನ್ನು ಮನ್ನಾ ಮಾಡುವಂತೆ ಕೇಂದ್ರ ಸರ್ಕಾರದ ಮೇಲೆ ಮುಖ್ಯಮಂತ್ರಿ ಸೇರಿದಂತೆ ಎಲ್ಲರೂ ಒತ್ತಡ ಹೇರಿದ್ದರು. ಆದರೆ, ಮಾಡಲಿಲ್ಲ. ಬದಲಾಗಿ ಶ್ರೀಮಂತ ಉದ್ಯಮಿಗಳಿಗೆ ಕೊಟ್ಟ ಸಾಲ ಮರು ವಸೂಲಿಯಾಗದೆ ಅನುತ್ಪಾದಕ ಆಸ್ತಿ ಹೆಚ್ಚಾಗಿರುವುದರಿಂದ ರಾಷ್ಟ್ರೀಕೃತ ಬ್ಯಾಂಕುಗಳಿಗೆ ಆರ್ಥಿಕ ಪುನಶ್ಚೇತನ ನೀಡಲು ಕೇಂದ್ರ ಸರ್ಕಾರ 2008ರವರೆಗೆ 1,18,724 ಕೋಟಿ ರೂ.ಗಳನ್ನು ಬಜೆಟ್‍ನಲ್ಲಿ ನೀಡಲಾಗಿತ್ತು. 2017ರಲ್ಲಿ 2.11ಲಕ್ಷ ಕೋಟಿ ಅನುದಾನವನ್ನು ಬಜೆಟ್‍ನಿಂದ ಬ್ಯಾಂಕುಗಳಿಗೆ ನೀಡಲಾಗಿದೆ. ಈ ಹಣ ನೀರವ್ ಮೋದಿ ತೆಗೆದುಕೊಂಡ 11ಸಾವಿರ ಕೋಟಿ, ಮಲ್ಯ ತೆಗೆದುಕೊಂಡು ಹೋದ 9ಸಾವಿರ ಕೋಟಿಯಂತ ಸಾಲಕ್ಕೆ ಹೊಂದಾಣಿಕೆಯಾಗುತ್ತದೆ ಎಂದು ಆರೋಪಿಸಿದರು.
ಈ ಹಂತದಲ್ಲಿ ಬಿಜೆಪಿಯಿಂದ ಭಾರೀ ಪ್ರತಿರೋಧ ವ್ಯಕ್ತವಾಯಿತು. ನೀರವ್‍ಮೋದಿ, ಮಲ್ಯಗೆ ಸಾಲ ಕೊಟ್ಟವರು ಯಾರು ಎಂದು ಬಿಜೆಪಿಯವರು ಪ್ರಶ್ನಿಸಿದರು.
ಕಾಂಗ್ರೆಸ್‍ನ ಸಂಸದ ಲಗಡಪತಿ ರಾಜಗೋಪಾಲರೆಡ್ಡಿ 46 ಸಾವಿರ ಕೋಟಿ ಪಡೆದು ವಂಚಿಸಿದ್ದು ಗೊತ್ತಿಲ್ಲವೆ ಎಂದು ಬಿಜೆಪಿಯ ಸಿ.ಟಿ.ರವಿ ಸೇರಿದಂತೆ ಅನೇಕರು ಛೇಡಿಸಿದರು.
ಕುಂಬಳಕಾಯಿ ಕಳ್ಳ ಎಂದರೆ ನೀವು ಏಕೆ ಹೆಗಲು ಮುಟ್ಟಿಕೊಂಡು ನೋಡಿಕೊಳ್ಳುತ್ತೀರಿ ಎಂದು ರಾಜಣ್ಣ ಲೇವಡಿ ಮಾಡಿದರು. ಇದರಿಂದ ಕೆಲ ಕಾಲ ಮಾತಿನ ಚಕಮಕಿ ನಡೆದು ಕೋಲಾಹಲದ ವಾತಾವರಣ ನಿರ್ಮಾಣವಾಯಿತು. ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ವಾಗ್ವವಾದಗಳು ನಡೆದವು.
ಕೆ.ಎನ್.ರಾಜಣ್ಣ ಅವರು ಮಾತು ಮುಂದುವರೆಸಲು ಬಿಜೆಪಿಯವರು ಅವಕಾಶ ಕೊಡದಂತೆ ಅಡ್ಡಿ ಪಡಿಸಿದರು. ರಾಜಣ್ಣ ಅವರನ್ನು ಸುಮ್ಮನಿರಿಸಲು ಮುಖ್ಯಮಂತ್ರಿ, ಸ್ಪೀಕರ್ ಯಾರಿಂದಲೂ ಸಾಧ್ಯವಾಗುತ್ತಿಲ್ಲ. ಈ ಸದನ ನಡೆಯಬಾರದು ಎಂಬುದು ಕಾಂಗ್ರೆಸ್‍ನವರ ಉದ್ದೇಶ. ಮುಖ್ಯಮಂತ್ರಿ ಅವರು ಗಂಭೀರವಾಗಿ ಉತ್ತರ ಕೊಡುವಾಗ ರಾಜಣ್ಣ ಅವರು ಬಾಯಿಗೆ ಬಂದಂತೆ ಮಾತನಾಡುವುದು ಏಕೆ? ಅವರಿಗೆ ಅವಕಾಶ ನೀಡುವುದಾದರೆ ನಮಗೂ ನೀಡಿ ಎಂದು ಬಿಜೆಯ ವಿಶ್ವೇಶ್ವರಹೆಗಡೆ ಕಾಗೇರಿ ಆಗ್ರಹಿಸಿದರು.
ಆದರೆ, ರಾಜಣ್ಣ ನಾನು ಹೇಳುವ ಮಾತುಗಳು ಇನ್ನೂ ಮುಗಿದಿಲ್ಲ ಎಂದಾಗ ಬಿಜೆಪಿಯವರಿಗೆ ಪ್ರತ್ಯುತ್ತರ ನೀಡುತ್ತಲೇ ಹೋದರು. ಇದರಿಂದ ಇನ್ನಷ್ಟು ಗೊಂದಲ ಹೆಚ್ಚಾಯಿತು. ಮುಖ್ಯಮಂತ್ರಿಯವರು ಮಧ್ಯ ಪ್ರವೇಶಿಸಿ ರಾಜಣ್ಣ ಅವರಿಗೆ ಮಾತನಾಡಲು ಅವಕಾಶ ಕೊಟ್ಟು ನಾನು ಕುಳಿತಿದ್ದೇನೆ. ನೀವು ಅವರಿಗೆ ಮಾತನಾಡಲು ಬಿಡಿ. ನಿಮ್ಮಂತೆ ಅವರೂ ಶಾಸಕರು. ಜನರಿಂದ ಮತ ಪಡೆದು ಬಂದಿದ್ದಾರೆ ಎಂದು ರಾಜಣ್ಣ ಅವರ ಬೆಂಬಲಕ್ಕೆ ನಿಂತರು. ಆಗ ಬಿಜೆಪಿ ಶಾಸಕರು ಸದನದ ಬಾವಿಗಿಳಿದು ಧರಣಿ ಆರಂಭಿಸುವ ಮೂಲಕ ಧಿಕ್ಕಾರ ಕೂಗಿದರು. ಈ ಸರ್ಕಾರದಲ್ಲಿ ಸದನದ ಹೊರಗೂ- ಒಳಗೂ ಗೂಂಡಾಗಿರಿ ನಡೆಯುತ್ತಿದೆ. ಇದು 10 ಪರ್ಸೆಂಟ್ ಸರ್ಕಾರ, ದುರಾಂಹಕಾರಿ ಸರ್ಕಾರ ಎಂದು ಧಿಕ್ಕಾರ ಕೂಗಿದರು.
ಆಡಳಿತ ಪಕ್ಷದ ಸಚಿವರು ಬಿಜೆಪಿಯವರಿಗೆ ಪ್ರತ್ಯುತ್ತರ ನೀಡಲು ಹೇರಿದ ದನಿಯಲ್ಲಿ ಮಾತನಾಡಿದಾಗ ಯಾರು ಏನು ಹೇಳುತ್ತಿದ್ದಾರೆ ಎಂಬುದು ಕೇಳಿಸಿದೆ ಗೊಂದಲದ ವಾತಾವರಣ ನಿರ್ಮಾಣವಾಯಿತು. ಬಿಜೆಪಿಯವರು ನೀವು ಕೂಗು ಮಾರಿಗಳು. ನಾನು ಉತ್ತರ ನೀಡಲು ಸಿದ್ದನಿದ್ದರೂ ನಿಮಗೆ ಅದು ಬೇಕಿಲ್ಲ. ನಿಮ್ಮದು 90 ಪರ್ಸೆಂಟ್ ಕಮಿಷನ್ ಸರ್ಕಾರ. ನಿಮ್ಮ ಪಕ್ಷದವರು ಜೈಲಿನಲ್ಲಿ ಬೀಗತನ ಮಾಡಲು ಹೋಗಿದ್ದರೆ ಎಂದು ತಿರುಗೇಟು ನೀಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತಿನ ಸಮರಕ್ಕೆ ನಿಂತರು.
ಬಿಜೆಪಿಯವರು ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡಲು ಅವಕಾಶ ನೀಡದೇ ಇದ್ದರೆ ಅಪೆÇ್ರೀ ಬಿಲ್ಲನ್ನು ಮಂಡಿಸಬೇಕಾಗುತ್ತದೆ. ಯಾವುದೇ ಉತ್ತರ ನೀಡದೆ ಬಜೆಟ್‍ಗೆ ಅಂಗೀಕಾರ ಪಡೆದುಕೊಳ್ಳಬೇಕಾಗುತ್ತದೆ ಎಂದು ಸಿಎಂ ಎಚ್ಚರಿಸಿದರು.
ಆದರೂ ಬಿಜೆಪಿ ಧರಣಿ ಕೈ ಬಿಡದೆ ಧಿಕ್ಕಾರ ಕೂಗುತ್ತಾ ಗದ್ದಲ ಮೂಡಿಸಿದಾಗ ಸಭಾಧ್ಯಕ್ಷ ಸ್ಥಾನದಲ್ಲಿದ್ದ ಉಪಾಧ್ಯಕ್ಷ ಶಿವಶಂಕರೆಡ್ಡಿ ಅವರು ಕಲಾಪವನ್ನು ಕೆಲ ಕಾಲ ಮುಂದೂಡಿದರು.
ನಂತರ ಸದನ ಸಮಾವೇಶಗೊಂಡಾಗಲೂ ಬಿಜೆಪಿ ಧರಣಿ ಮುಂದುವರೆಸಿ ಗದ್ದವೇಬ್ಬಿಸಿತ್ತು. ದಿಕ್ಕಾರ, ಪ್ರತಿಘೋಷಣೆಗಳ ನಡುವೆ ಮುಖ್ಯಮಂತ್ರಿ ತಮ್ಮ ಉತ್ತರವನ್ನು ಮುಂದುವರೆಸಿದರು. ಗಲಾಟೆ ನಿಯಂತ್ರಣಕ್ಕೆ ಬಾರದಿದ್ದಾಗ ಬಜೆಟ್‍ನ ಲೇಖಾನುದಾನವನ್ನು ಸಭಾಧ್ಯಕ್ಷ ಕೋಳಿವಾಡ್ ಮತಕ್ಕೆ ಹಾಕಿದರು. ಬಿಜೆಪಿಯವರು ಕಾಗದ ಪತ್ರಗಳನ್ನು ಹರಿದು ಗಾಳಿಯಲ್ಲಿ ತೂರಿದರು. ಕೋಲಾಹಲದ ನಡುವೆಯೂ ಲೇಖಾನುದಾನಕ್ಕೆ ಸದನದ ಧ್ವನಿಮತದ ಅಂಗೀಕಾರ ದೊರೆತಿದೆ ಎಂದು ಸಭಾಧ್ಯಕ್ಷರು ಘೋಷಿಸಿದರು.