ರಾಜ್ಯಸರ್ಕಾರಿ ನೌಕರರ ವೇತನ ಹೆಚ್ಚಳ : ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು, ಫೆ.23-ರಾಜ್ಯಸರ್ಕಾರಿ ನೌಕರರ ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಆರನೇ ವೇತನ ಆಯೋಗ ನೀಡಿರುವ ವರದಿಯ ಶಿಫಾರಸು ಏಪ್ರಿಲ್ 1 ರಿಂದ ಜಾರಿಗೆ ಬರುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಗೆ ತಿಳಿಸಿದರು.

ಬಿಜೆಪಿ ಶಾಸಕರ ಧರಣಿ, ಗದ್ದಲ, ಘೋಷಣೆ ನಡುವೆ ಬಜೆಟ್ ಮೇಲೆ ನಡೆದ ಚರ್ಚೆಗೆ ಉತ್ತರ ನೀಡುತ್ತಿದ್ದ ಮುಖ್ಯಮಂತ್ರಿ, ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಸಂಬಂಧಿಸಿದಂತೆ ಆರನೇ ವೇತನ ಆಯೋಗ ವರದಿ ನೀಡಿದ್ದು, ಅದರ ಅನುಷ್ಠಾನಕ್ಕೆ 10,580 ಕೋಟಿ ರೂ. ಹೊರೆಯಾಗಲಿದೆ. 1.4.2018 ರಿಂದ ಜಾರಿಯಾಗುತ್ತದೆ. ಸುಮಾರು 4 ಕೋಟಿಯಷ್ಟು ಸಾಲ ಕೊಡಬೇಕಾಗುತ್ತದೆ. ಹಿಂದುಳಿದ ವರ್ಗದವರು, ದಲಿತರು, ಅಲ್ಪಸಂಖ್ಯಾತ ವರ್ಗದವರಿಗೆ ನೀಡುವ ಅನುದಾನದಲ್ಲಿ ಕಡಿತ ಮಾಡಿಲ್ಲ. ನೀರಾವರಿಗೆ 50 ಸಾವಿರ ಕೋಟಿ ರೂ. ಅನುದಾನ ಒದಗಿಸಲಾಗಿದೆ. ವಿದ್ಯುತ್‍ಗೆ ನೀಡುವ ಅನುದಾನವನ್ನೂ ಕಡಿತ ಮಾಡಿಲ್ಲ. ರಾಜ್ಯದ ಆರ್ಥಿಕ ಪರಿಸ್ಥಿತಿ ಸುಭದ್ರವಾಗಿದೆ ಎಂದು ಸಮರ್ಥಿಸಿಕೊಂಡರು.

ಕೇಂದ್ರ ಸರ್ಕಾರದ ಬಳಿಗೆ ರಾಜ್ಯದ ನಿಯೋಗ ಕರೆದೊಯ್ದಾಗ ಬಿಜೆಪಿಯವರು ಸಾಲ ಮನ್ನಾ ಮಾಡುವ ಬಗ್ಗೆ ಪ್ರಧಾನಿಯವರ ಮುಂದೆ ತುಟಿಕ್‍ಪಿಟಿಕ್ ಎನ್ನಲಿಲ್ಲ. ರೈತರ ಬಗ್ಗೆ ಮಾತನಾಡಲು ಅವರಿಗೆ ನೈತಿಕ ಹಕ್ಕಿಲ್ಲ ಎಂದು ಟೀಕಿಸಿದರು.

ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಸಾಲ ಮನ್ನಾ ಮಾಡಿ ಎಂದು ಒತ್ತಾಯಿಸಿದರೆ, ನಮ್ಮ ಬಳಿ ನೋಟು ಮುದ್ರಿಸುವ ಯಂತ್ರವಿಲ್ಲ ಎಂದು ಹೇಳಿದ್ದರು. ಈಗ ರೈತರ ಸಾಲ ಮನ್ನಾ ಮಾಡಿ ಎಂದು ಒತ್ತಾಯಿಸಲು ಯಾವ ಹಕ್ಕಿದೆ ಎಂದು ಪ್ರಶ್ನಿಸಿದರು.

ಬಿಜೆಪಿ ರೈತ ವಿರೋಧಿ ಪಕ್ಷವಾಗಿದೆ. ನಾವು ರಾಜ್ಯದ ಆರ್ಥಿಕ ಶಿಸ್ತನ್ನು ಕಾಪಾಡಿಕೊಂಡಿದ್ದೇವೆ. ನಮ್ಮ ರಾಜ್ಯದ ಸಾಲ ಶೇ.20.36ರಷ್ಟಿದ್ದರೆ, ಕೇಂದ್ರ ಸರ್ಕಾರದ್ದು ಶೇ.50.1 ರಷ್ಟಿದೆ. ಕೇರಳ ಶೇ.37.7ರಷ್ಟಿದೆ. ಉತ್ತರ ಪ್ರದೇಶದ್ದು ಶೇ.29.78ರಷ್ಟಿದ್ದರೆ, ರಾಜಸ್ಥಾನದ್ದು ಶೇ.32.76ರಷ್ಟಿದೆ ಎಂದು ಹೇಳಿದರು.
ಈ ಹಂತದಲ್ಲಿ ವಿರೋಧಪಕ್ಷದ ನಾಯಕ ಜಗದೀಶ್ ಶೆಟ್ಟರ್ ಮಾತನಾಡಿ, ಕೃಷ್ಣಾ ಮೇಲ್ದಂಡೆ ಯೋಜನೆಗೆ ಹಣ ಕೊಟ್ಟಿಲ್ಲ. ಸಾಲದ ಸುಳಿಯಲ್ಲಿ ಸರ್ಕಾರವಿದೆ. ಮೆಡಿಕಲ್ ಕಾಲೇಜಿಗೂ ಹಣ ಕೊಟ್ಟಿಲ್ಲ ಎಂದು ಆರೋಪಿಸಿದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ