ಪಂಚಾಯತ್‍ರಾಜ್ ವ್ಯವಸ್ಥೆ ಸರ್ಕಾರ ನಿರ್ಲಕ್ಷ್ಯ ಧೋರಣೆ ಬಿಜೆಪಿ ಸದಸ್ಯರು ಬಾವಿಗಿಳಿದು ಪ್ರತಿಭಟನೆ

ಬೆಂಗಳೂರು, ಫೆ.23-ಪಂಚಾಯತ್‍ರಾಜ್ ವ್ಯವಸ್ಥೆಯ ಕಾರ್ಯಕ್ರಮ, ಆಡಳಿತ ಯಂತ್ರ, ಹಣಕಾಸು ಸಮರ್ಪಕ ನಿರ್ವಹಣೆಯಲ್ಲಿ ಸರ್ಕಾರದ ನಿರ್ಲಕ್ಷ್ಯ ಧೋರಣೆ ಖಂಡಿಸಿ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ ಪ್ರಸಂಗ ಪರಿಷತ್‍ಕಲಾಪದಲ್ಲಿ ಇಂದು ನಡೆಯಿತು.

ಪಂಚಾಯತ್‍ರಾಜ್ ವ್ಯವಸ್ಥೆಯ ಸಬಲೀಕರಣಕ್ಕಾಗಿ 3ಎಫ್ ಪಂಚಾಯತ್‍ಗಳಿಗೆ ವರ್ಗಾಯಿಸಿ ಅಧಿಕಾರ ವಿಕೇಂದ್ರೀಕರಣಕ್ಕೆ ಒತ್ತು ಕೊಡಬೇಕೆಂಬುದು ಸಹಸ್ರಾರು ಜನಪ್ರತಿನಿಧಿಗಳ ಒಕ್ಕೊರಲ ಒತ್ತಾಯವಾಗಿದ್ದರೂ ಸರ್ಕಾರ ಯಾವುದೇ ಕ್ರಮಕೈಗೊಂಡಿಲ್ಲ. ಈ ಬಗ್ಗೆ ನಿರ್ಲಕ್ಷ್ಯ ಮಾಡುತ್ತಾ ಬಂದಿದೆ ಎಂದು ಆರೋಪಿಸಿದ ಕೋಟಾ ಶ್ರೀನಿವಾಸ ಪೂಜಾರಿ, ಪ್ರದೀಪ್‍ಶೆಟ್ಟರ್, ಪ್ರಾಣೇಶ್, ಬಸವರಾಜ್ ಪಾಟೀಲ್ ಯತ್ನಾಳ್ ಮುಂತಾದವರು ಸದನದ ಬಾವಿಗಿಳಿದು ಧರಣಿ ನಡೆಸಿದರು.

ಸ್ವಂತ ಸ್ಥಳೀಯ ಸರ್ಕಾರದಂತೆ ಕೆಲಸ ಮಾಡಲು ಸ್ಥಳೀಯ ಅಂಗನವಾಡಿ, ಕೃಷಿ, ತೋಟಗಾರಿಕೆ, ಪ್ರಾಥಮಿಕ ಶಾಲೆ, ಗ್ರಂಥಾಲಯ, ಕಾರ್ಮಿಕ ಇಲಾಖೆಯ ಪೂರ್ಣ ಜವಾಬ್ದಾರಿ ಸಹಕಾರಿ, ಆರೋಗ್ಯ ಮತ್ತು ನಾಗರಿಕ ಸರಬರಾಜು ಸೇರಿದಂತೆ 29 ವಿಷಯಗಳನ್ನು ಪಂಚಾಯತ್‍ಗಳಿಗೆ ವರ್ಗಾಯಿಸಬೇಕೆಂದು ಆಗ್ರಹಿಸಿದ್ದೆವು.
ಪಂಚಾಯತ್‍ರಾಜ್ ಕಾಯ್ದೆಯಡಿ ಕೆಲಸ ಮಾಡುವ ರಾಜ್ಯಸರ್ಕಾರ ಫಲಾನುಭವಿಗಳ ಆಯ್ಕೆಯನ್ನು ಸರ್ಕಾರಿ ಕಚೇರಿಯಲ್ಲಿ ಮಾಡದೆ ಗ್ರಾಮ ಸಭೆಗಳಲ್ಲಿ ಮಾಡುವಂತೆ ಕೋರಿದ್ದೆವು. ಅಭಿವೃದ್ಧಿ ಅನುಷ್ಠಾನ, ವ್ಯವಸ್ಥೆ ವಿಧಾನಸೌಧದಲ್ಲಿ ಆಗದೆ ಗ್ರಾಮಸೌಧದಲ್ಲಿ ಆಗಬೇಕೆಂದು ಕೋರಿಕೆ ಸಲ್ಲಿಸಿದ್ದೆವು. ಗ್ರಾಮ ಪಂಚಾಯ್ತಿ ಸಭೆಗೆ ಅಧಿಕಾರಿಗಳ ಕಡ್ಡಾಯ ಹಾಜರಾತಿ, ಕೇರಳ ಮಾದರಿಯಲ್ಲಿ ಪಂಚಾಯತ್ ಸದಸ್ಯರ ಗೌರವ ಧನ, ಬಾಕಿ ಉಳಿಸಿಕೊಂಡಿರುವ 6 ಸಾವಿರಕೋಟಿಗೂ ಬಾಕಿಯಿರುವ ತೆರಿಗೆ ಸಂಗ್ರಹಣೆ ಮತ್ತು ವಸೂಲಾತಿ ಸೇರಿದಂತೆ ಅನೇಕ ಅಗತ್ಯ ಬೇಡಿಕೆಗಳ ಬಗ್ಗೆ ಸರ್ಕಾರ ಈ ಕ್ಷಣದವರೆಗೂ ಸ್ಪಂದಿಸಿಲ್ಲ ಎಂದು ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿದರು.

ಎಲ್ಲಾ ಪಕ್ಷಗಳ ಶಾಸಕರು ಒಟ್ಟಾಗಿ ಪಂಚಾಯತ್‍ರಾಜ್ ಸಬಲೀಕರಣಕ್ಕೆ ಪ್ರತಿಭಟನೆ ನಡೆಸಿದರೂ ಸರ್ಕಾರ ಮೌನ ವಹಿಸಿದೆ. ಮುಖ್ಯಮಂತ್ರಿಗಳಿಗೆ, ಪಂಚಾಯತ್ ರಾಜ್ ಸಚಿವರು, ಇಲಾಖೆ ಅಧಿಕಾರಿಗಳ ಜಾಣ ಮೌನ ಅರ್ಥವಾಗುತ್ತಿಲ್ಲ. 3ಎಫ್ ಪಂಚಾಯತ್‍ಗಳಿಗೆ ವರ್ಗಾಯಿಸಿ ಆದೇಶ ಹೊರಡಿಸಬೇಕೆಂದು ಒತ್ತಾಯಿಸಿ ಧರಣಿ ನಡೆಸಿದರು.

ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಪಂಚಾಯತ್‍ರಾಜ್ ಸಚಿವ ಎಚ್.ಕೆ.ಪಾಟೀಲ್, ಕೂಡಲೇ ಸಭೆ ನಡೆಸಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಪಕ್ಷದ ಸದಸ್ಯರು ಧರಣಿ ಹಿಂಪಡೆದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ