ಬೆಂಗಳೂರು, ಫೆ.21-ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರದಲ್ಲಿ ಬಿಬಿಎಂಪಿ ಕಚೇರಿಗೆ ಪೆಟ್ರೋಲ್ ಎರಚಿ ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದ ಕಾಂಗ್ರೆಸ್ ಮುಖಂಡ ನಾರಾಯಣಸ್ವಾಮಿ ಅವರು ಎಲ್ಲೇ ಇದ್ದರೂ ಬಂಧಿಸಿ ಜೈಲಿಗಟ್ಟುವುದಾಗಿ ಗೃಹ ಸಚಿವ ರಾಮಲಿಂಗಾರೆಡ್ಡಿ ಭರವಸೆ ನೀಡಿದ್ದಾರೆ.
ವಿಧಾನಸಭೆಯ ಶೂನ್ಯವೇಳೆಯಲ್ಲಿ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್ ವಿಷಯ ಪ್ರಸ್ತಾಪಿಸಿ ಈ ಸರ್ಕಾರದ ಅವಧಿಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ದಿನಕ್ಕೊಂದು ವಿಷಯಗಳನ್ನು ನಾವಿಲ್ಲಿ ಅನಿವಾರ್ಯವಾಗಿ ಪ್ರಸ್ತಾಪಿಸುವ ಸ್ಥಿತಿ ಬಂದಿದೆ. ನಿನ್ನೆ ಶಾಸಕ ಎನ್.ಎ.ಹ್ಯಾರಿಸ್ ಅವರ ಪುತ್ರ ಮೊಹಮದ್ ನಲಪಾಡ್ ಅವರ ಗೂಂಡಾಗಿರಿಯನ್ನು ಪ್ರಸ್ತಾಪಿಸಿದ್ದೆವು. ಇಂದು ಕಾಂಗ್ರೆಸ್ ನಾಯಕ ನಾರಾಯಣಸ್ವಾಮಿ ಅವರ ಗೂಂಡಾಗಿರಿಯನ್ನು ಪ್ರಸ್ತಾಪಿಸಬೇಕಾಗಿದೆ. ಆತ ಅಕ್ರಮವಾಗಿ ಖಾತೆ ಮಾಡಿಕೊಡಲು ಒತ್ತಾಯಿಸಿ ಬಿಬಿಎಂಪಿ ಕಚೇರಿಗೆ ಬೆಂಕಿ ಹಚ್ಚಲು ಪ್ರಯತ್ನ ಮಾಡಿದ್ದ. ಇಂತಹ ದಬ್ಬಾಳಿಕೆಗಳ ಮೂಲಕ ಚುನಾವಣೆ ವೇಳೆಯಲ್ಲಿ ಜನರನ್ನು ಭಯ ಬೀಳಿಸುವ ಹುನ್ನಾರ ನಡೆದಿದೆ. ಅಲ್ಲಿನ ಬಿಬಿಎಂಪಿ ಅಧಿಕಾರಿಗಳು ದೂರು ನೀಡಲು ಹಿಂಜರಿಯುವ ಅರಾಜಕತೆ ಇದೆ ಎಂದು ಗಂಭೀರ ಆರೋಪ ಮಾಡಿದರು.
ಇದಕ್ಕೆ ಉತ್ತರ ನೀಡಿದ ಸಚಿವ ರಾಮಲಿಂಗಾರೆಡ್ಡಿ, ನಾರಾಯಣಸ್ವಾಮಿ ಎಲ್ಲೇ ಇದ್ದರೂ ಬಂಧಿಸಿ ಕರೆತರಲಾಗುವುದು. ಈ ಹಿಂದೆ ಅವರು ನಮ್ಮ ಪಕ್ಷದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಈಗ ಆ ಹುದ್ದೆಯಲ್ಲಿ ಇಲ್ಲ. ಇಂತಹ ಘಟನೆಗಳು ನಡೆದಾಗ ಅಧಿಕಾರಿಗಳು ದೂರು ನೀಡಬೇಕು. ಸ್ಥಳೀಯ ಪಿಎಸ್ಐ ಕೇಸು ದಾಖಲಿಸದೇ ಇದ್ದರೆ ಮೇಲಾಧಿಕಾರಿಗಳಿಗೆ ದೂರು ನೀಡಬೇಕಿತ್ತು ಅಥವಾ ನ್ಯಾಯಾಲಯದಲ್ಲಿ ಖಾಸಗಿ ಮೊಕದ್ದಮೆ ದಾಖಲಿಸಲು ಅವಕಾಶವಿತ್ತು. ಆ ರೀತಿ ಮಾಡದೇ ಇರುವುದು ತಪ್ಪು. ದೂರು ನೀಡದೆ ನಿರ್ಲಕ್ಷ್ಯ ವಹಿಸಿದ ಬಿಬಿಎಂಪಿ ಅಧಿಕಾರಿಯನ್ನು ಅಮಾನತು ಮಾಡಲು ಸೂಚನೆ ನೀಡಿದ್ದೇನೆ ಎಂದರು.
ಇದಕ್ಕೆ ಬಿಜೆಪಿಯ ಸುರೇಶ್ಕುಮಾರ್, ವೈ.ಎ.ನಾರಾಯಣಸ್ವಾಮಿ, ಕೆ.ಜಿ.ಬೋಪಯ್ಯ ಅವರು ವಿರೋಧ ವ್ಯಕ್ತಪಡಿಸಿದಾಗ, ಅಮಾನತು ಮಾಡುವುದು ಬೇಡ ಎನ್ನುವುದಾದರೆ ನನ್ನದೇನು ಅಭ್ಯಂತರವಿಲ್ಲ ಎಂದು ರಾಮಲಿಂಗಾರೆಡ್ಡಿ ಹೇಳಿದರು.
ಈ ಹಿಂದೆ ದೂರು ನೀಡಿದ ಸರ್ಕಾರಿ ಅಧಿಕಾರಿಗಳಾದ ರಶ್ಮಿ ಮಹೇಶ್, ಶಿಖಾ, ಅನುಪಮಾ ಶಣೈ ಅವರ ಸ್ಥಿತಿಗಳು ಏನಾಗಿವೆ ಎಂಬುದು ನಮ್ಮ ಕಣ್ಣೆದುರೇ ಇವೆ ಎಂದು ಶಾಸಕ ವೈ.ಎ.ನಾರಾಯಣಸ್ವಾಮಿ ಹೇಳಿದರು.
ಹಿರಿಯ ಶಾಸಕ ಸುರೇಶ್ಕುಮಾರ್ ಅವರು, ಯಾವುದೇ ಕಾರಣಕ್ಕೂ ನಾರಾಯಣಸ್ವಾಮಿಯಂಥವರನ್ನು ಸಮರ್ಥಿಸಿಕೊಳ್ಳಬೇಡಿ ಎಂದು ಮನವಿ ಮಾಡಿದರು.
ಇತ್ತೀಚೆಗೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಅವಾಂತರ ಹೆಚ್ಚಾಗುತ್ತಿದೆ. ತಮ್ಮ ಕಾರ್ಯಕರ್ತರನ್ನು ನಿಯಂತ್ರಿಸಲು ಕಾಂಗ್ರೆಸ್ ವಿಫಲವಾಗಿದೆ ಎಂದರು.
ಕೆ.ಜಿ.ಬೋಪಯ್ಯ ಮಾನತಾಡಿ, ಸರ್ಕಾರಿ ಕಚೇರಿಗೆ ಬೆಂಕಿ ಹಚ್ಚಲು ಯತ್ನಿಸಿದ ನಾರಾಯಣಸ್ವಾಮಿ ತಮ್ಮ ಕೃತ್ಯವನ್ನು ಸಮರ್ಥಿಸಿಕೊಂಡಿದ್ದಾರೆ. ಅವರಿಗೆ ಯಾವುದೇ ಕಾನೂನಿನ ಭಯವಿಲ್ಲ ಎಂದು ಹೇಳಿದರು.
ಸಚಿವ ರಾಮಲಿಂಗಾರೆಡ್ಡಿ ಸರ್ಕಾರ ಯಾವುದೇ ಮುಲಾಜಿಲ್ಲದೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ ಎಂದು ಸ್ಪಷ್ಟಪಡಿಸಿದರು.