ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅನುಮತಿ

ಬೆಂಗಳೂರು, ಫೆ.21-ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಪೈಕಿ 262 ಹುದ್ದೆಗಳನ್ನು ಭರ್ತಿ ಮಾಡಲು ಅನುಮತಿ ನೀಡಲಾಗಿದೆ. ಆದ್ಯತೆ ಮೇರೆಗೆ ಬಂಡೀಪುರ ಮತ್ತು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಅರಣ್ಯ ಸಂರಕ್ಷಕರ ಹುದ್ದೆಯನ್ನು ಭರ್ತಿ ಮಾಡಲು ಕ್ರಮಕೈಗೊಳ್ಳಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ವಿಧಾನಪರಿಷತ್‍ಗೆ ತಿಳಿಸಿದರು.

ಜೆಡಿಎಸ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಅವರ ಪ್ರಶ್ನೆಗೆ ಅರಣ್ಯ ಸಚಿವ ರಮಾನಾಥ್ ರೈ ಪರವಾಗಿ ಉತ್ತರಿಸಿದ ಸಚಿವರು, ಅರಣ್ಯ ಇಲಾಖೆಯಲ್ಲಿ ಒಟ್ಟಾರೆ 3,085 ಹುದ್ದೆಗಳನ್ನು ಹೊಸದಾಗಿ ಸೃಷ್ಟಿಸಿ ಭರ್ತಿ ಮಾಡಲು ಸರ್ಕಾರ ಅನುಮತಿ ನೀಡಿದೆ. ಹಂತ ಹಂತವಾಗಿ ಆದ್ಯತೆ ಮೇರೆಗೆ ಹುದ್ದೆಗಳನ್ನು ನೇಮಕ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. 2018-19ನೆ ಸಾಲಿನಲ್ಲಿ 143 ಉಪವಲಯ ಅರಣ್ಯಾಧಿಕಾರಿ, 119 ಅರಣ್ಯ ರಕ್ಷಕ ಹುದ್ದೆ ಸೇರಿದಂತೆ 262 ಹುದ್ದೆಗಳನ್ನು ಶೀಘ್ರದಲ್ಲೇ ನೇಮಕ ಮಾಡಿಕೊಳ್ಳಲಾಗುವುದು ಎಂದು ಅವರು ಹೇಳಿದರು.

ಕಳೆದ ಸಾಲಿನಲ್ಲಿ ಬಂಡೀಪುರ-ನಾಗರಹೊಳೆ ರಾಷ್ಟ್ರೀಯ ಉದ್ಯಾನವನಗಳು ಸೇರಿದಂತೆ 100 ಉಪವಲಯ ಅರಣ್ಯಾಧಿಕಾರಿ, 35 ಅರಣ್ಯ ರಕ್ಷಕ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲಾಗಿತ್ತು ಎಂದು ಸಚಿವರು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ