
ಚಿಕ್ಕಮಗಳೂರು, ಫೆ.18- ಮನುಷ್ಯನ ಬದುಕಿನಲ್ಲಿ ವಿವಾಹ ಅತ್ಯಂತ ಶ್ರೇಷ್ಠವಾದ ಹಾಗೂ ಪ್ರತಿಷ್ಟೆಯ ವಿಚಾರವೂ ಆಗಿದೆ. ಇಂತಹ ವಿವಾಹಕ್ಕೆ ದುಂದುವೆಚ್ಚ ಮಾಡುವ ಬದಲು ಸರಳವಾಗಿ ಆಚರಿಸುವುದು ಉತ್ತಮ ಎಂದು ಮಾಜಿ ಸಭಾಪತಿ ಡಾ. ಬಿ.ಎಲ್.ಶಂಕರ್ ಹೇಳಿದರು.
ನಗರದ ಸೀತಾ ದಯಾನಂದ ಫೈ ಕಲ್ಯಾಣ ಮಂಟಪದಲ್ಲಿ ಅಲ್ ವಫಾ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಮತ್ತು ಚಿಕ್ಕಮಗಳೂರು ಜಿಲ್ಲಾ ಬ್ಯಾರೀಗಳ ಒಕ್ಕೂಟ ಹಮ್ಮಿಕೊಂಡಿದ್ದ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.
ದುಡಿಯುವ ವರ್ಗದ ಜನರು ಇಂದಿನ ಕಾಲ ಘಟ್ಟದಲ್ಲಿ ಯಾವುದೇ ಕಾರ್ಯವನ್ನು ನಡೆಸಲು ಕಂಗಾಲಾಗುವ ಪರಿಸ್ಥಿತಿ ಇದೆ. ಅಗತ್ಯ ವಸ್ತುಗಳು, ಆಹಾರ ಪದಾರ್ಥಗಳ ಬೆಲೆ ಏರಿಕೆಯ ನಡುವೆ ಬದುಕುವುದು ದುಸ್ತರವಾಗಿರುವಾಗ ಅತ್ಯಂತ ಸರಳ ವಿವಾಹಗಳಿಂದ ಕುಟುಂಬದ ಮೇಲಿನ ಹೊರೆ ಕಡಿಮೆಯಾಗುತ್ತದೆ ಎಂದು ತಿಳಿಸಿದರು.
ಕೇಂದ್ರದ ಮಾಜಿ ಸಚಿವೆ ಡಿ.ಕೆ. ತಾರಾದೇವಿ ಸಿದ್ದಾರ್ಥ ಮಾತನಾಡಿ, ವರದಕ್ಷಿಣೆ ಕೊಟ್ಟು ಅದ್ಧೂರಿ ವಿವಾಹಕ್ಕೆ ದುಂದು ವೆಚ್ಚ ಮಾಡುವುದು ಸರಿಯಲ್ಲ. ಕುಟುಂಬಗಳಿಗೆ ಹೊರೆಯಾಗುವಂತೆ ವಿವಾಹ ಮಾಡುವ ಬದಲು ಸರಳವಾಗಿ, ಸಾಮೂಹಿಕವಾಗಿ ವಿವಾಹ ನಡೆಸುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದು ನುಡಿದರು.
ಎಂಎಲ್‍ಸಿ ಡಾ. ಮೋಟಮ್ಮ ಮಾತನಾಡಿ, ಬದುಕಿನಲ್ಲಿ ಆಡಂಬರದ ಜೀವನ ನಡೆಸಬಾರದು. ಸಮಾಜದಲ್ಲಿ ಉತ್ತಮರಾಗಿ ಬದುಕಲು ಶಿಕ್ಷಣ ಅಗತ್ಯ. ಎಲ್ಲರೂ ತಮ್ಮ ಮಕ್ಕಳನ್ನು ಸುಶಿಕ್ಷಿತರನ್ನಾಗಿ ಮಾಡಬೇಕು ಎಂದ ರು.
ಚಿಕ್ಕಮಗಳೂರು ಅಲ್ ಬದ್ರಿಯಾ ಜುಮಾ ಮಸೀದಿ ಖತೀಬರಾದ ಮೌಲಾನಾ ಹುಸೈನ್ ಸದಿ ಹೊಸ್ಮಾರ್ ಮಾತನಾಡಿ, ವಿವಾಹ ಕಾರ್ಯಗಳಿಗೆ ಸಹಿತ ಮತ್ತಿತರೆ ಕೆಲಸಗಳಿಗೆ ಅನಗತ್ಯ ದುಂದು ವೆಚ್ಚಮಾಡಿ ನಷ್ಟ ಅನುಭವಿಸಬೇಡಿ. ಹಣವಂತರಿದ್ದರೆ ಬಡವರ ಮಕ್ಕಳ ವಿವಾಹ ಕಾರ್ಯ ಹಾಗೂ ಶಿಕ್ಷಣಕ್ಕೆ ಬಳಕೆ ಮಾಡುವುದು ಕಡ್ಡಾಯವಾಗಿದೆ ಎಂದು ತಿಳಿಸಿದರು.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕೆ.ಮುಹಮ್ಮದ್ ಹಾಗೂ ಅಲ್ ವಫಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಜಿ.ಮೊಹಮ್ಮದ್ ಹನೀಫ್‍ರನ್ನು ಇದೇ ವೇಳೆ ಸನ್ಮಾನಿಸಲಾಯಿತು.
ಮಸ್ಜಿದ್ ಎ ಆಝಂ ಪೇಶ್ ಇಮಾಮ್ ಮೌಲಾನಾ ಮೌಲ್ವಿ ಔರಂಗಜೇಜ್ ಸಾಹೀಬ್, ಅರಣ್ಯ ವಸತಿ ವಿಹರಧಾಮದ ಅಧ್ಯಕ್ಷ ಎ.ಎನ್.ಮಹೇಶ್, ಮಾಜಿ ಎಂಎಲ್‍ಸಿ ಎ.ವಿ.ಗಾಯತ್ರಿ ಶಾಂತೇಗೌಡ, ಮಾಜಿ ಶಾಸಕರು ಕೆ.ಬಿ.ಮಲ್ಲಿಕಾರ್ಜುನ, ಡಿಸಿಸಿ ಅಧ್ಯಕ್ಷ ಡಾ.ಡಿ.ಎಲ್.ವಿಜಯಕುಮಾರ್, ಜೆಡಿಎಸ್ ಉಪಾಧ್ಯಕ್ಷ ಎಸ್.ಎಲ್.ಬೋಜೇಗೌಡ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಲ್.ಮೂರ್ತಿ, ಬಿಎಸ್‍ಪಿ ಕೆ.ಟಿ.ರಾಧಕೃಷ್ಣ, ಸಿಪಿಐ ಮುಖಂಡ ಬಿ.ಅಮ್ಜದ್ ಮತ್ತಿತರರಿದ್ದರು.
(ಪ್ರಾತಿನಿಧ್ಯಕ್ಕಾಗಿ ಮಾತ್ರ ಪೋಸ್ಟ್ ಮಾಡಲಾದ ಫೋಟೋ, ಮೂಲವಲ್ಲ)