ತುಮಕೂರು, ಫೆ.16-ತಿಪಟೂರಿನ ಉಪ ಕಾರಾಗೃಹದಲ್ಲಿ ಕೈದಿಗಳು ನಡೆಸಿದ್ದ ದಾಂಧಲೆ ಪ್ರಕರಣ ಸಂಬಂಧ ಎಐಜಿ ವೀರಭದ್ರಸ್ವಾಮಿ ಅವರು ಬಂಧೀಖಾನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಜೈಲು ಅಧಿಕಾರಿಗಳು ಮತ್ತು ಪೆÇಲೀಸರಿಂದ ಮಾಹಿತಿ ಪಡೆದಿದ್ದಾರೆ.
ಎಡಿಜಿಪಿ ಮೆಘರಿಕ್ ಅವರಿಗೆ ಇಂದು ಎಐಜಿ ಅವರು ಮಾಹಿತಿಯನ್ನು ರವಾನಿಸಲಿದ್ದಾರೆಂದು ಮೂಲಗಳು ತಿಳಿಸಿವೆ.
ಅಧಿಕಾರಿಗಳಿಂದ ಮಾಹಿತಿ ಪಡೆಯುವ ವೇಳೆ ಉಪಕಾರಾಗೃಹದ ಸೂಪರಿಟೆಂಡೆಂಟ್ ಮಹಮ್ಮದ್ ಖಾನ್ ಎಂಬುವರನ್ನು ತೀವ್ರ ತರಾಟೆ ತೆಗೆದುಕೊಂಡಿದ್ದಾರೆ.
ಜೈಲಿನೊಳಗೆ ಕೈದಿಗಳಿಗೆ ಮದ್ಯ ಹೇಗೆ ಸರಬರಾಜಾಯ್ತು ? ಕೈದಿಗಳ ಜತೆಗೂಡಿ ಮದ್ಯಪಾನ ಮಾಡಲು ನಾಚಿಕೆಯಾಗಲಿಲ್ಲವೇ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಜೈಲು ಸಿಬ್ಬಂದಿಗಳ ವಿರುದ್ದ ಗರಂ ಆಗಿರುವ ಅವರು, ಜೈಲಿನ ಒಳಗೆ ಮದ್ಯಪಾನ ಸೇರಿದಂತೆ ಕೆಲವು ಕೈದಿಗಳಿಗೆ ಐಷಾರಾಮಿ ಊಟ ಸರಬರಾಜಾಗುತ್ತಿತ್ತು. ತಂಬಾಕು ಪದಾರ್ಥಗಳು ಸರಬರಾಜು ಆಗುತ್ತಿವೆ ಎಂಬ ಹಲವು ಆರೋಪಗಳು ಕೇಳಿ ಬಂದಿವೆ.
ಕುಡಿದ ಮತ್ತಿನಲ್ಲಿ ನಿಮ್ಮ ಮತ್ತು ಕೈದಿಗಳ ನಡುವೆ ಮಾರಾಮಾರಿ ನಡೆದಿವೆ. ಇಷ್ಟೆಲ್ಲಾ ಅವಕಾಶ ಕೊಟ್ಟಿರುವುದು ಸರಿಯೇ? ಇದು ಇಲಾಖೆಯೇ ತಲೆತಗ್ಗಿಸುವಂತಹ ವಿಚಾರ ಎಂಬ ಬೇಸರ ವ್ಯಕ್ತಪಡಿಸಿದರು.
(ಪ್ರಾತಿನಿಧ್ಯಕ್ಕಾಗಿ ಮಾತ್ರ ಪೋಸ್ಟ್ ಮಾಡಲಾದ ಫೋಟೋ, ಮೂಲವಲ್ಲ)