ಸ್ವಚ್ಚಮಾಡುವ ಪೌರ ಕಾರ್ಮಿಕರನ್ನು ಖಾಯಂ ಮಾಡಲು ಸರ್ಕಾರ ಮುಂದಾಗಿದ್ದು ಬಡವರ ಅಭ್ಯುದಯಕ್ಕೆ ಕಂಕಣಬದ್ಧವಾಗಿದೆ – ಕೆ.ಜೆ.ಜಾರ್ಜ್

ಕೆಂಗೇರಿ, ಫೆ.16-ನಗರವನ್ನು ಸ್ವಚ್ಚಮಾಡುವ ಪೌರ ಕಾರ್ಮಿಕರನ್ನು ಖಾಯಂ ಮಾಡಿ ನೇರವಾಗಿ ಅವರ ಖಾತೆಗೆ ಹಣ ಜಮಾವಣೆ ಮಾಡಲು ಸರ್ಕಾರ ಮುಂದಾಗಿದ್ದು ಬಡವರ ಅಭ್ಯುದಯಕ್ಕೆ ಕಂಕಣಬದ್ಧವಾಗಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.

ಮೈಸೂರು ರಸ್ತೆಯ ಪಟ್ಟಣಗೆರೆ ಸಮೀಪ ವೃಷಾಭಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ 4.82 ಕೋಟಿ ವೆಚ್ಚದ ಮೇಲ್ಸತುವೆಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಪಾಲಿಕೆ ವ್ಯಾಪ್ತಿಯ 110 ಹಳ್ಳಿಗಳು ಕುಡಿಯುವ ನೀರು, ರಸ್ತೆ, ಒಳಚರಂಡಿ ಸೇರಿದಂತೆ ಹಲವು ಅಭಿವೃದ್ಧಿಯಿಂದ ವಂಚಿತವಾಗಿದ್ದು, ಎಲ್ಲಾ ಗ್ರಾಮ ಹಾಗೂ ಈ ಮೊದಲಿನ ಪಾಲಿಕೆ ವ್ಯಾಪ್ತಿ ಪ್ರದೇಶಗಳ ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹನ್ನೊಂದು ಸಾವಿರ ಕೋಟಿ ಹಣ ನೀಡಿದ್ದರಿಂದ ಸಂಪೂರ್ಣವಾಗಿ ಒಳಚರಂಡಿ, ಕಾವೇರಿ ನೀರು ಸರಬರಾಜು ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

ಉಪನಗರ ರೈಲ್ವೆ ಯೋಜನೆಗೆ 17 ಸಾವಿರ ಕೋಟಿ ಹಣ ನೀಡುತ್ತೇನೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾಷಣ ಮಾಡಿ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಾರೆ. ಆದರೆ ಕೇವಲ 1 ಕೋಟಿ ಹಣ ಬಿಡುಗಡೆ ಮಾಡಿ ಸುಳ್ಳು ಭರವಸೆ ನೀಡಿದ್ದಾರೆ ಎಂದು ಅವರು ಆರೋಪಿಸಿದರು.
ಶಾಸಕ ಎಸ್.ಟಿ.ಸೋಮಶೇಖರ್ ಮಾತನಾಡಿ, ಮಳೆ ಬಂದಾಗ ವೃಷಾಭವತಿ ನದಿ ಉಕ್ಕಿ ಹರಿದು ಪಟ್ಟಣಗೆರೆ ಬಿ.ಎಚ್.ಇ.ಎಲ್ ರಾಜರಾಜೇಶ್ವರಿನಗರ ಪ್ರದೇಶದ ನಾಗರೀಕರಿಗೆ ತೊಂದರೆ ಉಂಟಾಗುತ್ತಿತ್ತು. ಸರ್ಕಾರದ ಹೆಚ್ಚುವರಿ ಅನುದಾನದಿಂದ ಶೀಘ್ರ ಕಾಮಗಾರಿಯನ್ನು ಕೈಗೆತ್ತಿಕೊಂಡು ಕೇವಲ 2ವರ್ಷದ ಅವದಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಿ ಬಡಾವಣೆಯ ಎಲ್ಲರಿಗೂ ಅನುಕೂಲ ಕಲ್ಪಿಸಲಾಗಿದೆ ಎಂದರು.

ಮೇಯರ್ ಆರ್.ಸಂಪತ್‍ರಾಜ್, ಸ್ಥಳೀಯ ಬಿಬಿಎಂಪಿ ಸದಸ್ಯರಾದ ಆರ್ಯಶ್ರೀನಿವಾಸ್, ರಾಜಣ್ಣ, ಜಂಟಿ ಆಯುಕ್ತ ಡಾ.ಎಂ.ಹೆಚ್.ತಿಪ್ಪೇಸ್ವಾಮಿ, ಪಟ್ಟಣಗೆರೆ ಜಯಣ್ಣ, ವಾರ್ಡ್ ಅಧ್ಯಕ್ಷ ಮೈಲಸಂದ್ರನಾಗರಾಜ್, ಉಪಾಧ್ಯಕ್ಷ ಕಿರಣ್ ಕುಮಾರ್ ಮತ್ತಿತರಿದ್ದರು.

 

(ಪ್ರಾತಿನಿಧ್ಯಕ್ಕಾಗಿ ಮಾತ್ರ ಪೋಸ್ಟ್ ಮಾಡಲಾದ ಫೋಟೋ, ಮೂಲವಲ್ಲ)

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ