ಬೆಂಗಳೂರು, ಫೆ.15- ವಿದ್ಯಾರ್ಥಿಗಳ ಜತೆ ಅನುಚಿತವಾಗಿ ವರ್ತಿಸುವುದರ ಜತೆಗೆ ಶೋಷಣೆ ಮಾಡುತ್ತಿದ್ದ ಬಿಬಿಎಂಪಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿಯೊಬ್ಬರು ಅಮಾನತುಗೊಂಡಿದ್ದಾರೆ.
ಲಕ್ಕಸಂದ್ರ ವಾರ್ಡ್ನಲ್ಲಿರುವ ಪಾಲಿಕೆ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಸುಲೋಚನಾ ಅಮಾನತುಗೊಂಡವರು.
ಸುಲೋಚನಾ ಪಾಠ ಮಾಡುವಾಗ ವಿದ್ಯಾರ್ಥಿಗಳನ್ನು ಮನಬಂದಂತೆ ದಂಡಿಸುತ್ತಿದ್ದರು ಮಾತ್ರವಲ್ಲ, ಮಕ್ಕಳಿಂದ ಮನೆ ಕೆಲಸ ಮಾಡಿಸಿಕೊಳ್ಳುವುದು, ಉಚಿತ ಶೂ, ಸಮವಸ್ತ್ರ ವಿತರಣೆ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ತಲಾ 50ರೂ. ವಸೂಲಿ ಮಾಡುತ್ತಿದ್ದ ಬಗ್ಗೆ ಆರೋಪಗಳು ಕೇಳಿಬಂದಿದ್ದವು.
ಅಲ್ಲದೆ, ವಿದ್ಯಾರ್ಥಿಗಳನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿ ತಮ್ಮ ಮೊಮ್ಮಕ್ಕಳ ಆರೈಕೆ ಮಾಡಿಸಿಕೊಳ್ಳುವುದು, ಪಾತ್ರೆ ತೊಳೆಸುವುದು, ಕಾಲು ಒತ್ತಿಸಿಕೊಳ್ಳುತ್ತಿದ್ದರು.
ಮಕ್ಕಳ ಅಂಗಿ ಮತ್ತು ಚಡ್ಡಿ ತೆಗಿಸಿ ಭಾವಚಿತ್ರ ತೆಗೆಸಿ ಭಾವಚಿತ್ರ ತೆಗೆದು ಅನುಚಿತವಾಗಿ ವರ್ತಿಸುತ್ತಿದ್ದುದು ಸೇರಿದಂತೆ ಇನ್ನಿತರ ಹಲವಾರು ಶೋಷಣೆ ಮಾಡುತ್ತಿದ್ದರು ಎನ್ನಲಾಗಿದೆ.
ಶಿಕ್ಷಕಿ ವಿರುದ್ಧದ ಆರೋಪ ಕುರಿತಂತೆ ತನಿಖೆ ನಡೆಸಿದಾಗ ಸುಲೋಚನಾ ಅವರು ವಿದ್ಯಾರ್ಥಿಗಳನ್ನು ಶೋಷಣೆ ಮಾಡಿ ಹಿಂಸಿಸುತ್ತಿದ್ದುದು ಸಾಬೀತಾಗಿತ್ತು.
ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರು ತಮ್ಮ ಅಧಿಕಾರ ಬಳಸಿ ಸರ್ಕಾರಿ ನಿಯಮಾವಳಿ ಪ್ರಕಾರ ಮುಖ್ಯ ಶಿಕ್ಷಕಿ ಸುಲೋಚನಾ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.