ಹತ್ತು ಹಲವು ಮಹತ್ವದ ಯೋಜನೆಗಳನ್ನು ಘೋಷಣೆ ಮಾಡುವ ನಿರೀಕ್ಷೆಯ ಜನಾಕರ್ಷಕವಾಗುವ ರಾಜ್ಯ ಬಜೆಟ್ ನಾಳೆ ಮಂಡನೆಯಾಗಲಿದೆ

ಬೆಂಗಳೂರು, ಫೆ.15- ಸಹಕಾರಿ ಸಂಘಗಳಲ್ಲಿ ರೈತರು ಪಡೆದಿರುವ ಬೆಳೆ ಸಾಲ ಸಂಪೂರ್ಣ ಮನ್ನಾ, ಸರ್ಕಾರಿ ನೌಕರರ ವೇತನ ಹೆಚ್ಚಳ, ಸಾರ್ವತ್ರಿಕ ಆರೋಗ್ಯ ವಿಮೆ, ಹಿರಿಯ ನಾಗರಿಕರ ಪಿಂಚಣಿ ಏರಿಕೆ, ಕೃಷಿ ಉತ್ಪನ್ನಗಳ ಬೆಲೆ ಹೆಚ್ಚಳಕ್ಕೆ ಒತ್ತು, ವಸ್ತ್ರ ಭಾಗ್ಯ ಯೋಜನೆ ಸೇರಿದಂತೆ ಹತ್ತು ಹಲವು ಮಹತ್ವದ ಯೋಜನೆಗಳನ್ನು ಘೋಷಣೆ ಮಾಡುವ ನಿರೀಕ್ಷೆಯ ಜನಾಕರ್ಷಕವಾಗುವ ರಾಜ್ಯ ಬಜೆಟ್ ನಾಳೆ ಮಂಡನೆಯಾಗಲಿದೆ.

ಬರಲಿರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮತದಾರರು ಹಾಗೂ ಸರ್ಕಾರಿ ನೌಕರರನ್ನು ಓಲೈಸಲು ಮುಂದಾಗಿರುವ, ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ 6ನೇ ಹಾಗೂ ಹಣಕಾಸು ಸಚಿವರಾಗಿ 13ನೇ ಬಜೆಟ್ ಮಂಡಿಸಲಿದ್ದಾರೆ.

ನಾಳೆ ಬೆಳಗ್ಗೆ 11.30ಕ್ಕೆ ಸರಿಯಾಗಿ ವಿಧಾನಸಭೆಯಲ್ಲಿ 2018-19ನೇ ಸಾಲಿನ ಹಾಗೂ ಆಡಳಿತಾರೂಢ ಸರ್ಕಾರದ ಕೊನೆಯ ಬಜೆಟ್ ಮಂಡಿಸಲಿರುವ ಸಿದ್ದರಾಮಯ್ಯ ರಾಜ್ಯದಲ್ಲಿ ಅತಿಹೆಚ್ಚು ಬಜೆಟ್ ಮಂಡಿಸಿದ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಈ ಹಿಂದೆ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು 12 ಬಜೆಟ್ ಮಂಡಿಸಿದ್ದರು.

ಜನಪರ ಯೋಜನೆಗಳಿಗೆ ಮಣೆ:
ನಾಳೆ ಮಂಡನೆಯಾಗಲಿರುವ ಬಹುನಿರೀಕ್ಷಿತ ಬಜೆಟ್‍ನಲ್ಲಿ ಸಿದ್ದರಾಮಯ್ಯನವರು ವಿಶೇಷವಾಗಿ ದೊಡ್ಡ ಸಂಖ್ಯೆಯಲ್ಲಿರುವ ಕೃಷಿಕರು, ಬಡವರು, ಮಧ್ಯಮವರ್ಗದವರು ಹಾಗೂ ಸರ್ಕಾರಿ ನೌಕರರನ್ನು ಗಮನದಲ್ಲಿಟ್ಟುಕೊಂಡು ವಿಶೇಷ ಯೋಜನೆಗಳನ್ನು ಪ್ರಕಟಿಸಲಿದ್ದಾರೆ.

ಕಳೆದ ಸಾಲಿನಲ್ಲಿ 1,86,561 ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಿದ್ದ ಅವರು ಈ ಬಾರಿ ಶೇ.20ರಷ್ಟು ಅಂದರೆ ಸುಮಾರು 2,20,000 ಕೋಟಿ ರೂ. ಗಾತ್ರದ ಬಜೆಟ್ ಮಂಡಿಸುವ ಮೂಲಕ ಮತ್ತೊಂದು ದಾಖಲೆ ಬರೆಯಲಿದ್ದಾರೆ.
ಉಳಿದಂತೆ ಬಿಪಿಎಲ್ ಮತ್ತು ಎಪಿಎಲ್ ಕಾರ್ಡುದಾರರಿಗೆ ಐದು ಲಕ್ಷದವರೆಗೆ ಉಚಿತ ಚಿಕಿತ್ಸೆ ನೀಡಲು ವಿಶೇಷ ಅನುದಾನ, ಹಿರಿಯ ನಾಗರಿಕರಿಗಾಗಿ ವಸ್ತ್ರ ಭಾಗ್ಯ, ಅಂತರ್ಜಾತಿ ವಿವಾಹವಾಗುವ ಯುವಕ, ಯುವತಿಯರಿಗೆ ಪೆÇ್ರೀ ಧನವಾಗಿ ಮೂರು ಲಕ್ಷ ರೂ, ವಿದ್ಯಾರ್ಥಿ ವೇತನ ಹೆಚ್ಚಳ, ರಿಯಾಯ್ತಿ ಬಸ್ ಪಾಸ್ ಮೊದಲಾದ ಯೋಜನೆಗಳು ಘೋಷಣೆಯಾಗಲಿದೆ.
ಸಹಕಾರಿ ಸಂಘಗಳಲ್ಲಿ ರೈತರು ಪಡೆದಿರುವ ಬೆಳೆ ಸಾಲವನ್ನು ಮನ್ನಾ ಮಾಡುವ ಯೋಜನೆಯೂ ಸಹ ನಾಳೆ ಘೋಷಣೆಯಾಗಲಿದೆ. ಈ ಹಿಂದೆ 25,000 ರೂ.ಗಳವರೆಗೆ ಸಾಲವನ್ನು ಮನ್ನಾ ಮಾಡಲಾಗಿತ್ತು.

ವಿಧಾನಸಭೆ ಚುನಾವಣೆ ಸಮೀಪಿಸುತ್ತರುವ ಹಿನ್ನೆಲೆಯಲ್ಲಿ ರೈತಾಪಿ ವರ್ಗವನ್ನು ಸಂತೃಪ್ತಿಗೊಳಿಸಲು ಮುಂದಾಗಿರುವ ಮುಖ್ಯಮಂತ್ರಿಗಳು ಸಹಕಾರಿ ಸಂಘಗಳಲ್ಲಿರುವ ಸಾಲವನ್ನು ಪೂರ್ಣ ಪ್ರಮಾಣದಲ್ಲಿ ಮನ್ನಾ ಮಾಡಲಿದ್ದಾರೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಸುಮಾರು 15ರಿಂದ 18 ಸಾವಿರ ಕೋಟಿ ಹೆಚ್ಚಿನ ಹೊರೆಯಾಗಲಿದೆ ಎಂದು ತಿಳಿದುಬಂದಿದೆ.
ಕೃಷಿಕರನ್ನು ಸಂತೃಪ್ತಿಗೊಳಿಸಿದ ಬೆನ್ನಲ್ಲೇ ಅತಿಹೆಚ್ಚಿನ ಸಂಖ್ಯೆಯಲ್ಲಿರುವ ಸರ್ಕಾರಿ ನೌಕರರ ಮೂಗಿಗೆ ತುಪ್ಪ ಸವರಲಿದ್ದಾರೆ. ಕೆಲ ದಿನಗಳ ಹಿಂದಷ್ಟೇ ನಿವೃತ್ತ ಐಎಎಸ್ ಅಧಿಕಾರಿ ಡಾ.ಶ್ರೀನಿವಾಸ್ ಮೂರ್ತಿ ಸಮಿತಿಯು ನೀಡಿದ್ದ 6ನೇ ವೇತನ ಆಯೋಗದ ವರದಿಯ ಶಿಫಾರಸ್ಸುಗಳನ್ನು ಅನುಷ್ಠಾನ ಮಾಡುವ ಘೋಷಣೆಯೂ ಪ್ರಕಟವಾಗಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಸರ್ಕಾರಿ ನೌಕರರ ವೇತನವನ್ನು ಶೇ.30ರಷ್ಟು ಹೆಚ್ಚಳ ಮಾಡುವಂತೆ ವರದಿಯು ಶಿಫಾರಸು ಮಾಡಿತ್ತು. ಇದನ್ನು ಯಥಾವತ್ತಾಗಿ ಕಾರ್ಯಗತಗೊಳಿಸಲು ಸರ್ಕಾರ ತೀರ್ಮಾನಿಸಿದೆ.

ಇದರಿಂದ ವಾರ್ಷಿಕವಾಗಿ ಸರ್ಕಾರದ ಬೊಕ್ಕಸಕ್ಕೆ 10 ರಿಂದ 11 ಸಾವಿರ ಕೋಟಿ ರೂ. ಹೆಚ್ಚುವರಿ ಹೊರೆಯಾಗಲಿದೆ. ಚುನಾವಣಾ ವರ್ಷವಾಗಿರುವುದರಿಂದ ನೌಕರರನ್ನು ಸಹ ತೃಪ್ತಿಗೊಳಿಸುವುದು ಸರ್ಕಾರದ ಉದ್ದೇಶವಾಗಿದೆ.

ಅನುದಾನ ಕಡಿತ:

ಜನಪ್ರಿಯ ಯೋಜನೆಗೆ ಈ ಬಜೆಟ್‍ನಲ್ಲಿ ಒತ್ತು ನೀಡುತ್ತಿರುವುದರಿಂದ ಪ್ರಮುಖ ಇಲಾಖೆಗಳಿಗೆ ನೀಡುತ್ತಿರುವ ಅನುದಾನವನ್ನು ಈ ಬಾರಿ ತುಸು ಅಲ್ಪ ಪ್ರಮಾಣದಲ್ಲಿ ಕಡಿತಗೊಳಿಸುವ ತೀರ್ಮಾನಕ್ಕೆ ಬರಲಾಗಿದೆ. ಈಗಾಗಲೇ ಬಜೆಟ್ ಪೂರ್ವ ಸಭೆಯಲ್ಲಿ ಸಂಬಂಧಪಟ್ಟ ಸಚಿವರಿಗೆ ಈ ಬಗ್ಗೆ ಖುದ್ದು ಮುಖ್ಯಮಂತ್ರಿಗಳೇ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಮುಖ್ಯವಾಗಿ ರಾಜ್ಯ ಸರ್ಕಾರದ ಪ್ರಮುಖ ಯೋಜನೆಯಾದ ಅನ್ನಭಾಗ್ಯ ಯೋಜನೆಗೆ ಸಾವಿರಾರು ಕೋಟಿ ಹಣ ಬೇಕಾಗುತ್ತದೆ. ಇದೇ ರೀತಿ ಕ್ಷೀರಭಾಗ್ಯ, ಶಾದಿಭಾಗ್ಯ, ದಂತಭಾಗ್ಯ, ಪಶುಭಾಗ್ಯ ಸೇರಿದಂತೆ ಕೆಲ ಪ್ರಮುಖ ಯೋಜನೆಗಳು ಮತ್ತು ಕಾರ್ಯಕ್ರಮಗಳಿಗೆ ಹೆಚ್ಚಿನ ಅನುದಾನದ ಅಗತ್ಯವೂ ಇದೆ.

ಹೀಗಾಗಿ ಪ್ರಮುಖ ಇಲಾಖೆಗಳಾದ ಲೋಕೋಪಯೋಗಿ, ನೀರಾವರಿ, ಇಂಧನ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಗೃಹ ಸೇರಿದಂತೆ ಮತ್ತಿತರ ಇಲಾಖೆಗಳಿಗೆ ಅನುದಾನ ಕಡಿತವಾಗುವುದು ಖಚಿತವಾಗಿದೆ.
ಈ ಬಾರಿಯ ಬಜೆಟ್‍ನಲ್ಲಿ ಈರುಳ್ಳಿ , ಟೊಮೋಟೊ, ಆಲೂಗಡ್ಡೆ , ಮೆಣಸಿನಕಾಯಿ ಸೇರಿದಂತೆ ಬೆಲೆ ಕುಸಿತ ಉಂಟಾದಾಗ ಮಾರುಕಟ್ಟೆ ಮಧ್ಯಪ್ರವೇಶಿಸಲು ಆವರ್ತನಿಧಿ ಅನುದಾನವನ್ನು ಹೆಚ್ಚಿಸಲಿದೆ.

ಪಶುಪಾಲನೆ ಮತ್ತು ಕುರಿ ಸಾಕಾಣಿಕೆಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ವಿತರಣೆ, ಸ್ತ್ರೀ ಶಕ್ತಿ ಸಂಘಟನೆಗಳಿಗೆ ಆರ್ಥಿಕ ನೆರವು, ಮಹಿಳೆಯರ ಸಬಲೀಕರಣಕ್ಕೆಒತ್ತು ಸೇರಿದಂತೆ ಎಲ್ಲ ವರ್ಗದವರನ್ನು ಸಂತೃಪ್ತಿಗೊಳಿಸುವ ಬಜೆಟ್ ನಾಳೆ ಮಂಡನೆಯಾಗಲಿದೆ ಎಂದು ತಿಳಿದುಬಂದಿದೆ.

ಕೇಂದ್ರಕ್ಕೆ ತಿರುಗೇಟು:
ಇನ್ನು ಬಜೆಟ್‍ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಾರ್ವತ್ರಿಕ ಆರೋಗ್ಯ ವಿಮೆ ಯೋಜನೆಯನ್ನು ಸಹ ಪ್ರಕಟಿಸಲಿದ್ದಾರೆ. ಕೇಂದ್ರ ಸರ್ಕಾರ ಫೆ.1ರಂದು ಮಂಡಿಸಿದ ಬಜೆಟ್‍ನಲ್ಲಿ ಆರೋಗ್ಯ ಸೇವೆ ಒದಗಿಸುವ ಮೋದಿ ಕೇರ್ ಎಂಬ ಯೋಜನೆಯನ್ನು ಘೋಷಣೆ ಮಾಡಿತ್ತು. ಇದೀಗ ನಾಳಿನ ಬಜೆಟ್‍ನಲ್ಲಿ ರಾಜ್ಯದ ಪ್ರತಿಯೊಬ್ಬರಿಗೂ ಆರೋಗ್ಯ ಸೇವೆ ನೀಡುವ ಸಾರ್ವತ್ರಿಕ ಆರೋಗ್ಯ ಯೋಜನೆ ಘೋಷಿಸುವ ಮೂಲಕ ಕೇಂದ್ರಕ್ಕೆ ತಿರುಗೇಟು ನೀಡಲಿದ್ದಾರೆ.

ಕ್ರೈಸ್ತರ ಅಭಿವೃದ್ದಿ ನಿಗಮ ಸ್ಥಾಪನೆ, ಅಹಿಂದ ವರ್ಗಕ್ಕೆ ಹೆಚ್ಚಿನ ಅನುದಾನ ಸಿಗಲಿದೆ. ಉಳಿದಂತೆ ಶಿಕ್ಷಣ, ಆರೋಗ್ಯ , ಪ್ರವಾಸೋದ್ಯಮ, ಪ್ರಾಥಮಿಕ ಮತ್ತು ಆರೋಗ್ಯ, ಕೈಗಾರಿಕೆ ಸೇರಿದಂತೆ ಮತ್ತಿತರ ಇಲಾಖೆಗಳಿಗೆ ಹೆಚ್ಚಿನ ಅನುದಾನ ಲಭಿಸುವ ನಿರೀಕ್ಷೆಯಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ