ಮುಂಬೈ, ಫೆ.14-ದೇಶದ ವಾಣಿಜ್ಯ ಕ್ಷೇತ್ರವೇ ಬೆಚ್ಚಿಬಿದ್ದಿರುವ ದೊಡ್ಡ ಅಕ್ರಮ ವಹಿವಾಟು ಇದು. ಪಂಜಾಬ್ ನ್ಯಾಷನಲ್ ಬ್ಯಾಂಕ್ನ (ಪಿಎನ್ಬಿ) ಮುಂಬೈ ಶಾಖೆಯೊಂದರಲ್ಲಿ 11,500 ಕೋಟಿ ರೂ.ಗಳ ವಂಚನೆ ಮತ್ತು ಅಕ್ರಮ ವಹಿವಾಟುಗಳು ನಡೆದಿರುವುದು ಬೆಳಕಿಗೆ ಬಂದಿದೆ.
ಕೋಟ್ಯಧಿಪತಿ ಆಭರಣ ವಿನ್ಯಾಸಕ ನೀರವ್ ಮೋದಿ ಮತ್ತು ಪ್ರತಿಷ್ಠಿತ ಆಭರಣ ಸಂಸ್ಥೆಯೊಂದರ ವಿರುದ್ದ ಈ ದೊಡ್ಡಮಟ್ಟದ ವಂಚನೆ ಮತ್ತು ಅವ್ಯವಹಾರಗಳ ಸಂಬಂದ ಪಿಎನ್ಬಿ, ಕೇಂದ್ರೀಯ ತನಿಖಾ ದಳ-ಸಿಬಿಐಗೆ ಎರಡು ದೂರುಗಳನ್ನು ನೀಡಿದ್ದು, ತನಿಖೆ ತೀವ್ರಗೊಂಡಿದೆ.
ತನ್ನ ಶಾಖೆಯಲ್ಲಿ 11,500 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ವಂಚನೆ, ಮೋಸ ಮತ್ತು ಅಕ್ರಮ ವಹಿವಾಟು ನಡೆದಿರುವುದು ನಿನ್ನೆ ತಡರಾತ್ರಿ ಸಾರ್ವಜನಿಕ ವಲಯದ ಬ್ಯಾಂಕಿನಿಂದ ಪತ್ತೆ ಮಾಡಲಾಗಿತ್ತು.
ಈ ಸಂಬಂಧ ನೀರವ್ ಮೋದಿ ಮತ್ತು ಜ್ಯೂವೆಲರಿ ಕಂಪನಿ ವಿರುದ್ಧ ಎರಡು ದೂರುಗಳನ್ನು ದಾಖಲಿಸಲಾಗಿದೆ. ವಂಚಕರು ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸಿಬಿಐ ಉನ್ನತ ಮೂಲಗಳು ತಿಳಿಸಿವೆ.
ಈ ಅಕ್ರಮ ವಹಿವಾಟುಗಳು ಬ್ಯಾಂಕ್ನ ಇತರ ಶಾಖೆಗಳಿಗೂ ವಿಸ್ತರಣೆಯಾಗಿರುವ ಸಾಧ್ಯತೆ ಇದ್ದು, ತನಿಖೆ ತೀವ್ರಗೊಂಡಿದೆ.
ಆಯ್ಕೆ ಮಾಡಿದ ಕೆಲವು ಖಾತೆದಾರರ ಅನುಕೂಲಕ್ಕಾಗಿ ಈ ಅವ್ಯವಹಾರಗಳು ನಡೆದಿದ್ದು, ಇದರ ಜಾಲ ವಿದೇಶಗಳಿಗೂ ಹಬ್ಬಿರುವ ಸಾಧ್ಯತೆ ಇದೆ ಎಂದು ಬ್ಯಾಂಕಿನ ಉನ್ನತಾಧಿಕಾರಿಗಳು ತಿಳಿಸಿದ್ದಾರೆ.
ಗ್ರಾಹಕರ ಹಿತದೃಷ್ಟಿ ಮತ್ತು ತನಿಖೆಗೆ ಅಡ್ಡಿಯಾಗುವ ಹಿನ್ನೆಲೆಯಲ್ಲಿ ಹೆಚ್ಚಿನ ವಿವರಗಳನ್ನು ಬಹಿರಂಗಗೊಳಿಸಲಾಗಿಲ್ಲ.