ಚುನಾವಣೆಗೆ ಕೈಗಾರಿಕೆಗಳಿಂದ ಹಣ ವಸೂಲು ಮಾಡುತ್ತಿರುವ ಕೈ ಪಾಳೆಯ

ಬೆಂಗಳೂರು, ಫೆ.14- ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬರಲು ಕೈ ಪಾಳೆಯಕ್ಕೆ ಫಂಡು ಕೊಡಬೇಕು ಎಂಬ ಕಾರಣ ಮುಂದಿಟ್ಟು ಬಹಳಷ್ಟು ಕೈಗಾರಿಕೆಗಳಿಂದ ಹಣ ವಸೂಲು ಮಾಡುತ್ತಿರುವ ಜಾಲದ ಕುರಿತು ಪಕ್ಷದ ಕೆಲವರು ಮುಖ್ಯಮಂತ್ರಿಗಳಿಗೇ ದೂರು ನೀಡಿರುವ ಅಂಶ ಬೆಳಕಿಗೆ ಬಂದಿದೆ.

ಮುಂದಿನ ಚುನಾವಣೆಯಲ್ಲಿ ಪ್ರಬಲ ಬಿಜೆಪಿ ಹಾಗೂ ಜೆಡಿಎಸ್ ಪಕ್ಷವನ್ನು ಮಣಿಸಿ ಅಧಿಕಾರಕ್ಕೆ ಬರಲು ದೊಡ್ಡ ಮೊತ್ತದ ಹಣ ಬೇಕಿದ್ದು ಇದಕ್ಕಾಗಿ ಕೈಗಾರಿಕೆಗಳಿಂದ ಫಂಡು ಸಂಗ್ರಹಿಸುವಂತೆ ತಮಗೆ ಸೂಚನೆ ನೀಡಲಾಗಿದೆ ಎಂದು ಕೆಲವರು ಹಲ ಕೈಗಾರಿಕೋದ್ಯಮಿಗಳಿಗೆ ದುಂಬಾಲು ಬಿದ್ದಿದ್ದು ಈ ಸಂಬಂಧ ಈಗ ಮುಖ್ಯಮಂತ್ರಿಗಳಿಗೇ ದೂರು ಬಂದಿದೆ.

ಕರ್ನಾಟಕದಲ್ಲಿ ನಲವತ್ತು ಸಾವಿರ ಕೈಗಾರಿಕೆಗಳಿದ್ದು ಪ್ರತಿಯೊಂದು ಕೈಗಾರಿಕೆಗಳಿಂದ ಕನಿಷ್ಟ ಒಂದು ಲಕ್ಷ ರೂಗಳಂತೆ 400 ಕೋಟಿ ರೂ ಸಂಗ್ರಹಿಸಲು ತಮಗೆ ಸೂಚನೆ ಬಂದಿದ್ದು ಈ ಹಿನ್ನೆಲೆಯಲ್ಲಿ ನಾವು ನಿಮ್ಮ ಸಹಕಾರ ಪಡೆಯಲು ಬಂದಿದ್ದೇವೆ ಎಂದು ಹೇಳಿಕೊಂಡು ಕೆಲವರು ನಡೆಸುತ್ತಿರುವ ವಂಚನೆಯ ಕುರಿತು ದೂರು ಬಂದ ಹಿನ್ನೆಲೆಯಲ್ಲಿ ಖುದ್ದು ಮುಖ್ಯಮಂತ್ರಿಗಳೇ ಧಿಗ್ಭ್ರಾಂತರಾಗಿದ್ದಾರೆ.

ಕೇವಲ ಕೈಗಾರಿಕೆಗಳಿಂದ 400 ಕೋಟಿ ರೂ ಸಂಗ್ರಹಿಸಲು ಹೊರಟವರು ಯಾರು ? ಇವರನ್ನು ಮುಂದಿಟ್ಟುಕೊಂಡು ಯಾರಾದರೂ ಪ್ರಭಾವಿಗಳು ಕೆಲಸ ಮಾಡುತ್ತಿದ್ದಾರಾ ಎಂಬ ಕುರಿತು ಪರಿಶೀಲನೆ ನಡೆಸುವಂತೆ ಮುಖ್ಯಮಂತ್ರಿಗಳು ಸಂಬಂಧಿಸಿದವರಿಗೆ ಸೂಚನೆ ನೀಡಿದ್ದಾರೆ.
ಅಂದ ಹಾಗೆ ಈಗಾಗಲೇ ಹಲವು ಕೈಗಾರಿಕೆಗಳ ಬಳಿ ಈ ಗುಂಪು ಹಣ ವಸೂಲು ಮಾಡಿದ್ದು ಇದರ ಕಾರ್ಯಾಚರಣೆಯ ವಿವರ ಹೇಗಿದೆ ಅನ್ನುವ ಕುರಿತು ಮುಖ್ಯಮಂತ್ರಿಗಳು ಸಂಪೂರ್ಣ ಮಾಹಿತಿ ಬಯಸಿದ್ದಾರೆ ಎಂದು ಮೂಲಗಳು ವಿವರ ನೀಡಿವೆ.

ಮುಂದಿನ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿ ಪ್ರಬಲ ಪೈಪೆÇೀಟಿ ನೀಡುವುದು ಸಹಜ. ಈಗಾಗಲೇ ಕೇಂದ್ರದಲ್ಲಿ ಅಧಿಕಾರ ಹಿಡಿದಿರುವ ಅದು ಕರ್ನಾಟಕದಲ್ಲಿ ಗೆಲ್ಲಲು ಸಂಪೂರ್ಣ ಬಲ ವಿನಿಯೋಗಿಸುತ್ತದೆ ಎಂಬುದೂ ಅಸಹಜವಲ್ಲ.

ಇದೇ ರೀತಿ ಜೆಡಿಎಸ್ ಕೂಡಾ ಬಿಎಸ್‍ಪಿ ಜತೆ ಹೊಂದಾಣಿಕೆ ಮಾಡಿಕೊಂಡು ಹಳೇ ಮೈಸೂರು ಭಾಗದಲ್ಲಿ ಪ್ರಬಲ ಪೈಪೆÇೀಟಿ ನೀಡಲಿದೆ. ಇವೆಲ್ಲವೂ ನಿಜವೇ. ಆದರೆ ಕೈಗಾರಿಕೆಗಳಿಂದ ಇಷ್ಟು ಪ್ರಮಾಣದ ಹಣವನ್ನು ವಸೂಲು ಮಾಡುತ್ತಿರುವ ಜಾಲ ಯಾವುದು ಅನ್ನುವುದು ಮುಖ್ಯಮಂತ್ರಿಗಳ ಕುತೂಹಲ.

ಈಗಾಗಲೇ ಕೇಂದ್ರ ಸರ್ಕಾರ ಕರ್ನಾಟಕದಲ್ಲಿರುವ ಕಾಂಗ್ರೆಸ್ ಸರ್ಕಾರವನ್ನು ದುರ್ಬಲಗೊಳಿಸಲು ಬಯಸಿದ್ದು ಈ ಸಮಯದಲ್ಲಿ ಚುನಾವಣೆ ಫಂಡು ಸಂಗ್ರಹಿಸುವ ನೆಪದಲ್ಲಿ ಮೋಸದ ಜಾಲ ನಡೆಯುತ್ತಿದ್ದರೆ ಸಹಜವಾಗಿಯೇ ಕೇಂದ್ರ ಸರ್ಕಾರ ಇದನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಬಹುದು ಎಂಬುದು ಸಿಎಂ ಯೋಚನೆ ಎಂದು ಮೂಲಗಳು ವಿವರಿಸಿವೆ.

ಫೋಟೋ ಕ್ರೆಡಿಟ್: sabrangindia.in (ಪ್ರಾತಿನಿಧ್ಯಕ್ಕಾಗಿ ಮಾತ್ರ)

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ