ನವದೆಹಲಿ, ಫೆ.14- ಮುಸ್ಲಿಂರ ಪವಿತ್ರ ಯಾತ್ರಾಸ್ಥಳ ಹಜ್ ಪ್ರವಾಸಕ್ಕೆ ಅನೇಕ ಸೌಲಭ್ಯಗಳನ್ನು ಒದಗಿಸಿ ಆ ಸಮುದಾಯವನ್ನು ಓಲೈಸಲು ಯತ್ನಿಸಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಈಗ ಕ್ರೈಸ್ತ ಅಲ್ಪಸಂಖ್ಯಾತರ ಮನಗೆಲ್ಲುವತ್ತ ದೃಷ್ಟಿ ಹರಿಸಿದೆ.
ಕ್ರೈಸ್ತರ ಅತ್ಯಂತ ಪವಿತ್ರ ಸ್ಥಳವಾದ ಜೆರುಸಲೆಂಗೆ ಆ ಜನಾಂಗದವರನ್ನು ಉಚಿತವಾಗಿ ಪ್ರವಾಸಕ್ಕೆ ಕಳುಹಿಸಿಕೊಡುವ ಯೋಜನೆಗಳನ್ನು ಬಿಜೆಪಿ ಪ್ರಕಟಿಸಿದೆ.
ಈಶಾನ್ಯ ಭಾರತದ ಮೂರು ರಾಜ್ಯಗಳಲ್ಲಿ ನಡೆಯುವ ವಿಧಾನಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ಈ ನಿರ್ಧಾರ ಹೊರ ಬಿದ್ದಿದೆ.
ಮೊದಲ ಹಂತದಲ್ಲಿ ನಾಗಾಲ್ಯಾಂಡ್ ಸೇರಿದಂತೆ ಈಶಾನ್ಯ ರಾಜ್ಯಗಳ ಕ್ರೈಸ್ತರಿಗೆ ಈ ಸೌಲಭ್ಯ ಲಭಿಸಲಿದ್ದು, ನಂತರದ ಹಂತಗಳಲ್ಲಿ ದೇಶದ ಇತರ ಕ್ರೈಸ್ತರಿಗೂ ಇದನ್ನು ವಿಸ್ತರಿಸಲಾಗುವುದು ಎಂದು ಬಿಜೆಪಿಯ ಉನ್ನತ ಮೂಲಗಳು ತಿಳಿಸಿವೆ.
ನಾಗಾಲ್ಯಾಂಡ್, ಮೇಘಾಲಯ ಮತ್ತು ತ್ರಿಪುರ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಗಳಿಗೆ ವೇದಿಕೆ ಸಜ್ಜಾಗಿದೆ. ಈ ರಾಜ್ಯಗಳಲ್ಲಿ ಕ್ರೈಸ್ತರ ಜನಸಂಖ್ಯೆ ಸರಾಸರಿ ಶೇ.75ಕ್ಕೂ ಹೆಚ್ಚು.
ಕ್ರಿಶ್ಚಿಯನ್ ಸಮುದಾಯವನ್ನು ಓಲೈಸಿ ಮತಬ್ಯಾಂಕುಗಳಿಗೆ ಲಗ್ಗೆ ಹಾಕುವ ಉದ್ದೇಶದಿಂದ ಉಚಿತ ಜೆರುಸಲೇಂ ಪ್ರವಾಸ ಯೋಜನೆಯನ್ನು ಜಾರಿಗೊಳಿಸಲಾಗಿದೆ.
ಈಗಾಗಲೇ ಈ ಮೂರು ರಾಜ್ಯಗಳ ಚುನಾವಣಾ ಪ್ರಣಾಳಿಕೆಯಲ್ಲಿ ಬಿಜೆಪಿ ಜೆರುಸಲೆಂ ಉಚಿತ ಪ್ರವಾಸವನ್ನು ಪ್ರಕಟಿಸಿದೆ.
ಇಸ್ರೇಲ್ನ ಜೆರುಸಲೆಂನ ಬೆತ್ಲಹೇಮ್ ದೇವಮಾನವ ಏಸುಕ್ರಿಸ್ತನ ಜನ್ಮಸ್ಥಳ. ಈ ಪವಿತ್ರ ಸ್ಥಳದ ಬಗ್ಗೆ ಕ್ರೈಸ್ತ ಸಮುದಾಯದಲ್ಲಿ ಅತ್ಯಂತ ಪೂಜ್ಯಭಾವನೆ ಇದೆ. ಒಮ್ಮೆಯಾದರೂ ಜೆರುಸಲೆಂಗೆ ಭೇಟಿ ನೀಡಬೇಕು ಎಂಬುದು ಪ್ರತಿಯೊಬ್ಬ ಕ್ರೈಸ್ತರ ಮಹದಾಸೆ. ಅವರ ಈ ಭಾವನಾತ್ಮಕ ಅಂಶವನ್ನು ಮನದಟ್ಟು ಮಾಡಿಕೊಂಡಿರುವ ಕೇಂದ್ರ ಸರ್ಕಾರ ಕ್ರೈಸ್ತರನ್ನು ಸಂಪೂರ್ಣ ಉಚಿತವಾಗಿ ಜೆರುಸಲೆಂ ಪ್ರವಾಸಕ್ಕೆ ಕಳುಹಿಸಿ ಅವರನ್ನು ಓಲೈಸಿ ಆ ಜನಾಂಗದ ಮತಗಳ ಬುಟ್ಟಿಗೆ ಕೈಹಾಕುವುದು ಇವರ ಉದ್ದೇಶ.
ಮುಸ್ಲಿಂ ಸಮುದಾಯದವರನ್ನು ಪವಿತ್ರ ಹಜ್ ಯಾತ್ರೆಗೆ ಕಳುಹಿಸುವ ಮೂಲಕ ಅಲ್ಪಸಂಖ್ಯಾತರ ಬಗ್ಗೆ ಸರ್ಕಾರಕ್ಕಿರುವ ಕಾಳಜಿ, ಕಳಕಳಿಯನ್ನು ಪ್ರದರ್ಶಿಸಲಾಗಿದ್ದು, ಈಗ ಕ್ರೈಸ್ತರನ್ನೂ ಜೆರುಸಲೇಂ ಯಾತ್ರೆಗೆ ಕಳುಹಿಸುವ ಯೋಜನೆಯನ್ನು ಕೇಂದ್ರ ಸರ್ಕಾರ ಅನುಷ್ಠಾನಗೊಳಿಸುತ್ತಿದೆ ಎಂದು ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಮುಖ್ತಾರ ಅಬ್ಬಾಸ್ ನಕ್ವಿ ಟ್ವಿಟ್ ಮಾಡಿದ್ದಾರೆ.
ಈಶಾನ್ಯ ಪ್ರಾಂತ್ಯದ ಮೂರು ರಾಜ್ಯಗಳನ್ನು ಶತಾಯಗತಾಯ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿರುವ ಬಿಜೆಪಿ ಅದಕ್ಕಾಗಿ ಹತ್ತು ಹಲವು ಯೋಜನೆಗಳನ್ನು ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿ ಅನುಷ್ಠಾನಗೊಳಿಸಲು ಕಾರ್ಯೋನ್ಮುಖವಾಗಿದೆ.
ಫೋಟೋ ಕ್ರೆಡಿಟ್: financial express (ಪ್ರಾತಿನಿಧ್ಯಕ್ಕಾಗಿ ಮಾತ್ರ)