ಕಾಡಾನೆಗಳ ಹಿಂಡು ಬಾಳೆ ತೋಟಗಳಿಗೆ ನುಗ್ಗಿ ನೂರಾರು ಎಕರೆ ನಾಶ

ಎಚ್.ಡಿ.ಕೋಟೆ, ಫೆ.14- ಕಾಡಾನೆಗಳ ಹಿಂಡು ಬಾಳೆ ತೋಟಗಳಿಗೆ ನುಗ್ಗಿ ದಾಂಧಲೆ ಮಾಡಿ ನೂರಾರು ಎಕರೆಯಲ್ಲಿ ಬೆಳೆಯಲಾಗಿದ್ದ ಬಾಳೆ ಫಸಲನ್ನು ನಾಶಗೊಳಿಸಿರುವ ಘಟನೆ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ನಡೆದಿವೆ.

ತಾಲ್ಲೂಕಿನ ಟೈಗರ್ ಬ್ಲಾಕ್ ಗ್ರಾಮದ ರೈತ ಚಲುವ, ಬೂದನೂರು ಗ್ರಾಮದ ಮರಿಯಯ್ಯಮ ರವೀಶ್, ಕೆ.ಎಡತೊರೆ ಗ್ರಾಮದ ಸುರೇಶ್, ಮಹದೇವಸ್ವಾಮಿ ಮುಂತಾದ ರೈತರು ತಮ್ಮ ಜಮೀನುಗಳಲ್ಲಿ ಬೆಳೆಯಲಾಗಿದ್ದ ಬಾಳೆ ಬೆಳೆ ಆನೆ ದಾಳಿಯಿಂದ ನಾಶಗೊಂಡಿವೆ.
ಬಾಳೆ ಬೆಳೆಯಿಂದ ಬದುಕು ಸುಧಾರಿಸಬಹುದು ಎಂಬ ಕನಸು ಕಂಡಿದ್ದ ರೈತರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಒಂದು ವರ್ಷದಿಂದ ಸಾಲ-ಸೋಲ ಮಾಡಿ ಕಷ್ಟಪಟ್ಟು ಬೆಳೆದಿದ್ದ ಬೆಳೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಇದರಿಂದ ರೈತರು ಕಂಗಾಲಾಗಿದ್ದು, ತಮ್ಮ ಜಮೀನುಗಳಲ್ಲಿ ಕೆಲಸ ಮಾಡಲು ಭಯ ಭೀತರಾಗಿದ್ದಾರೆ.

ಲಕ್ಷಾಂತರ ರೂ. ನಷ್ಟ ಅನುಭವಿಸಿರುವ ರೈತರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆನೆಗಳ ಹಾವಳಿಯನ್ನು ತಡೆಗಟ್ಟಲು ಕೈಗೊಳ್ಳಲಾದ ಸೋಲಾರ್ ಬೇಲಿ ಕೆಟ್ಟು ಹೋಗಿದೆ. ಹಲವು ಕಂದಕಗಳೂ ಮುಚ್ಚಿ ಹೋಗಿ ವರ್ಷಗಳೇ ಕಳೆದು ಹೋಗಿವೆ. ಅಲ್ಲದೆ ಅರಣ್ಯ ಇಲಾಖೆ ಸಿಬ್ಬಂದಿ ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿಲ್ಲ. ಈ ಬಗ್ಗೆ ಹಲವು ಬಾರಿ ಅರಣ್ಯ ಇಲಾಖೆ ಗಮನಕ್ಕೆ ತರಲಾಗಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಹಾಗಾಗಿಯೇ ನಷ್ಟ ಅನುಭವಿಸುವಂತಾಗಿದೆ ಎಂದು ಬೂದನೂರು ಗ್ರಾಮದ ರವೀಶ್ ಅಲವತ್ತುಗೊಂಡಿದ್ದಾರೆ.

ಅರಣ್ಯ ಇಲಾಖೆಯ ದಿವ್ಯ ನಿರ್ಲಕ್ಷ್ಯದಿಂದ ಬೆಳೆ ನಾಶವಾಗಿ ಅಕ್ಷರಶಃ ಸಂಕಷ್ಟಕ್ಕೆ ಸಿಲುಕಿದ್ದೇವೆ. ಹಾಗಾಗಿ ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಹಾಗೂ ಬೆಳೆ ಪರಿಹಾರವನ್ನು ನೀಡಬೇಕೆಂದು ಒತ್ತಾಯಿಸಿರುವ ರೈತರು ಸಮಸ್ಯೆ ಬಗೆಹರಿಸದಿದ್ದಲ್ಲಿ ಅರಣು ಇಲಾಖೆ ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದ್ದಾರೆ.

ಫೋಟೋ ಕ್ರೆಡಿಟ್: morungexpress.com (ಪ್ರಾತಿನಿಧ್ಯಕ್ಕಾಗಿ ಮಾತ್ರ)

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ