ಒಂದು ವರ್ಷದ ಒಳಗಾಗಿ ಎಲ್ಲಾ ಮೆಟ್ರೋಗಳಿಗೆ ಮೂರು ಬೋಗಿಗಳನ್ನು ಅಳವಡಿಸಲಾಗುವುದು

ಬೆಂಗಳೂರು, ಫೆ.14-ಒಂದು ವರ್ಷದ ಒಳಗಾಗಿ ಬೆಂಗಳೂರಿನಲ್ಲಿ ಸಂಚರಿಸುತ್ತಿರುವ ಎಲ್ಲಾ ಮೆಟ್ರೋಗಳಿಗೆ ಹೆಚ್ಚುವರಿಯಾಗಿ ಮೂರು ಬೋಗಿಗಳನ್ನು ಅಳವಡಿಸಲಾಗುವುದು ಎಂದು ನಿರ್ಧರಿಸಲಾಗಿದೆ.

ಈಗ ಸಂಚರಿಸುತ್ತಿರುವ ಮೆಟ್ರೋದಲ್ಲಿ ಮೂರು ಬೋಗಿಗಳಿದ್ದು, ಸುಮಾರು ಮೂರರಿಂದ ನಾಲ್ಕು ಲಕ್ಷ ಜನ ಸಂಚರಿಸಬಹುದಾಗಿದೆ. ಹೆಚ್ಚುವರಿ ಬೋಗಿಗಳ ಅಳವಡಿಕೆಯಿಂದ ಈ ಪ್ರಮಾಣ 8 ಲಕ್ಷಕ್ಕೆ ಹೇರಿಕೆಯಾಗಲಿದೆ.

ತಲಾ ಮೂರು ಬೋಗಿಗಳನ್ನು ಹೆÉಚ್ಚುವರಿಯಾಗಿ ಅಳವಡಿಸುವುದರಿಂದ ಪ್ರತಿ ದಿನ 1800 ಪ್ರಯಾಣಿಕರು ಹೆಚ್ಚು ಸಂಚರಿಸಲು ಅನುಕೂಲವಾಗುತ್ತದೆ. ಬಿಎಂಆರ್‍ಸಿಎಲ್ 150 ಬೋಗಿಗಳನ್ನು ನಿರ್ಮಾಣ ಮಾಡಿಕೊಡಲು ಬಿಇಎಂಎಲ್‍ಗೆ ಟೆಂಡರ್ ನೀಡಿದ್ದು, ಇಂದು ಮೊದಲ ಹಂತದಲ್ಲಿ ನಿರ್ಮಾಣವಾದ ಮೂರು ಭೋಗಿಗಳನ್ನು ಬಿಇಎಂಎಲ್ ಸಂಸ್ಥೆ ಬಿಎಂಆರ್‍ಸಿಎಲ್‍ಗೆ ಹಸ್ತಾಂತರಿಸಿತು.

ರೈಲ್ವೆ ಸುರಕ್ಷತಾ ಆಯುಕ್ತರ ಅನುಮತಿ ಪಡೆದ ನಂತರ ಹೆಚ್ಚುವರಿ ಬೋಗಿಗಳು ಮೆಟ್ರೋಗೆ ಅಳವಡಿಕೆಯಾಗಿ ಸಂಚಾರ ಆರಂಭಿಸಲಿವೆ. ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಅವರ ಮೂಲಕ ಇಂದು ಬೋಗಿಗಳನ್ನು ಬಿಎಂಆರ್‍ಸಿಎಲ್‍ನ ವ್ಯವಸ್ಥಾಪಕ ನಿರ್ದೇಶಕ ಮಹೇಂದ್ರ ಜೈನ್ ಅವರಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಜಾರ್ಜ್, ಬೆಂಗಳೂರು ಮೆಟ್ರೋ ಕೇವಲ ಬೆಂಗಳೂರಿಗರಿಗೆ ಸೀಮಿತವಾಗಿಲ್ಲ. ನಾನಾ ಭಾಗಗಳಿಂದ ಬರುವವರು ಇದರಲ್ಲಿ ಸಂಚರಿಸುತ್ತಿದ್ದಾರೆ. ನಗರದ ಸಂಚಾರ ದಟ್ಟಣೆ ಕಡಿಮೆಯಾಗುತ್ತಿದೆ. ಮೆಟ್ರೋದಲ್ಲಿ ಸಂಚರಿಸುವವರ ಸಂಖ್ಯೆ ಹೆಚ್ಚಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ಕೇವಲ 6 ಕಿ.ಮೀ. ಮೆಟ್ರೋ ಮಾರ್ಗ ನಿರ್ಮಾಣವಾಗಿದ್ದು, ನಾವು ಮುತುವರ್ಜಿ ವಹಿಸಿ ಮೊದಲ ಹಂತದ 42 ಕಿ.ಮೀ. ಕಾಮಗಾರಿಯನ್ನು ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲಾಗಿದೆ. 2ನೇ ಹಂತದ ಯೋಜನೆಯೂ ಶೀಘ್ರಗತಿಯಲ್ಲಿದೆ. ಮೆಟ್ರೋ ಕಾಮಗಾರಿ ವೇಳೆ ಆಭಾಗದ ರಸ್ತೆಗಳು ಮತ್ತು ಸುತ್ತಮುತ್ತಲಿನ ನಾಗರಿಕರಿಗೆ ಸಣ್ಣಪುಟ್ಟ ತೊಂದರೆಗಳಾಗುತ್ತಿವೆ. ಉತ್ತಮ ಯೋಜನೆಗಾಗಿ ಈ ತೊಂದರೆಯನ್ನು ಸಹಿಸಿಕೊಳ್ಳಬೇಕು ಎಂದು ಜಾರ್ಜ್ ಮನವಿ ಮಾಡಿದರು.

ಕೇಂದ್ರ ಸರ್ಕಾರ ಬಜೆಟ್‍ನಲ್ಲಿ ಸಬ್‍ಅರ್ಬನ್ ರೈಲಿಗೆ ಅನುದಾನ ಘೋಷಣೆ ಮಾಡಿದೆ. ಕೇಂದ್ರ ಸಚಿವ ಅನಂತ್‍ಕುಮಾರ್ ಮನಸ್ಸು ಮಾಡಿ ಕೇಂದ್ರ ಸರ್ಕಾರದ ಮೇಲೆ ಪ್ರಭಾವ ಬೀರಿ ಶೀಘ್ರವೇ ಅನುದಾನ ಬಿಡುಗಡೆ ಮಾಡಿಸಿದರೆ ಸಬ್‍ಅರ್ಬನ್ ರೈಲ್ವೆ ಯೋಜನೆಯನ್ನು ಆರಂಭಿಸಲು ರಾಜ್ಯ ಸರ್ಕಾರ ಸಿದ್ಧವಿದೆ ಎಂದು ಹೇಳಿದರು.

ಇದಕ್ಕೆ ವೇದಿಕೆಯಲ್ಲಿ ಉತ್ತರ ನೀಡಿದ ಸಂಸದ ಪಿ.ಸಿ.ಮೋಹನ್, ರಾಜ್ಯ ಸರ್ಕಾರ ಮೊದಲು ವಿಶೇಷ ಘಟಕವನ್ನು ಸ್ಥಾಪನೆ ಮಾಡಿದರೆ ಯೋಜನೆಗೆ ಚಾಲನೆ ನೀಡಲು ಸಾಧ್ಯವಾಗುತ್ತದೆ. ಮೊದಲು ಆ ಕೆಲಸ ಮಾಡಿ ಎಂದು ಸಲಹೆ ನೀಡಿದರು.

ಸ್ಪೆಷಲ್ ಪರ್ಪಸ್ ವೆಹಿಕಲ್ ಸ್ಥಾಪನೆ ಮಾಡಲು ನಮ್ಮ ಸರ್ಕಾರ ಸಿದ್ದವಿದೆ ಎಂದು ಜಾರ್ಜ್ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಸಚಿವ ಅನಂತ್‍ಕುಮಾರ್, ಹೆಚ್ಚುವರಿ ಭೋಗಿಗಳ ನಿರ್ಮಾಣ ಮೇಕ್ ಇನ್ ಇಂಡಿಯಾದ ಮುಂದುವರೆದ ಭಾಗವಾಗಿದೆ. ಮೇಕ್ ಇನ್ ಇಂಡಿಯಾ, ಮೇಕ್ ಇನ್ ಕರ್ನಾಟಕ, ಮೇಕ್ ಇನ್ ಬೆಂಗಳೂರು ಎಂಬ ಯಶಸ್ಸಿಗೆ ನಾವು ಪಾತ್ರರಾಗುತ್ತಿದ್ದೇವೆ.

ಬಿಇಎಂಎಲ್ ಸಂಸ್ಥೆಯ ಗುಣಮಟ್ಟದ ಬಗ್ಗೆ ಪ್ರಧಾನಿ ಅವರ ಗಮನಕ್ಕೆ ತರಲು ನಾನೇ ಖುದ್ದಾಗಿ ಒಂದು ನಿಯೋಗವನ್ನು ದೆಹಲಿಗೆ ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿದರು.

ಸಬ್ ಅರ್ಬನ್ ಯೋಜನೆ ಈಗಾಗಲೇ ಘೋಷಣೆಯಾಗಿರುವುದರಿಂದ ಶೀಘ್ರವೇ ಅನುದಾನ ನೀಡಲು ಪ್ರಯತ್ನಿಸುವುದಾಗಿ ಅನಂತ್‍ಕುಮಾರ್ ಭರವಸೆ ನೀಡಿದರು.

ಪ್ರೇಮಿಗಳ ದಿನದಂದು ಮೂರು ಹೆಚ್ಚುವರಿ ಕೋಚ್‍ಗಳನ್ನು ಬಿಇಎಂಎಲ್ ಹಸ್ತಾಂತರಿಸುವ ಮೂಲಕ ತನ್ನ ಪ್ರೀತಿಯನ್ನು ವ್ಯಕ್ತಪಡಿಸಿದೆ ಎಂದ ಅವರು, ಮುಂದಿನ ದಿನಗಳಲ್ಲಿ ಸಬ್‍ಅರ್ಬನ್ ರೈಲ್ವೆಯ ಕೋಚ್‍ಗಳನ್ನು ನಿರ್ಮಾಣ ಮಾಡಲು ಬಿಇಎಂಎಲ್‍ಗೆ ಗುತ್ತಿಗೆ ಕೊಡಿಸಲು ಪ್ರಯತ್ನಿಸುವುದಾಗಿ ಅನಂತ್‍ಕುಮಾರ್ ಹೇಳಿದರು.

ರಾಜಕೀಯವಾಗಿ ನಾವು ಹೇನೇ ಆಗಿದ್ದರೂ ಅಭಿವೃದ್ಧಿ ವಿಷಯದಲ್ಲಿ ನಾವು ಒಂದಾಗಿ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.\

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ