ನವದೆಹಲಿ, ಫೆ.11-ಚುನಾವಣಾ ನಿಯಮಗಳನ್ನು ಉಲ್ಲಂಘಿಸುವ ರಾಜಕೀಯ ಪಕ್ಷಗಳ ನೋಂದಣಿ ಮತ್ತು ಮಾನ್ಯತೆ ರದ್ದುಗೊಳಿಸಲು ತನಗೆ ಅಧಿಕಾರ ನೀಡುವಂತೆ ಚುನಾವಣಾ ಆಯೋಗ ಸುಪ್ರೀಂಕೋರ್ಟ್ಗೆ ಮನವಿ ಮಾಡಿದೆ.
ಅಪರಾಧಿಗಳು ಮತ್ತು ದೋಷಿಗಳು ರಾಜಕೀಯ ಪಕ್ಷ ಸ್ಥಾಪನೆ ತಡೆಯುವಂತೆ ಕೋರಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ(ಪಿಐಎಲ್) ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ ಪ್ರಮಾಣಪತ್ರ ಸಲ್ಲಿಸಿರುವ ಆಯೋಗ ಈ ಗಂಭೀರ ವಿಷಯವನ್ನು ಪ್ರಸ್ತಾಪಿಸಿದೆ.
ಈ ಅಫಿಡಾವಿಟ್ನಲ್ಲಿ ಆಯೋಗವು ಕೆಲವೊಂದು ಮುಖ್ಯ ವಿಚಾರಗಳನ್ನು ಪ್ರಸ್ತಾಪಿಸಿದೆ. ಪ್ರಸ್ತುತ ರಾಜಕೀಯ ಪಕ್ಷಗಳ ಹೆಸರನ್ನು ನೋಂದಾಯಿಸಿಕೊಳ್ಳುವ ಅಧಿಕಾರ ಮಾತ್ರ ಇದೆ. ಮಾನ್ಯತೆ ಅಥವಾ ನೋಂದಣಿ ರದ್ದು ಮಾಡುವ ಅಧಿಕಾರ ಇಲ್ಲ. ಜನಪ್ರತಿನಿಧಿಗಳ ಕಾಯ್ದೆ, 1951ರಲ್ಲೂ ರಾಜಕೀಯ ನೋಂದಣಿ ರದ್ದು ಮಾಡುವ ಕುರಿತು ಸ್ಪಷ್ಟ ನಿಯಮ-ನಿಬಂಧನೆಗಳು ಇಲ್ಲ ಎಂಬ ಅಂಶಗಳನ್ನು ಪ್ರಮಾಣಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಚುನಾವಣಾ ನಿಯಮಗಳನ್ನು ಉಲ್ಲಂಘಿಸುವ ರಾಜಕೀಯ ಪಕ್ಷಗಳ ವಿರುದ್ಧ ಕ್ರಮ ಕೈಗೊಳ್ಳಲು ತನಗೆ ಅಧಿಕಾರ ನೀಡಿಲ್ಲ. ಈ ವಿಷಯದಲ್ಲಿ ಕ್ರಮ ಕೈಗೊಳ್ಳುವ ಹಕ್ಕನ್ನು ಆಯೋಗಕ್ಕೆ ನೀಡಲು ಕಾನೂನಿನಲ್ಲಿ ಬದಲಾವಣೆ ಅಗತ್ಯವಿದೆ. ಈ ಕುರಿತು ಅಗತ್ಯ ತಿದ್ದುಪಡಿಗಳನ್ನು ಮಾಡಲು ಶಾಸಕಾಂಗಕ್ಕೆ ಸೂಚನೆ ನೀಡುವ ಅಗತ್ಯವಿದೆ ಎಂದು ಆಯೋಗ ಹೇಳಿದೆ, ಈ ಕುರಿತು ಕಾನೂನಿಗೆ ತಿದ್ದುಪಡಿ ತರಬೇಕೆಂದು ಕಳೆದ 20 ವರ್ಷಗಳಿಂದ ಆಯಾ ಸರ್ಕಾರಗಳಿಗೆ ಆಯೋಗ ಮನವಿ ಮಾಡುತ್ತಲೇ ಬಂದಿದ್ದರೂ ಈ ನಿಟ್ಟಿನಲ್ಲಿ ಈವರೆಗೆ ಸಕಾರಾತ್ಮಕ ಕ್ರಮಗಳನ್ನು ಕೈಗೊಳ್ಳಲಾಗಿಲ್ಲ ಎಂದು ಆಯೋಗ ವಿಷಾದಿಸಿದೆ.
ಈ ಕುರಿತ ಮುಂದಿನ ವಿಚಾರಣೆ ನಡೆಯಲಿದೆ.
ಫೋಟೋ ಕ್ರೆಡಿಟ್: btvi.in (ಪ್ರಾತಿನಿಧ್ಯಕ್ಕಾಗಿ ಮಾತ್ರ)