ಆಗಸದಲ್ಲೇ ಎರಡು ವಿಮಾನಗಳ ನಡುವೆ ಮುಖಾಮುಖಿ ಡಿಕ್ಕಿ ದುರಂತ ಕೂದಲೆಳೆ ಅಂತರದಲ್ಲೇ ತಪ್ಪಿತು

ಮುಂಬೈ/ನವದೆಹಲಿ, ಫೆ.11-ಆಗಸದಲ್ಲೇ ಎರಡು ವಿಮಾನಗಳ ನಡುವೆ ಮುಖಾಮುಖಿ ಡಿಕ್ಕಿ ದುರಂತ ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲೇ ತಪ್ಪಿದ್ದು, 300ಕ್ಕೂ ಹೆಚ್ಚು ಪ್ರಯಾಣಿಕರು ಪವಾಡ ಸದೃಶ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಮುಂಬೈ ಅಂತರಿಕ್ಷ ವಲಯದಲ್ಲಿ ಸಂಭವಿಸಿದೆ.

ವಿಸ್ತಾರ ವಿಮಾನವು 27,000 ಅಡಿಗಳಷ್ಟು ಎತ್ತರದಲ್ಲಿ ಕೆಳಗೆ ಇಳಿಯುತ್ತಿದ್ದ ಸಂದರ್ಭದಲ್ಲೇ ವಿರುದ್ಧ ದಿಕ್ಕಿನಿಂದ ಅದೇ ಮಾರ್ಗದಲ್ಲಿ ಏರ್ ಇಂಡಿಯಾ ವಿಮಾನ ಬರುತ್ತಿತ್ತು. ಕೆಲವು ಸೆಕೆಂಡ್‍ಗಳ ಅಂತರದಲ್ಲಿ ಈ ಎರಡೂ ವಿಮಾನಗಳು ಪರಸ್ಪರ ಅಪ್ಪಳಿಸುವುದು ತಪ್ಪಿತು. ಭಾರತೀಯ ಆಕಾಶ ಪ್ರದೇಶದಲ್ಲಿ ಕೂದಲೆಳೆ ಅಂತರದಲ್ಲಿ ತಪ್ಪಿದ್ದ ಘೋರ ದುರಂತ ಇದಾಗಿದೆ. ಈ ಘಟನೆ ಫೆ.7ರಂದು ಬುಧವಾರ ರಾತ್ರಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಈ ಎರಡೂ ವಿಮಾನಗಳಲ್ಲಿ ವಿಮಾನ ಸಿಬ್ಬಂದಿ ಸೇರಿದಂತೆ 300ಕ್ಕೂ ಹೆಚ್ಚು ಪ್ರಯಾಣಿಕರು ಇದ್ದರು.
ದೆಹಲಿಯಿಂದ ಪುಣೆಗೆ ತೆರಳುತಿದ್ದ ವಿಸ್ತಾರದ ಎ-320 ನಿಯೋ ಹಾಗೂ ಏರ್‍ಇಂಡಿಯಾ ಎ-319 ಮುಂಬೈನಿಂದ ಭೂಪಾಲ್‍ಗೆ ಹೋಗುತ್ತಿದ್ದಾಗ ಕೇವಲ 100 ಅಡಿಗಳಷ್ಟು ಅಂತರದಲ್ಲಿ ಮುಖಾಮುಖಿ ಡಿಕ್ಕಿ ತಪ್ಪಿದೆ. ಈ ಘಟನೆ ಬಗ್ಗೆ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ ತನಿಖೆಗೆ ಆದೇಶಿಸಿದೆ.

ಫೋಟೋ ಕ್ರೆಡಿಟ್: Youtube.com(ಪ್ರಾತಿನಿಧ್ಯಕ್ಕಾಗಿ ಮಾತ್ರ)

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ