ಪುರುಷ ಪ್ರಧಾನವಾದ ಸಿನಿಮಾರಂಗದಲ್ಲಿ ದೀಪಿಕಾಪಡುಕೋಣೆಯ ಜಮಾನ ಶುರುವಾಗಿದೆ

ಪುರುಷ ಪ್ರಧಾನವಾದ ಸಿನಿಮಾರಂಗದಲ್ಲಿ ಅದರಲ್ಲೂ ಖಾನ್‍ಗಳ ದರ್ಬಾರ್ ಜೋರಾಗಿರುವ ಬಾಲಿವುಡ್‍ನಲ್ಲಿ ಕನ್ನಡತಿ ದೀಪಿಕಾಪಡುಕೋಣೆಯ ಜಮಾನ ಶುರುವಾಗಿದೆ.

ರಣಬೀರ್‍ಕಪೂರ್, ರಣವೀರ್‍ಸಿಂಗ್‍ರಂತಹ ಸ್ಟಾರ್ ನಟರ್‍ಗಳಿದ್ದರೂ ಕೂಡ ತನ್ನದೇ ವರ್ಚಸ್ಸಿನಿಂದ ಪದ್ಮಾವತ್ ಚಿತ್ರವನ್ನು ಗೆಲ್ಲಿಸಿಕೊಂಡಿರುವ ದೀಪಿಕಾ ಪಡುಕೋಣೆ ಮತ್ತೊಮ್ಮೆ ಬಾಲಿವುಡ್ ನಿರ್ಮಾಪಕರ ಹಾಟ್‍ಫೇವರೆಟ್ ನಟಿಯಾಗಿದ್ದಾರೆ.
ಪದ್ಮಾವತ್ ಚಿತ್ರದ ಬಿಡುಗಡೆಗೂ ಮುನ್ನವೇ ಪ್ರತಿಭಟನೆ, ಕೊಲೆ ಬೆದರಿಕೆ, ಹಲ್ಲೆ ಮತ್ತಿತರ ಪ್ರಕರಣಗಳನ್ನು ಎದುರಿಸಿದ ಚಿತ್ರತಂಡವು ಈಗ ಬಾಕ್ಸ್‍ಆಫೀಸ್‍ನಲ್ಲಿ ಕೊಳ್ಳೆ ಹೊಡೆಯುತ್ತಿದೆ.

ಆರಂಭದಿಂದಲೂ ಕಲೆಕ್ಷನ್‍ನಲ್ಲಿ ಏರುಮುಖವನ್ನು ಕಂಡುಕೊಂಡಿರುವ ಪದ್ಮಾವತ್ ಇದುವರೆವಿಗೂ 239.5 ಕೋಟಿ ರೂ.ಗಳನ್ನು ಗಳಿಸಿರುವುದು ಕೂಡ ದೀಪಿಕಾಪಡುಕೋಣೆಯ ಸ್ಟಾರ್ ಹೆಸರಿನ ಮೇಲೆಯೇ ಎಂಬ ಮಾತುಗಳು ಬಾಲಿವುಡ್ ಅಂಗಳದಲ್ಲಿ ಕೇಳಿಬಂದಿದೆ.

ದೀಪಿಕಾ ಈ ಹಿಂದೆ ಬಾಲಿವುಡ್ ಬಾದ್‍ಷಾ ಶಾರುಖ್‍ಖಾನ್‍ನೊಂದಿಗೆ ನಟಿಸಿದ್ದ ಚೆನ್ನೈ ಎಕ್ಸ್‍ಪ್ರೆಸ್ ಚಿತ್ರವು 227.13 ಕೋಟಿ ರೂ.ಗಳನ್ನು ಗಳಿಸಿದ್ದು ಈಗ ಪದ್ಮಾವತ್ ಆ ದಾಖಲೆಯನ್ನು ಕೂಡ ಪುಡಿಗಟ್ಟಿದೆ.

ದೀಪಿಕಾ ನಟಿಸಿರುವ ಹ್ಯಾಪಿನ್ಯೂ ಇಯರ್ (203 ಕೋಟಿ), ಹೇ ಜವಾನಿ ಹೈ ದೀವಾನಿ (188.57 ಕೋಟಿ), ಬಾಜಿರಾವ್ ಮಸ್ತಾನಿ (184.2 ಕೋಟಿ), ರಾಮ್‍ಲೀಲಾ ( 116.33 ಕೋಟಿ), ರೇಸ್ 2 (100.45 ಕೋಟಿ) ಚಿತ್ರಗಳಿಗಿಂತ ಪದ್ಮಾವತ್ ಚಿತ್ರವು ಕಲೆಕ್ಷನ್‍ನಲ್ಲಿ ದಾಖಲೆ ನಿರ್ಮಿಸಿರುವುದನ್ನು ನೋಡಿದರೆ, ಬಾಲಿವುಡ್‍ನಲ್ಲಿ ದೀಪಿಕಾಳ ಹವಾ ಜೋರಾಗಿದೆ ಎಂದೇ ಅರ್ಥ.
ಕನ್ನಡದ ಐಶ್ವರ್ಯ ಚಿತ್ರದಿಂದ ಚಿತ್ರರಂಗಪ್ರವೇಶಿಸಿ ಬಾಲಿವುಡ್ ಅಂಗಳದಲ್ಲಿ ಸ್ಟಾರ್ ನಟರುಗಳೊಂದಿಗೆ ನಟಿಸಿರುವ ದೀಪಿಕಾಳ ಚಿತ್ರಗಳು ಇನ್ನೆಷ್ಟು ಜಾದೂ ಮಾಡಲಿದೆಯೋ ಎಂಬುದನ್ನು ಕಾದು ನೋಡಬೇಕಷ್ಟೇ.

ಫೋಟೋ ಕ್ರೆಡಿಟ್: pixabay.com(ಪ್ರಾತಿನಿಧ್ಯಕ್ಕಾಗಿ ಮಾತ್ರ)

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ