ನವದೆಹಲಿ, ಏ.12-ಸರ್ವೋಚ್ಚ ನ್ಯಾಯಾಲಯದ ಕಾರ್ಯವ್ಯವಹಾರಗಳ ಬಗ್ಗೆ ಸುಪ್ರೀಂಕೋರ್ಟ್ನ ಅತ್ಯಂತ ಹಿರಿಯ ನ್ಯಾಯಾಧೀಶರಾದ ನ್ಯಾಯಮೂರ್ತಿ ಜೆ. ಚಲಮೇಶ್ವರ್ ಇಂದು ಮತ್ತೊಮ್ಮೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಕರಣಗಳ ಮಂಜೂರಾತಿ ಕುರಿತು ಮಾರ್ಗಸೂಚಿಗಳನ್ನು ರೂಪಿಸುವಂತೆ ಕೋರಿ ಕೇಂದ್ರದ ಮಾಜಿ ಸಚಿವ ಶಾಂತಿ ಭೂಷಣ್ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ವಿಚಾರಣೆಗೆ ಆದೇಶ ನೀಡುವ ಕಾರಣಕ್ಕಾಗಿ ನ್ಯಾಯಮೂರ್ತಿ ನಿರಾಕರಿಸಿದ್ದಾರೆ.
ಈ ಕ್ಷಿಪ್ರ ಬೆಳವಣಿಗೆಯಿಂದಾಗಿ(ಪಿಐಎಲ್ ತ್ವರಿತ ವಿಚಾರಣೆಗೆ ನಿರಾಕರಣೆ) ವಿಚಲಿತರಾದ ಕೇಂದ್ರದ ಕಾನೂನು ಖಾತೆ ಮಾಜಿ ಸಚಿವರ ಪುತ್ರ ಹಾಗೂ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರನ್ನು ಭೇಟಿ ಮಾಡಿ ಈ ಬಗ್ಗೆ ಮನವಿ ಮಾಡಿದರು.
ಸಿಜೆಐ ದೀಪಕ್ ಮಿಶ್ರಾ ನೇತೃತ್ವದ ಪೀಠವು ಈ ಬಗ್ಗೆ ಗಮನಹರಿಸುವುದಾಗಿ ಹೇಳಿದೆ.
ಪ್ರಕರಣಗಳ ಮಂಜೂರಾತಿ ಕುರಿತು ಮಾರ್ಗಸೂಚಿಗಳನ್ನು ರೂಪಿಸುವಂತೆ ಕೋರಿ ಶಾಂತಿ ಭೂಷಣ್ ಸಲ್ಲಿಸಿದ್ದ ಸಾರ್ವಜನಿಕ ಪಿಐಎಲ್ನನ್ನು ವಿಚಾರಣೆಗೆ ಮಾನ್ಯ ಮಾಡಲು ನಿರಾಕರಿಸಿದ ನ್ಯಾ. ಚಲಮೇಶ್ವರ್ ಇದಕ್ಕೆ ತಾವು ನೀಡಿರುವ ಕಾರಣಗಳು ಸ್ಪಷ್ಟವಾಗಿದೆ. ಈ ವಿಷಯದ ಬಗ್ಗೆ ವ್ಯವಹರಿಸಲು ತಾವು ಸಿದ್ಧರಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನ್ಯಾಯಾಂಗ ವಿಷಯದಲ್ಲಿ ಕಾರ್ಯಾಂಗ ಹಸ್ತಕ್ಷೇಪ ಮಾಡುತ್ತಿದೆ ಎಂದು ಸುಪ್ರೀಂಕೋರ್ಟ್ ಕಾರ್ಯನಿರ್ವಹಣೆ ಬಗ್ಗೆ ಹಿರಿಯ ನ್ಯಾಯಮೂರ್ತಿಗಳಾದ ಚಲಮೇಶ್ವರ್ ಮತ್ತು ಕುರಿಯನ್ ಜೋಸೆಫ್ ಪತ್ರಗಳನ್ನು ಬರೆದಿದ್ದ ಬೆನ್ನಲ್ಲೇ ಈ ಬೆಳವಣಿಗೆ ಕಂಡುಬಂದಿದೆ.