ಅಕ್ಷಯ ತೃತೀಯಕ್ಕೆ ಅಧಿಕ ಚಿನ್ನ ಖರೀದಿ ಮೇಲೆ ಚುನಾವಣಾ ಆಯೋಗ ಹದ್ದಿನ ಕಣ್ಣು

ಬೆಂಗಳೂರು, ಏ.12-ಅಪ್ಪಿ ತಪ್ಪಿಯೂ ಈ ಬಾರಿ ಅಕ್ಷಯ ತೃತೀಯ ದಿನದಂದು ಅಗತ್ಯಕ್ಕಿಂತ ಹೆಚ್ಚಾಗಿ ಚಿನ್ನದ ಆಭರಣಗಳನ್ನು ಖರೀದಿಸಿದೀರಿ ಜೋಕೆ…!
ಏಕೆಂದರೆ ಈ ಬಾರಿ ಹೆಚ್ಚು ಬಂಗಾರ ಖರೀದಿ ಮಾಡುವವರ ಮೇಲೆ ಚುನಾವಣಾ ಆಯೋಗ ಹದ್ದಿನ ಕಣ್ಣಿಟ್ಟಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಪ್ರಮುಖ ಬಂಗಾರದ ಅಂಗಡಿಗಳಿಗೆ ಏ.18(ಅಕ್ಷಯ ತೃತೀಯ)ರಂದು ಖರೀದಿ ಮಾಡುವವರ ವಿವರವನ್ನು ನೀಡಬೇಕೆಂದು ಸೂಚನೆ ಕೊಟ್ಟಿದೆ.

ಅಕ್ಷಯ ತೃತೀಯ ದಿನದಂದು ಬಂಗಾರ ಖರೀದಿ ಮಾಡುವುದೇ ಸಾಮಾನ್ಯವಾಗಿ ಅದೃಷ್ಟ ಖುಲಾಯಿಸುತ್ತದೆ ಎಂಬುದು ಬಹುತೇಕ ಜನರ ನಂಬಿಕೆಯಾಗಿದೆ. ಹೀಗಾಗಿ ವರ್ಷಪೂರ್ತಿ ಕೂಡಿಟ್ಟ ಹಣದಲ್ಲಿ ಅಂದು ಹೆಚ್ಚಿನ ಬಂಗಾರವನ್ನು ಖರೀದಿ ಮಾಡುವುದು ಸರ್ವೇ ಸಾಮಾನ್ಯವಾಗಿದೆ.

ಆದರೆ ಈ ಬಾರಿ ವಿಧಾನಸಭೆಗೆ ಚುನಾವಣೆ ನಡೆಯುತ್ತಿದೆ. ಮತದಾನಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಇಂಥ ಸಂದರ್ಭದಲ್ಲೇ ಅಕ್ಷಯ ತೃತೀಯ ಬಂದಿರುವುದು ರಾಜಕಾರಣಿಗಳಿಗೆ ಸುಗ್ಗಿಯೋ ಸುಗ್ಗಿ ಎಂಬಂತಾಗಿದೆ.

ಈಗ ಚುನಾವಣಾ ಆಯೋಗ ಸ್ಪರ್ಧಾ ಕಣದಲ್ಲಿರುವವರು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಸಂಬಂಧಿಕರು, ಬೆಂಬಲಿಗರು ಸೇರಿದಂತೆ ಅನೇಕರ ಮೇಲೆ ಹದ್ದಿನ ಕಣ್ಣಿಟ್ಟಿದೆ. ಮತದಾರರಿಗೆ ಆಮಿಷವೊಡ್ಡಲು ರಾಜಕಾರಣಿಗಳು ನಗದು, ಬೆಳ್ಳಿ , ಬಂಗಾರ ನೀಡುವುದು ಸರ್ವೇ ಸಾಮಾನ್ಯ.

ಆಯೋಗ ಎಷ್ಟೇ ಹದ್ದಿನ ಕಣ್ಣಿಟ್ಟಿದ್ದರೂ ರಂಗೋಲಿ ಕೆಳಗೆ ನುಸುಳುವ ರಾಜಕಾರಣಿಗಳು ಈ ಬಾರಿ ಮತದಾರರಿಗೆ ಹಂಚಲೆಂದೇ ಅಕ್ಷಯ ತೃತೀಯ ದಿನದಂದು ಹೆಚ್ಚಿನ ಬಂಗಾರ ಖರೀದಿಸಲು ಮುಂದಾಗಿದ್ದಾರೆ.

ಸಾಮಾನ್ಯವಾಗಿ ಅಕ್ಷಯ ತೃತೀಯ ದಿನದಂದು ರಿಯಾಯ್ತಿ ದರದಲ್ಲಿ ಒಡವೆಗಳನ್ನು ಮಾರಾಟ ಮಾಡುತ್ತಾರೆ. ಹೀಗೆ ಅಂದು ಕಡಿಮೆ ದರದಲ್ಲಿ ಹೆಚ್ಚಿನ ಬಂಗಾರ ಖರೀದಿಸಲು ಈಗಾಗಲೇ ಕೆಲವರು ಮುಂಗಡವಾಗಿಯೇ ತಮಗೆ ಇಂತಿಷ್ಟು ಬಂಗಾರ ನೀಡಬೇಕೆಂದು ಬುಕಿಂಗ್ ಮಾಡಿದ್ದಾರೆ ಎನ್ನಲಾಗಿದೆ.
ಕಳೆದು ಒಂದು ವಾರದಿಂದ ರಾಜ್ಯದ ನಾನಾ ಕಡೆ ಚುನಾವಣಾ ಆಯೋಗ ದಾಳಿ ನಡೆಸಿದ ಸಂದರ್ಭದಲ್ಲಿ ಕೆಜಿಗಟ್ಟಲೆ ಬಂಗಾರ, ಬೆಳ್ಳಿ , ಕೋಟಿಗಟ್ಟಲೇ ನಗದು ಸೇರಿದಂತೆ ಮತ್ತಿತರ ಬೆಲೆ ಬಾಳುವ ವಸ್ತುಗಳನ್ನು ವಶಪಡಿಸಿಕೊಂಡಿದೆ.

ರಾಜಧಾನಿ ಬೆಂಗಳೂರಿನಲ್ಲೇ ಅಂತಾರಾಷ್ಟ್ರೀಯ ಮಟ್ಟದ ಆಭರಣದ ಅಂಗಡಿಗಳಿವೆ. ರಾಜ್ಯಾದ್ಯಂತ ಒಟ್ಟು ಮೂರು ಲಕ್ಷ ಬಂಗಾರದ ಮಳಿಗೆಗಳಿದ್ದು ಪ್ರತಿದಿನ ಕೋಟಿಗಟ್ಟಲೇ ವಹಿವಾಟು ನಡೆಸುತ್ತಾರೆ. ಇದುವರೆಗೆ ಚುನಾವಣಾ ಆಯೋಗ ಒಟ್ಟು 7 ಕೆಜಿ ಬಂಗಾರವನ್ನು ವಶಪಡಿಸಿಕೊಂಡಿದೆ ಎಂದು ತಿಳಿದುಬಂದಿದೆ.

ಅಕ್ಷಯ ತೃತೀಯದಂದು ಯಾವ ಯಾವ ಅಂಗಡಿಗಳಲ್ಲಿ ಎಷ್ಟು ಪ್ರಮಾಣದಲ್ಲಿ ವಹಿವಾಟು ನಡೆಸಿದೆ, ಯಾರು ಎಷ್ಟು ಬಂಗಾರ ಖರೀದಿ ಮಾಡಿದ್ದಾರೆ ಎಂಬ ಇತ್ಯಾದಿ ವಿವರಗಳನ್ನು ನೀಡಬೇಕೆಂದು ಮಾಲೀಕರಿಗೆ ಆಯೋಗ ನಿರ್ದೇಶನ ಮಾಡಿದೆ.

50 ಸಾವಿರಕ್ಕಿಂತ ಮೇಲ್ಪಟ್ಟ ಯಾರಾದರೂ ಬಂಗಾರ ಖರೀದಿಸಿದರೆ ಪಾನ್‍ಕಾರ್ಡ್, ಆಧಾರ್, ಮತದಾರರ ಗುರುತಿನಚೀಟಿ ಸೇರಿದಂತೆ ಯಾವುದಾದರೊಂದು ದಾಖಲೆಯನ್ನು ನೀಡಬೇಕಾಗುತ್ತದೆ.
ಹೀಗೆ ಆಯೋಗ ಚುನಾವಣೆಯಲ್ಲಿ ನಡೆಯುವ ಅಕ್ರಮಕ್ಕೆ ಕಡಿವಾಣ ಹಾಕಲು ತನ್ನದೇ ಆದ ಕಾರ್ಯತಂತ್ರಗಳನ್ನು ಹೆಣೆದಿದ್ದು, ಈಗ ಬಂಗಾರದ ವಹಿವಾಟಿನ ಮೇಲೂ ಕಣ್ಣಿಟ್ಟಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ