ಬೆಂಗಳೂರು,ಏ.12- ರಾಜ್ಯದ ಎಲ್ಲ ಒಕ್ಕಲಿಗರು ಒಂದಾಗಿ ಜೆಡಿಎಸ್ ರಾಜಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರನ್ನು ಬೆಂಬಲಿಸಬೇಕೆಂದು ಎಲ್ಲ ಒಕ್ಕಲಿಗರ ಸಂಘಸಂಸ್ಥೆಗಳು ಮತ್ತು ರಾಜ್ಯ ಒಕ್ಕಲಿಗರ ಸಂಘವನ್ನು ಒತ್ತಾಯಿಸಲಾಗುವುದು ಎಂದು ಒಕ್ಕಲಿಗರ ಜಾಗೃತಿ ವೇದಿಕೆ ಕೆ.ಸಿ.ಗಂಗಾಧರ್ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮೈಸೂರು ಜಿಲ್ಲೆಯ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಒಕ್ಕಲಿಗರನ್ನು ಒಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತದಾರರಿಗೆ ಆಮಿಷವೊಡ್ಡುತ್ತಿದ್ದು , ಯಾರೂ ಕೂಡ ಆಮಿಷಕ್ಕೆ ಒಳಗಾಗಬಾರದು ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮತದಾನ ಮಾಡುವ ಮೂಲಕ ಅವರನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಕಾಂಗ್ರೆಸ್ ಸರ್ಕಾರ ರೈತರ ಸಾಲ ಮನ್ನಾ ಮಾಡಿಲ್ಲ.ಬಡರೈತರು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದೆ. ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಬಡಜನತೆಗೆ ಮನೆ ನಿರ್ಮಿಸಿಕೊಟ್ಟಿಲ್ಲ ಎಂದು ಆರೋಪಿಸಿದರು.
ಹಳೆ ಮೋರಿಗಳನ್ನು ಒಡೆದು ಹಣ ಲೂಟಿ ಮಾಡುವುದು ಕಾಂಗ್ರೆಸ್ನ ದಿನನಿತ್ಯದ ಕೆಲಸವಾಗಿದೆ. ಇಲಾಖೆಗಳಲ್ಲಿ ಹಣ ಮಾಡುವುದು ಒಂದು ದಂಧೆಯಾಗಿ ನಿರ್ಮಾಣವಾಗಿದೆ. ಇವನ್ನೆಲ್ಲ ತಡೆಯಲು ಪ್ರಾದೇಶಿಕ ಪಕ್ಷ ಜೆಡಿಎಸ್ ಅಧಿಕಾರಕ್ಕೆ ಬರಬೇಕು. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕಿದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಗೌರವಾಧ್ಯಕ್ಷ ಶಿವಣ್ಣ , ಕಾರ್ಯದರ್ಶಿ ಕೃಷ್ಣಪ್ಪ ಮುಂತಾದವರು ಇದ್ದರು.