ಬೆಂಗಳೂರು, ಏ.12- ಚಿತ್ರ ರಸಿಕರ ಅಣ್ಣ, ಕನ್ನಡಿಗರ ಕಣ್ಮಣಿ, ವರನಟ ಡಾ.ರಾಜ್ಕುಮಾರ್ ನಮ್ಮನ್ನಗಲಿ ಇಂದಿಗೆ 12 ವರ್ಷ ಸಂದ ಹಿನ್ನೆಲೆಯಲ್ಲಿ ಕಂಠೀರವ ಸ್ಟುಡಿಯೋ ಆವರಣದಲ್ಲಿರುವ ಡಾ.ರಾಜ್ ಪುಣ್ಯಭೂಮಿಯಲ್ಲಿಂದು 12ನೆ ವರ್ಷದ ಪುಣ್ಯಸ್ಮರಣೆ ನೆರವೇರಿತು.
ರಾಜ್ ಪುತ್ರರತ್ನರಾದ ಶಿವರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್, ಪುನಿತ್ ರಾಜ್ಕುಮಾರ್, ಪುತ್ರಿಯರಾದ ಲಕ್ಷ್ಮಿ, ಪೂರ್ಣಿಮಾ, ಮೊಮ್ಮಕ್ಕಳು, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು, ಚಿತ್ರರಂಗದ ಗಣ್ಯರು, ಮತ್ತಿತರರು ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ವರನಟನಿಗೆ ನಮನ ಸಲ್ಲಿಸಿದರು.
ಯೋಗ ಕೇಂದ್ರ ಸ್ಥಾಪನೆ: ಅಪ್ಪಾಜಿ ನಮ್ಮಿಂದ ದೂರವಾಗಿ ಇಂದಿಗೆ 12 ವರ್ಷ ತುಂಬಿದೆ ಎನ್ನುವುದನ್ನು ಊಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಪ್ಪಾಜಿ ಬದುಕಿದ್ದಾಗ ಪ್ರತಿನಿತ್ಯ ಯೋಗ ಮಾಡುತ್ತಿದ್ದರು. ಹೀಗಾಗಿ ಅವರ ಸಮಾಧಿ ಸ್ಥಳವಾದ ಪುಣ್ಯಭೂಮಿಯಲ್ಲೂ ಯೋಗ ಕೇಂದ್ರ ಸ್ಥಾಪಿಸುವ ಆಸೆ ಇದೆ. ಆದಷ್ಟು ಬೇಗ ಈ ಆಸೆಯನ್ನು ಪೂರೈಸುವುದಾಗಿ ರಾಘವೇಂದ್ರ ರಾಜ್ಕುಮಾರ್ ತಿಳಿಸಿದರು.
ಅಭಿಮಾನಿ ದೇವರುಗಳು: ಅಪ್ಪಾಜಿ ಬದುಕಿದ್ದಾಗ ಅಭಿಮಾನಿಗಳನ್ನು ದೇವರು ಎಂದು ಏಕೆ ಕರೆಯುತ್ತಿದ್ದರು ಎನ್ನುವುದಕ್ಕೆ ಅವರು ದೂರವಾಗಿ 12 ವರ್ಷ ಕಳೆದರೂ ಸಮಾಧಿ ಸ್ಥಳಕ್ಕೆ ಹರಿದು ಬರುತ್ತಿರುವ ಅಭಿಮಾನಿಗಳ ಸಾಗರವೇ ಸಾಕ್ಷಿ ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಭಾವಪರವಶರಾದರು.
ವಿದೇಶಕ್ಕೆ ಪುನಿತ್: ರಾಜ್ ಕಿರಿಯ ಪುತ್ರ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ವಿದೇಶಕ್ಕೆ ಪ್ರಯಾಣ ಬೆಳೆಸಬೇಕಾದ ಹಿನ್ನೆಲೆಯಲ್ಲಿ ಬೆಳ್ಳಂಬೆಳಗ್ಗೆಯೇ ಸಮಾಧಿ ಸ್ಥಳಕ್ಕೆ ಆಗಮಿಸಿ ಅಪ್ಪಾಜಿ ಅವರಿಗೆ ನಮಿಸಿ ಪ್ರಯಾಣ ಬೆಳೆಸಿದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ನೀತಿಸಂಹಿತೆ ಅಡ್ಡಿ: ವರನಟ ಡಾ.ರಾಜ್ಕುಮಾರ್ ಅವರ ಪುಣ್ಯತಿಥಿಯಂದು ಪುಣ್ಯಭೂಮಿಯಲ್ಲಿ ಶಾಮಿಯಾನ ಹಾಕಿಸಿ ಸಾವಿರಾರು ಅಭಿಮಾನಿಗಳಿಗೆ ಊಟ ಹಾಕಿಸಲಾಗುತ್ತಿತ್ತು. ಆದರೆ, ಈ ಬಾರಿ ಚುನಾವಣೆ ನೀತಿಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಶಾಮಿಯಾನ ಹಾಕಲು ಮತ್ತು ಅಭಿಮಾನಿಗಳಿಗೆ ಊಟ ಹಾಕಿಸಲು ಚುನಾವಣಾಧಿಕಾರಿಗಳು ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ತಮ್ಮ ಆರಾಧ್ಯ ದೈವನ ಪುಣ್ಯಸ್ಮರಣೆಗೆ ಆಗಮಿಸಿದ ಸಾವಿರಾರು ಅಭಿಮಾನಿಗಳು ಊಟವಿಲ್ಲದೆ ಮನೆಗೆ ತೆರಳುವಂತಾಯಿತು.