ಬೆಂಗಳೂರು, ಏ.12- ನನ್ನ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವೆ ಸಂಬಂಧ ಹಳಸಿದೆ ಎಂಬುದು ಆಧಾರ ರಹಿತ ವದಂತಿ. ಉಸಿರು ನಿಂತಾಗಲಷ್ಟೇ ನಮ್ಮಿಬ್ಬರ ಸಂಬಂಧ ಹಳಸಲು ಸಾಧ್ಯ ಎಂದು ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ಹೇಳಿದ್ದಾರೆ.
ಮುಖ್ಯಮಂತ್ರಿ ಅಧಿಕೃತ ನಿವಾಸ ಕಾವೇರಿಯಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮತ್ತು ಸಿದ್ದರಾಮಯ್ಯ ನಡುವೆ ಯಾವುದೇ ಜಟಾಪಟಿ ಇಲ್ಲ. ನಮ್ಮಿಬ್ಬರ ಸಂಬಂಧ ಉತ್ತಮವಾಗಿದೆ. ಟಿಕೆಟ್ ಹಂಚಿಕೆ ಸಂಬಂಧ ನಿರಂತರವಾಗಿ ಅವರ ಜತೆ ಚರ್ಚೆ ಮಾಡುತ್ತಿದ್ದೇವೆ. ನಿನ್ನೆ , ಮೊನ್ನೆ ಕೂಡ ಅವರನ್ನು ಭೇಟಿ ಮಾಡಿದ್ದೆ. ಇಂದೂ ಭೇಟಿ ಮಾಡಿದ್ದೇನೆ. ಸಿಎಂ ದೆಹಲಿಗೆ ತೆರಳಲಿದ್ದು, ಅದಕ್ಕೂ ಮುನ್ನ ಚರ್ಚೆ ನಡೆಸಿದ್ದೇನೆ ಎಂದು ಸ್ಪಷ್ಟ ಪಡಿಸಿದರು.
ಟಿಕೆಟ್ ಕೊಟ್ಟರೆ ಮಗನ ಸ್ಪರ್ಧೆ:
ಹೈಕಮಾಂಡ್ ಟಿಕೆಟ್ ಕೊಟ್ಟರೆ ನನ್ನ ಪುತ್ರ ಸುನೀಲ್ ಬೋಸ್ ಚುನಾವಣೆಯಲ್ಲಿ ಸ್ಪರ್ಧಿಸುತ್ತಾನೆ. ಇಲ್ಲವಾದರೆ ಇಲ್ಲ. ಆತ ಬೇರೆ ಪಕ್ಷಕ್ಕೆ ಹೋಗಿ ನನ್ನ ವಿರುದ್ಧವಾಗಿ ಸ್ಪರ್ಧಿಸುವ ಬೆದರಿಕೆ ಹಾಕಿದ್ದಾನೆ ಎಂಬುದು ಸುಳ್ಳು. ನನ್ನ ಮತ್ತು ನನ್ನ ಪುತ್ರನಡುವೆ ಹಾಗೂ ನನ್ನ ಹಾಗೂ ಸಿದ್ದರಾಮಯ್ಯ ಅವರ ನಡುವೆ ಮಾಧ್ಯಮಗಳಲ್ಲಿ ಆಧಾರ ರಹಿತ ಸುದ್ದಿಗಳು ಬಿತ್ತರವಾಗುತ್ತಿವೆ. ಸುನಿಲ್‍ಬೋಸ್ ಟಿ.ನರಸೀಪುರ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದು ನಿಜ. ಆದರೆ, ಪಕ್ಷದ ಮುಖಂಡರು ಮತ್ತು ಹೈಕಮಾಂಡ್ ನನ್ನಗೆ ಟಿ.ನರಸೀಪುರದಿಂದಲೇ ಸ್ಪರ್ಧಿಸುವಂತೆ ಸೂಚನೆ ನೀಡಿದೆ.
ಹೀಗಾಗಿ ನಾನು ಟಿ.ನರಸೀಂಪುರದಿಂದಲೇ ಸ್ಪರ್ಧಿಸುತ್ತಿದ್ದೇನೆ. ಅಷ್ಟೇ ಅಲ್ಲದೆ ವಿಜಯಪುರದ ನಾಗಠಾಣ ಸೇರಿದಂತೆ ಸುಮಾರು 15 ಕ್ಷೇತ್ರಗಳಿಂದ ನನಗೆ ಬೇಡಿಕೆ ಬಂದಿದ್ದು, ಅಷ್ಟೂ ಕ್ಷೇತ್ರದಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ. ಹೈಕಮಾಂಡ್ ಆದೇಶವನ್ನು ನಾವು ಪಾಲಿಸುತ್ತೇವೆ. ನನ್ನ ಮಗನಿಗೆ ಅವಕಾಶಕೊಟ್ಟರೆ ಆತ ಸ್ಪರ್ಧಿಸುತ್ತಾನೆ. ಇಲ್ಲವಾದರೆ ಇಲ್ಲ ಎಂದು ಮಹದೇವಪ್ಪ ಸ್ಪಷ್ಟಪಡಿಸಿದರು.