ಧರ್ಮ ಒಡೆಯುವುದು ವಿನಾಶದ ಮುನ್ನುಡಿ: ವಿದ್ಯಾವರ್ಧಕ ಸಂಘದ ನಿರ್ದೇಶಕ ಶ್ರೀ ಶೈಲ ರಾಮಣ್ಣನವರ್ ಆಕ್ರೋಶ

 

ಬೆಂಗಳೂರು, ಏ.10-ಧರ್ಮ ಒಡೆಯುವುದು ವಿನಾಶದ ಮುನ್ನುಡಿ. ಸ್ವಾರ್ಥ, ದ್ವೇಷ, ಅಸೂಯೆ ಇರುವವರು ಇಂತಹ ಕೆಲಸ ಮಾಡುವರು ಎಂದು ವಿದ್ಯಾವರ್ಧಕ ಸಂಘದ ನಿರ್ದೇಶಕ ಶ್ರೀ ಶೈಲ ರಾಮಣ್ಣನವರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲಿಂಗಾಯಿತರು, ವೀರಶೈವರು ಎಂಬ ಬೇಧ ಹುಟ್ಟಿಸಿ ಒಡೆದು ಆಳುವ ಮನಸ್ಥಿತಿಯ ಹುಂಬರು ಸನಾತನದ ಧರ್ಮವನ್ನು ಒಡೆಯುವ ಕುಚೋದ್ಯ ಮಾಡಿದ್ದಾರೆ. ಆದರೆ ಅವರ ದುಷ್ಟ ಆಸೆ ಈಡೇರಿವುದಿಲ್ಲ ಎಂದು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸಮುದಾಯವೂ ಇವರುಗಳು ಹೇಳಿದಂತೆ ಬೇರೆಯಾಗಲ್ಲ, ಅನಾದಿ ಕಾಲದಿಂದಲೂ ಹಿಂದೂ ಧರ್ಮದ ಅಡಿಯಲ್ಲಿ ಶಿವನ ಪೂಜೆಯಲ್ಲಿ ತೊಡಗಿದ್ದಾರೆ. ಶಿವಲಿಂಗವನ್ನು ಕೈಯಲ್ಲಿ ಹಿಡಿದು ಪೂಜಿಸುವ ಕಾರ್ಯ ಬಸವಣ್ಣನವರಿಗಿಂತ ಮುಂಚೆಯೇ ಇತ್ತು. ಆದರೆ ಇದನ್ನು ಮರೆಮಾಚಿದ್ದಾರೆ.
ಅದೇನೇ ಆಮಿಷಗಳು ತೋರಿದರೂ ಉದ್ದಾರ ಮಾಡುವ ಮಾತುಗಳನ್ನಾಡಿದರೂ ಸನಾತನ ಹಿಂದೂ ಧರ್ಮದಿಂದ ಹೊರಬರಲು ಯಾರೂ ಒಪ್ಪುವುದಿಲ್ಲ.

ಹಿಂದೆ ಶ್ರೀ ರೇಣುಕಾಚಾರ್ಯರ ಕಾಲದಿಂದಲೂ ಉಚ್ಚಾರದಲ್ಲಿ ವೀರಶೈವ, ಲಿಂಗಾಯಿತ ಎಂದು ಕರೆದಿದ್ದರೂ ಎರಡೂ ಸಮುದಾಯಗಳು ಒಂದೇ ಎಂಬ ಭಾವನೆ ಬಹುತೇಕರಲ್ಲಿದೆ. ಇದರ ವಿವಿಧ ಮಠಗಳ ಶ್ರೀಗಳು ಕೂಡ ಧರ್ಮ ಒಡೆಯುವ ಕೆಲಸಕ್ಕೆ ಕೈ ಹಾಕಬೇಡಿ ಎಂದು ಹೇಳಿದ್ದರೂ ಅದನ್ನು ಧಿಕ್ಕರಿಸಿ ಸರ್ಕಾರ ಜನರ ಭಾವನೆಯನ್ನು ಮತಕ್ಕಾಗಿ ವಿಭಜಿಸುತ್ತಿರುವುದು ದುರದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಅಲ್ಪಸಂಖ್ಯಾತರ ಸ್ಥಾನಮಾನ ಸಿಗುತ್ತದೆ ಎಂದು ಹೇಳುತ್ತಾರೆ. ಆದರೆ ಅದು ನಮಗೆ ಯಾಕೆ? ಈಗ ನಮ್ಮಲ್ಲಿ ಅನೇಕ ಮಠಮಾನ್ಯಗಳು, ಸರ್ವಧರ್ಮ ಶ್ರೇಷ್ಠತೆಯನ್ನು ಸಾರಿ ಸ್ವಾಸ್ಥ್ಯ ಸಮಾಜದತ್ತ ನಡೆಸುತ್ತಿರುವ ಸಂದರ್ಭದಲ್ಲೇ ಇಂತಹ ಪರಿಸ್ಥಿತಿ ಎದುರಾಗಿರುವುದು ವಿಪರ್ಯಾಸವೆಂದು ಹೇಳಿದ್ದಾರೆ.
ನಾವು ನಮ್ಮ ಹಿರಿಯರ ಆಚಾರ, ವಿಚಾರಗಳನ್ನು ಬದಲಿಸಲು ಸಾಧ್ಯವೇ. ಹೆಸರನ್ನು ಬದಲಿಸಿಕೊಳ್ಳಲು ಆಗುವುದೇ, ತಂದೆತಾಯಿಯನ್ನು ಬೇರೆಯವರು ಎಂದು ಹೇಳಲು ಸಾಧ್ಯವೇ. ಇವೆಲ್ಲ ವಿನಾಶ ಕಾಲಕ್ಕೆ ವಿಪರೀತ ಬುದ್ಧಿ ಎಂಬಂತೆ ಕೆಲ ಸ್ವಾರ್ಥಿಗಳು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಮಾತೆ ಮಹದೇವಿಯವರು ನಮಗೆ ಪ್ರತ್ಯೇಕ ಧರ್ಮಕ್ಕೆ ಶಿಫಾರಸು ಮಾಡಿದ ಸಿದ್ದರಾಮಯ್ಯರನ್ನು ಹೊಗಳುತ್ತಾರೆ, ಅವರಿಗೆ ಮಾನಸಿಕ ಸ್ಥಿಮಿತ ಇಲ್ಲ ಎಂಬಂತೆ ಕಾಣುತ್ತಿದೆ ಅಥವಾ ಯಾವುದೋ ಆಮಿಷಕ್ಕೆ ಒಳಗಾದಂತೆ ಕಾಣಿಸುತ್ತಿದೆ ಎಂದು ಆರೋಪಿಸಿದ್ದಾರೆ. ಅವರ ಸ್ವಾರ್ಥದ ಹಿಂದೆ ಏನಿದೆ ಎಂಬುದು ಸದ್ಯದಲ್ಲಿಯೇ ಬಯಲಾಗಲಿದೆ.
ಬ್ಲ್ಯಾಕ್‍ಮೇಲ್ ತಂತ್ರಗಾರಿಕೆ, ಓಲೈಕೆಯ ರಾಜಕಾರಣ ವಿಫಲವಾಗಲಿದೆ. ಸಮುದಾಯದಲ್ಲಿ ಪ್ರಜ್ಞಾವಂತರಿದ್ದಾರೆ. ಮತಿಹೀರ ದುರಾಲೋಚನೆಯ ಬಗ್ಗೆ ಅರ್ಥ ಮಾಡಿಕೊಳ್ಳುವ ಪ್ರಬುದ್ಧತೆ ಹೊಂದಿದ್ದಾರೆ. ಯೋಚಿಸಿ ಯಾರೋ ಹೇಳಿದರು ಎಂದು ಒಂದು ಪಕ್ಷಕ್ಕೆ ಮತ ಹಾಕುವಂತಹ ದಡ್ಡರಲ್ಲ ಎಂಬುದನ್ನು ತೋರಿಸುತ್ತಾರೆ ಎಂದಿದ್ದಾರೆ.

ರಾಜ್ಯ ಸರ್ಕಾರದ ಪ್ರತ್ಯೇಕ ಲಿಂಗಾಯತ ವೀರಶೈವ ಧರ್ಮವನ್ನು ಒಪ್ಪಿ ಕೇಂದ್ರಕ್ಕೆ ಶಿಫಾರಸು ಮಾಡಿರುವುದನ್ನು ಖಂಡಿಸಿದ್ದಾರೆ.
ಹಲವು ರಾಜಕಾರಣಿಗಳು ಕೂಡ ಈ ಧರ್ಮ ವಿಭಜನೆಗೆ ಮುಂದಾಗಿರುವುದು ಜನರನ್ನು ತಪ್ಪು ದಾರಿಗೆ ಎಳೆಯುತ್ತಿರುವುದು ದುರದೃಷ್ಟಕರ. ದೇವರೇ ಅವರಿಗೆ ಸದ್ಬುದ್ಧಿ ಕೊಡಲಿ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ