ಬಿಜೆಪಿಯಿಂದ ಎನ್.ಆರ್.ರಮೇಶ್‍ಗೆ ಟಿಕೆಟ್ ಕೈ ತಪ್ಪಿರುವುದಕ್ಕೆ ಬೆಂಬಲಿಗರ ಬೇಸರ: 1150ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಸಾಮೂಹಿಕ ರಾಜೀನಾಮೆಗೆ ನಿರ್ದಾರ

ಬೆಂಗಳೂರು, ಏ.10- ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಿಂದ ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ಅವರಿಗೆ ಟಿಕೆಟ್ ಕೈ ತಪ್ಪಿರುವುದರಿಂದ ಯಡಿಯೂರು ವಾರ್ಡ್‍ನ 1150ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಸಾಮೂಹಿಕ ರಾಜೀನಾಮೆಗೆ ನಿರ್ಧರಿಸಿದ್ದಾರೆ.
ಈ ಕೂಡಲೇ ಎನ್.ಆರ್.ರಮೇಶ್ ಅವರು ಬಿಜೆಪಿಗೆ ರಾಜೀನಾಮೆ ನೀಡಿ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿ ನಿಮ್ಮನ್ನು ಗೆಲ್ಲಿಸಿ ನಮ್ಮ ತಾಕತ್ತು ಏನೆಂಬುದನ್ನು ಆರ್.ಅಶೋಕ್ ಅವರಿಗೆ ಸಾಬೀತುಪಡಿಸೋಣ ಎಂದು ಕಾರ್ಯಕರ್ತರು ಪಟ್ಟು ಹಿಡಿದಿದ್ದಾರೆ.

ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ನಿನ್ನೆ ಎನ್.ಆರ್.ರಮೇಶ್ ಅವರು ಕೇಂದ್ರ ಸಚಿವ ಅನಂತ್‍ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿ ಪಕ್ಷ ತೊರೆಯುವ ಬೆದರಿಕೆ ಹಾಕಿದ್ದರು. ಈ ವಿಷಯ ತಿಳಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರು ಎನ್.ಆರ್.ರಮೇಶ್ ಅವರನ್ನು ಕರೆಸಿಕೊಂಡು ಸಮಾಧಾನಪಡಿಸಿದ್ದರು.

ಚಿಕ್ಕಪೇಟೆಯಲ್ಲಿ ನಿಮಗೆ ಟಿಕೆಟ್ ಕೊಟ್ಟರೆ ನಮಗೂ ಕೊಡಿ ಎಂದು ಕೆಲವರು ಪಟ್ಟು ಹಿಡಿದಿದ್ದಾರೆ. ಸಮಸ್ಯೆ ಉದ್ಭವವಾಗುತ್ತದೆ. ನಿಮಗೆ ಬೇಕೆಂದರೆ ಚಾಮರಾಜಪೇಟೆ ಅಥವಾ ಗಾಂಧಿನಗರದಲ್ಲಿ ಟಿಕೆಟ್ ಕೊಡುವುದಾಗಿ ಹೇಳಿದ್ದರು.
ಇವೆರಡೂ ಕ್ಷೇತ್ರ ಬೇಡವೆಂದರೆ ಭವಿಷ್ಯದಲ್ಲಿ ಸೂಕ್ತ ಸ್ಥಾನಮಾನ ಕೊಡುವುದಾಗಿಯೂ ಯಡಿಯೂರಪ್ಪ ಆಶ್ವಾಸನೆ ನೀಡಿದ್ದರು.

ಆದರೆ, ಎನ್.ಆರ್.ರಮೇಶ್ ತಮ್ಮ ಬೆಂಬಲಿಗರೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದ್ದರು. ಹಾಗಾಗಿ ಇಂದು ಎನ್.ಆರ್.ರಮೇಶ್ ತಮ್ಮ ಸಾವಿರಾರು ಬೆಂಬಲಿಗರೊಂದಿಗೆ ಸಭೆ ನಡೆಸಿ ಬಿಎಸ್‍ವೈ ಹೇಳಿದ್ದ ವಿಷಯವನ್ನು ತಿಳಿಸಿದರು.
ಆದರೆ, ಯಾವುದೇ ಕಾರಣಕ್ಕೂ ನೀವು ಮಣಿಯಬಾರದು. ನಿಮಗೆ ಆಗಿರುವ ಅನ್ಯಾಯವನ್ನು ತಕ್ಷಣ ಸರಿಪಡಿಸಬೇಕು. ಇಲ್ಲದಿದ್ದರೆ 1150ಕ್ಕೂ ಹೆಚ್ಚು ಕಾರ್ಯಕರ್ತರು ರಾಜೀನಾಮೆ ನೀಡುತ್ತಾರೆ ಎಂದು ಹೇಳಿbದ್ದಾರೆ.

ನೀವು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಿರಿ. ಗೆಲ್ಲಿಸುವ ಜವಾಬ್ದಾರಿ ನಮ್ಮದು ಎಂದು ಕಾರ್ಯಕರ್ತರು ಪಟ್ಟುಹಿಡಿದಿದ್ದಾರೆ.
ಕಾರ್ಯಕರ್ತರ ಈ ನಿರ್ಧರದಿಂದ ಎನ್.ಆರ್.ರಮೇಶ್ ಅಡಕತ್ತರಿಗೆ ಅಡಿಕೆ ಸಿಕ್ಕಂತಾಗಿದ್ದು, ಏನು ಮಾಡುವುದೆಂದು ನಿರ್ಧರಿಸಲಾಗದೆ ಗೊಂದಲಕ್ಕೀಡಾಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ