ಹೈದರಾಬಾದ್, ಏ.9-ಅಪ್ರಾಪ್ತೆಯ ಮೇಲೆ ಅತ್ಯಾಚಾರ ನಡೆಸಿ ಪರಾರಿಯಾಗಿದ್ದ ಆರೋಪಿಯೊಬ್ಬನನ್ನು ಹಿಡಿದ ಗ್ರಾಮಸ್ಥರು ಆತನಿಗೆ ಕಲ್ಲುಗಳಿಂದ ಹೊಡೆದು ಕೊಂದಿರುವ ಘಟನೆ ತೆಲಂಗಾಣದ ನಿಜಾಮುದ್ದಿನ್ ಜಿಲ್ಲೆಯ ಡೊಂಕೇಶ್ವರ್ ಗ್ರಾಮದಲ್ಲಿ ನಿನ್ನೆ ನಡೆದಿದೆ.
ಅತ್ಯಾಚಾರಿಗಾಗಿ ಪೆÇಲೀಸರು ತೀವ್ರ ಶೋಧ ನಡೆಸುತ್ತಿದ್ದಾಗ ನಿನ್ನೆ ರಾತ್ರಿ ಈ ಪ್ರಕರಣ ಬೆಳಕಿಗೆ ಬಂದಿತು. ಗ್ರಾಮಸ್ಥರಿಂದ ಭೀಕರವಾಗಿ ಕೊಲ್ಲಲ್ಪಟ್ಟ ಕಾಮುಕನನ್ನು ಸಾಯಣ್ಣ(45) ಎಂದು ಗುರುತಿಸಲಾಗಿದೆ. ಬಾಲಕಿ ಮೇಲೆ ಅತ್ಯಾಚಾರ ಎಸಗಿ ಪರಾರಿಯಾಗಿದ್ದ ಈತನನ್ನು ಹಿಡಿದ ಗ್ರಾಮಸ್ಥರು ಮನಬಂದಂತೆ ಥಳಿಸಿ ನಂತರ ಮರಕ್ಕೆ ಕಟ್ಟಿ ಹಾಕಿದರು. ಬಳಿಕ ಗ್ರಾಮದ ಎಲ್ಲರೂ ಆತನಿಗೆ ಸಾಯುವವರೆಗೂ ಕಲ್ಲುಗಳಿಂದ ಹೊಡೆದು ಕೊಂದರು.
ಸುದ್ದಿ ತಿಳಿದು ಪೆÇಲೀಸರು ಸ್ಥಳಕ್ಕೆ ಧಾವಿಸಿದಾಗ, ರಕ್ತದ ಮಡುವಿನಲ್ಲಿದ್ದ ಸಾಯಣ್ಣನನ್ನು ಆಸ್ಪತ್ರೆಗೆ ಕರೆದೊಯ್ದರು. ಮಾರ್ಗ ಮಧ್ಯೆ ಆತ ಕೊನೆಯುಸಿರೆಳೆದ.
ರಾಜ್ಯದಲ್ಲಿ ನಡೆದ ಮೊದಲ ಪ್ರಕರಣ ಇದಾಗಿದ್ದು, ಗ್ರಾಮ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಉದ್ವಿಗ್ನ ವಾತಾವರಣ ನೆಲೆಸಿದೆ. ಸಾಯಣ್ಣಗೆ ಗ್ರಾಮದ ಜನತಾ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿ ಆತ ಸಾಯುವ ತನಕ ಕಲ್ಲುಗಳಿಂದ ಹೊಡೆಯುವಂತೆ ಆದೇಶ ನೀಡಿತ್ತು ಎನ್ನಲಾಗಿದೆ. ನಕ್ಸಲರು ಇಂಥ ಜನತಾ ನ್ಯಾಯಾಲಯಗಳನ್ನು ನಡೆಸಿ ಶಿಕ್ಷೆ ವಿಧಿಸುತ್ತಾರೆ.