ಬೆಂಗಳೂರು,ಆ.10- ನೆರೆಯ ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳಿಂದ ರಾಜ್ಯಕ್ಕೆ ವಲಸೆ ಬರುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ರಾಜ್ಯ ಸರ್ಕಾರ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ.
ಆ.15ರ ಸ್ವಾತಂತ್ರ್ಯ ದಿನಾಚರಣೆ ನಂತರ ರಾಜಧಾನಿ ಬೆಂಗಳೂರು ಸೇರಿದಂತೆ ನೆರೆ ರಾಜ್ಯಗಳಿಗೆ ಗಡಿ ಹಂಚಿಕೊಂಡಿರುವ ಎಂಟು ಜಿಲ್ಲೆಗಳು ಹಾಗೂ ಕೋವಿಡ್-19 ಹೆಚ್ಚಾಗಿರುವ ಜಿಲ್ಲೆಗಳಲ್ಲೂ ಬಿಗಿಯಾದ ಕ್ರಮ ಜಾರಿಯಾಗುವ ಸಂಭವವಿದೆ.
ಈ ಬಗ್ಗೆ ಈಗಾಗಲೇ ಸುಳಿವು ಕೊಟ್ಟಿರುವ ಕಂದಾಯ ಸಚಿವ ಆರ್.ಅಶೋಕ್ ಅವರು ಆ.15ರ ನಂತರ ಬೆಂಗಳೂರು ಮತ್ತಿತರ ಕಡೆ ಕೆಲವು ಕಠಿಣ ನಿಯಮಗಳನ್ನು ಜಾರಿ ಮಾಡುವುದು ಅನಿವಾರ್ಯ ಎಂದು ಹೇಳಿದ್ದಾರೆ.
ಹೀಗಾಗಿ ಬೆಂಗಳೂರಿನಲ್ಲಿ ರಾತ್ರಿ 7 ಗಂಟೆಯಿಂದ ಮುಂಜಾನೆ 6 ಗಂಟೆವರೆಗೆ ನೈಟ್ ಕಫ್ರ್ಯೂ ಹಾಗೂ ಶುಕ್ರವಾರ ರಾತ್ರಿಯಿಂದ ಸೋಮವಾರ ಮುಂಜಾನೆವರೆಗೆ ವೀಕೆಂಡ್ ಕಫ್ರ್ಯೂ ಜಾರಿಯಾಗುವ ಸಂಭವವಿದೆ.
ಸರ್ಕಾರಕ್ಕೆ ವರದಿ ನೀಡಿರುವ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಕೂಡ ಕೆಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಶಿಫಾರಸ್ಸು ಮಾಡಿರುವುದರಿಂದ ವಿಧಿ ಇಲ್ಲದೆ ಸರ್ಕಾರ ಕೋವಿಡ್ ನಿಯಂತ್ರಣಕ್ಕಾಗಿ ಕೆಲವು ನಿಬಂಧನೆಗಳನ್ನು ವಿಧಿಸಲು ಚಿಂತನೆ ನಡೆಸಿದೆ.
ಆ.15ರ ನಂತರ ಸಾಲು ಸಾಲು ಹಬ್ಬಗಳು ಬರುವುದರಿಂದ ಜನಜಂಗುಳಿ ಉಂಟಾಗುತ್ತದೆ. ಇದರಿಂದ ಸೋಂಕು ಹೆಚ್ಚಳವಾಗುವುದನ್ನು ತಪ್ಪಿಸಲು ಸರ್ಕಾರ ಕಠಿಣ ನಿಯಮಗಳನ್ನು ಜಾರಿ ಮಾಡಲು ಚಿಂತನೆ ನಡೆಸಿದೆ.
ನಗರದ ಪ್ರಮುಖ ದೇಗುಲಗಳು ಬಂದ್ ಆಗಬಹುದು. ದರ್ಶನ, ತೀರ್ಥ, ಪ್ರಸಾದ, ಎಲ್ಲಕ್ಕೂ ನಿಷೇಧ ಹೇರಬಹುದು. ದೇವಾಲಯ ತೆರೆಯಲು ಒತ್ತಾಯಗಳು ಬಂದರೆ ಮಾರ್ಷಲ್ಸ್, ಪೊಲೀಸ್ ನಿಗಾ ವಹಿಸಬಹುದು. ಅರ್ಚಕರು, ದೇವಾಲಯ ಸಿಬ್ಬಂದಿಗೆ ಪ್ರತಿ ಹಬ್ಬಕ್ಕೆ ಮುನ್ನ ಕಡ್ಡಾಯ ಕೋವಿಡ್ ಪರೀಕ್ಷೆ ಮಾಡಿಸುವುದು, ಒಂದು ವೇಳೆ, ದೇಗುಲದ ಓರ್ವ ಸಿಬ್ಬಂದಿಗೆ ಪಾಸಿಟಿವ್ ಬಂದರೆ ದೇಗುಲಕ್ಕೆ ಬೀಗ ಹಾಕುವ ಸಾಧ್ಯತೆಗಳು ಕೂಡ ದಟ್ಟವಾಗಿವೆ.
ಮಾರುಕಟ್ಟೆಗಳು ಹಾಟ್ಸ್ಪಾಟ್ಗಳಾಗೋ ಆತಂಕವಿರುವ ಹಿನ್ನೆಲೆಯಲ್ಲಿ ಮಾರುಕಟ್ಟೆಗಳಲ್ಲಿ ಸುವ್ಯವಸ್ಥಿತವಾದ ಬ್ಯಾರಿಕೇಡ್ ವ್ಯವಸ್ಥೆ ಮಾಡಿ, ಸೂಪರ್ ಮಾರುಕಟ್ಟೆ ಐಡಿಯಾಗಳೇ ಬಳಸುವ ಆಲೋಚನೆ ಇದೆ. ನಿಗದಿತ ಸಂಖ್ಯೆಯಲ್ಲಿ ಮಾತ್ರ ಜನರ ಓಡಾಟಕ್ಕೆ ಅವಕಾಶ ನೀಡಲಿದ್ದು, ಒಂದು ಬಾರಿಗೆ 100 ಜನರಿಗೆ ಖರೀದಿಗೆ ಅವಕಾಶ ಕೊಡುವ ಸಾಧ್ಯತೆಯಿದೆ. ಆ ಗ್ರಾಹಕರು ವಾಪಸ್ ಬಂದ ನಂತರ ಮತ್ತೆ ಉಳಿದವರಿಗೆ ಅವಕಾಶ ನೀಡುವ ಚಿಂತನೆ ನಡೆಸಲಾಗುತ್ತಿದೆ.
ಮಾರ್ಷಲ್ಗಳು, ಪೊಲೀಸರ ಮೂಲಕ ತೀವ್ರ ನಿಗಾ ಇರಿಸಿ, ಪ್ರತಿ ಹಬ್ಬಗಳ 2 ದಿನದ ಮುನ್ನವೇ ಈ ವ್ಯವಸ್ಥೆ ಜಾರಿಯಾಗುವ ಸಾಧ್ಯತೆ ಇದೆ. ಪರಿಸ್ಥಿತಿ ನಿಯಂತ್ರಣ ತಪ್ಪಿದರೆ ಮಾರ್ಕೆಟ್ಗಳಿಗೆ ಬೀಗ ಹಾಕುವ ಸಾಧ್ಯತೆಯೂ ಇದೆ. ಆದರೆ ಮಾರುಕಟ್ಟೆಗಳ ನಿಯಂತ್ರಣ ಕಷ್ಟಸಾಧ್ಯ. ರೈತರು, ಬಡ ವ್ಯಾಪಾರಿಗಳ ಊಟದ ಲೆಕ್ಕ ನೋಡಿಕೊಂಡೇ ಬಂದ್ ಮಾಡಬೇಕಾಗುತ್ತದೆ. ಹೀಗಾಗಿ ಹೊಸ ಚಿಂತನೆ ಸಹ ಉತ್ತಮವಾಗಿದೆ. ಈ ಕುರಿತು ಪೆÇಲೀಸ್ ಕಮೀಷನರ್ ಜೊತೆ ಚರ್ಚಿಸಿದ ಬಳಿಕ ಅಂತಿಮ ತೀರ್ಮಾನವಾಗಲಿದೆ.
ಇಷ್ಟು ಮಾತ್ರವಲ್ಲದೆ ಆಗಸ್ಟ್ 15ರ ಬಳಿಕ ಜನ ಸೇರೋ ಎಲ್ಲಾ ಕಾರ್ಯಕ್ರಮಗಳು ಬ್ಯಾನ್, ಹುಟ್ಟುಹಬ್ಬ, ಮದುವೆ ಕಾರ್ಯಕ್ರಮಗಳಿಗೆ ಅನುಮತಿ ಇರುವುದಿಲ್ಲ ಹಾಗೂ ಫ್ರೆಂಡ್ಸ್, ಫ್ಯಾಮಿಲಿ ಪಾರ್ಟಿ ಯಾವುದಕ್ಕೂ ಪರ್ಮಿಷನ್ ಸಿಗದೇ ಇರುವ ಸಾಧ್ಯತೆಗಳು ಕೂಡ ದಟ್ಟವಾಗಿದೆ.
ಸೋಂಕು 500ರ ಗಡಿ ತಲುಪಿದರೆ ವೀಕೆಂಡ್ ಲಾಕ್ಡೌನ್ ಫಿಕ್ಸ್ ಆಗಲಿದ್ದು, ಹಂತ ಹಂತವಾಗಿ ದೇವಾಲಯ, ಜಿಮ್, ಮಾರುಕಟ್ಟೆ ಮೇಲೆ ಕಂಟ್ರೋಲ್ ತರಬಹುದು. ಆಗಲೂ ಸೋಂಕು ಇಳಿಮುಖ ಆಗದಿದ್ದರೆ ಇನ್ನೂ ಕಠಿಣ ಕ್ರಮ ತಪ್ಪಿದ್ದಲ್ಲ. ಇವೆಲ್ಲವೂ ಆಗಸ್ಟ್ 15ರ ಬಳಿಕ ಏನೆಲ್ಲಾ ಕ್ರಮ ಆಗಬಹುದು ಎಂಬ ಬಗ್ಗೆ ಬೆಂಗಳೂರು ನಗರ ಉಸ್ತುವಾರಿ ಸಚಿವರೂ ಆಗಿರೋ ಕಂದಾಯ ಸಚಿವ ಅಶೋಕ್ ಅವರು ಸುಳಿವು ಕೊಟ್ಟಿದ್ದಾರೆ.