ಬೆಂಗಳೂರು, ಜು.14- ಉತ್ತರ ಪ್ರದೇಶ ಮತ್ತು ಅಸ್ಸಾಂ ರಾಜ್ಯಗಳು ಜನಸಂಖ್ಯೆ ನಿಯಂತ್ರಣ ನೀತಿಯನ್ನು ಅನುಷ್ಠಾನಗೊಳಿಸುತ್ತಿರುವ ಬೆನ್ನಲ್ಲೇ ಕರ್ನಾಟಕದಲ್ಲೂ ಅಂಥದ್ದೊಂದು ನೀತಿ ಜಾರಿಗೊಳಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನಾ ಕಾರ್ಯದರ್ಶಿ ಸಿ.ಟಿ.ರವಿ, ಜನಸಂಖ್ಯೆ ಸ್ಫೋಟವಾದರೆ ಸೀಮಿತ ನೈಸರ್ಗಿಕ ಸಂಪತ್ತಿನಲ್ಲಿ ಪ್ರತಿಯೊಬ್ಬ ನಾಗರಿಕನ ಅಗತ್ಯಗಳನ್ನು ಪೂರೈಸುವುದು ತುಂಬ ಕಷ್ಟವಾಗುತ್ತದೆ. ಹೀಗಾಗಿ ಜನಸಂಖ್ಯೆ ನಿಯಂತ್ರಣಕ್ಕಾಗಿ ಉತ್ತರಪ್ರದೇಶ ಮತ್ತು ಅಸ್ಸಾಂ ರಾಜ್ಯಗಳ ಮಾದರಿಯಲ್ಲೇ ಕರ್ನಾಟಕದಲ್ಲೂ ಹೊಸ ನೀತಿ ಅಳವಡಿಸಿಕೊಳ್ಳಲು ಇದು ಅತ್ಯಂತ ಸೂಕ್ತ ಕಾಲ ಎಂದಿದ್ದಾರೆ.
ಈ ಬಗ್ಗೆ ಆಳ ಮತ್ತು ವಿಸ್ತ್ತೃತ ಚರ್ಚೆಯ ಬಳಿಕ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ರಾಜ್ಯ ಕಾನೂನು ಸಚಿವ ಬಸವರಾಜ ಬೊಮ್ಮಾಯಿ ಹೇಳಿರುವುದು ಮಹತ್ವ ಪಡೆದುಕೊಂಡಿದೆ.
ಇದು ನಿಯಮ ರೂಪಿಸುವ ವಿಷಯವಾಗಿದೆ ಮತ್ತು ನಾವು ವಿವಿಧ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಗಿದೆ. ನಾವು ಡೇಟಾವನ್ನು ನೋಡಬೇಕಾಗಿದ್ದು, ಅಗತ್ಯವಿದ್ದರೆ, ತಜ್ಞರೊಂದಿಗೆ ಸಮಾಲೋಚಿಸಿ ಯಾವುದೇ ನೀತಿಯನ್ನು ರೂಪಿಸಬೇಕು. ವಾಸ್ತವವಾಗಿ, ಇದು ತಜ್ಞರೊಂದಿಗೆ ಚರ್ಚಿಸಿದ ನಂತರ ಮತ್ತು ಅಂತಹ ಚರ್ಚೆಗಳ ಫಲಿತಾಂಶವನ್ನು ಅವಲಂಬಿಸಿ ನಾವು ಮುಂದಿನ ಹಂತದ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ.
ಕರ್ನಾಟಕ ಆರ್ಥಿಕ ಸಮೀಕ್ಷೆ 2020-21ರ ಪ್ರಕಾರ ರಾಜ್ಯದ ಒಟ್ಟು ಫಲವತ್ತತೆ ದರ (ಟಿಎಫ್ಆರ್) – ಜನಸಂಖ್ಯೆಯ ನಿಯಂತ್ರಣವನ್ನು ಅಳೆಯುವ ಮಾಪನ – 2020 ರಲ್ಲಿ 1.7 ರಷ್ಟಿತ್ತು. 2025 ರ ವೇಳೆಗೆ ರಾಷ್ಟ್ರೀಯ ಗುರಿ 2.1 ಕ್ಕೆ ನಿಗದಿಪಡಿಸಲಾಗಿದೆ, ಕರ್ನಾಟಕದ ಟಿಎಫ್ಆರ್ 1999 ರಲ್ಲಿ 2.5 ರಿಂದ 2020 ರಲ್ಲಿ 1.7 ಕ್ಕೆ ಸ್ಥಿರ ಕುಸಿತ ಕಂಡಿದೆ. ಇದು ಕೇವಲ ಟಿಎಫ್ಆರ್ ಬಗ್ಗೆ ಮಾತ್ರವಲ್ಲ, ಜನನ ನಿಯಂತ್ರಣ ಪದ್ಧತಿ ಅಳವಡಿಸಿಕೊಂಡಾಗಲೂ ಕರ್ನಾಟಕವು ಉತ್ತಮವಾಗಿ ಕಾರ್ಯನಿರ್ವಹಿಸುವ ರಾಜ್ಯವಾಗಿದೆ.
2020-21ರ ಅವಧಿಯಲ್ಲಿ ನವೆಂಬರ್ವರೆಗೆ ಒಟ್ಟು ಸಂತಾನಹರಣ 1,02,227 ಮತ್ತು ಐಯುಡಿ (ಗರ್ಭಾಶಯದ ಸಾಧನ)ಅಳವಡಿಕೆ 1,33,412 ಆಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಆರ್ಥಿಕ ಸಮೀಕ್ಷೆಯಲ್ಲಿ ಹೇಳುತ್ತದೆ.
1,000 ಜನಸಂಖ್ಯೆಗೆ ಕರ್ನಾಟಕದ ಜನನ ಪ್ರಮಾಣವು 2019 ರಲ್ಲಿ 14.51 ಆಗಿತ್ತು. 2015 ಮತ್ತು 2016ರ ನಡುವೆ 1.8ರಷ್ಟಿದ್ದ ಟಿಎಫ್ಆರ್ 2019 ಮತ್ತು 2020ರ ನಡುವೆ 1.7ಕ್ಕೆ ಇಳಿದಿದೆ ಎಂದು ತಿಳಿಸಿದೆ.
ಭಾರತದ ಐದನೇ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ವರದಿ ಪ್ರಕಾರ, ಭಾರತದಲ್ಲಿ 2020ರ ವೇಳೆಗೆ ಪ್ರತಿ ಮಹಿಳೆಗೆ 2.2ರಷ್ಟು ಮಕ್ಕಳು ಜನಿಸುತ್ತಿದ್ದಾರೆ. 2016ರ ನೀತಿ ಆಯೋಗದ ಅಂಕಿ-ಅಂಶಗಳ ಪ್ರಕಾರ, ಜನನ ಪ್ರಮಾಣ ಉತ್ತರ ಪ್ರದೇಶ 3.1, ಬಿಹಾರ 3.3, ಛತ್ತೀಸ್ ಗಢ 2.5, ಮಧ್ಯಪ್ರದೇಶ 2.8ರಷ್ಟಿದೆ. ದಕ್ಷಿಣ ಭಾರತದ ಪೈಕಿ ಆಂಧ್ರ ಪ್ರದೇಶ 1.7, ಕರ್ನಾಟಕ 1.8, ಕೇರಳ 1.8, ತೆಲಂಗಾಣ 1.7, ತಮಿಳುನಾಡು 1.6ರಷ್ಟಿದ್ದು, ದೇಶದಲ್ಲಿ ಸರಾಸರಿ ಜನನ ಪ್ರಮಾಣ 2.1ರಷ್ಟಿದೆ.
ಕರ್ನಾಟಕದಲ್ಲಿ ಈಗಾಗಲೇ ಜನಸಂಖ್ಯೆ ಕ್ಷೀಣಿಸುತ್ತಿದೆ. ಇಂಥ ರಾಜ್ಯದಲ್ಲಿ ಜನಸಂಖ್ಯೆ ನಿಯಂತ್ರಿಸುವುದಕ್ಕಾಗಿ ದೀರ್ಘಾವಧಿ ನೀತಿಯನ್ನು ಜಾರಿಗೊಳಿಸುವ ಬಗ್ಗೆ ಮಾತನಾಡುತ್ತಿದ್ದಾರೆ. ಅದಾಗ್ಯೂ, ಆಡಳಿತ ಪಕ್ಷ ಬಿಜೆಪಿಯು ತನ್ನ ನಾಯಕರ ಹೇಳಿಕೆಗಳನ್ನು ಸಮರ್ಥಿಸಿಕೊಳ್ಳುತ್ತಿದೆ.
ಭಾರತದಲ್ಲಿ ಜನಸಂಖ್ಯೆಯನ್ನು ನಿಯಂತ್ರಿಸಬೇಕಿದೆ, ಅದು ಎಲ್ಲರಿಂದ ಮಾತ್ರ ಸಾಧ್ಯವಾಗುತ್ತದೆ. ಇದು ಕೇವಲ ಒಂದು ರಾಜ್ಯವನ್ನು ಗುರಿಯಾಗಿಸಿಕೊಂಡು ಮಾತನಾಡುವುದಲ್ಲ. ಒಂದು ವೇಳೆ ಕರ್ನಾಟಕದಲ್ಲಿ ಜನಸಂಖ್ಯೆ ನಿಯಂತ್ರಿಸುವುದಕ್ಕೆ ಅಂಥದೊಂದು ನೀತಿಯನ್ನು ಜಾರಿಗೊಳಿಸುವ ಪ್ರಸ್ತಾಪ ಬಂದರೆ ಅದನ್ನು ಸ್ವಾಗತಿಸಲಾಗುವುದು ಎಂದು ಬಿಜೆಪಿ ಮುಖಂಡರೊಬ್ಬರು ಹೇಳಿದ್ದಾರೆ.
ಉತ್ತರಪ್ರದೇಶದ ಜನಸಂಖ್ಯೆ (ನಿಯಂತ್ರಣ, ಸ್ಥಿರೀಕರಣ ಮತ್ತು ಕಲ್ಯಾಣ) ಮಸೂದೆ, 2021 ಎಂಬ ಶೀರ್ಷಿಕೆಯ ಪ್ರಸ್ತಾವಿತ ಶಾಸನವು ಗೆಜೆಟ್ನಲ್ಲಿ ಪ್ರಕಟವಾದ ದಿನಾಂಕದಿಂದ ಒಂದು ವರ್ಷದ ನಂತರ ಜಾರಿಗೆ ಬರಲಿದೆ ಎಂದು ಉತ್ತರ ಪ್ರದೇಶ ರಾಜ್ಯ ಕಾನೂನು ಆಯೋಗ (ಯುಪಿಎಸ್ಎಲ್ಸಿ)ದ ಅಧಿಕೃತ ವೆಬ್ಸೈಟ್ನಲ್ಲಿ ತಿಳಿಸಲಾಗಿದೆ.
ಈ ಶಾಸನದ ನಿಬಂಧನೆಯು ವಿವಾಹಿತ ದಂಪತಿಗಳಿಗೆ ಅನ್ವಯಿಸುತ್ತದೆ. 21 ವರ್ಷ ಮೇಲ್ಪಟ್ಟ ಪುರುಷ ಹಾಗೂ 18 ವರ್ಷ ಮೇಲ್ಪಟ್ಟ ಮಹಿಳೆ ಬಗ್ಗೆ ಉಲ್ಲೇಖಿಸಲಾಗಿದೆ. ಈ ಬಗ್ಗೆ ಜುಲೈ 19ರವರೆಗೂ ಸಾರ್ವಜನಿಕರಿಂದ ಸಲಹೆ ಸೂಚನೆ ಮತ್ತು ಅಭಿಪ್ರಾಯ ಪಡೆದುಕೊಳ್ಳಲು ನಿರ್ಧರಿಸಲಾಗಿದೆ.