ಬೆಂಗಳೂರು: ವಿದೇಶದಿಂದ ಕರ್ನಾಟಕಕ್ಕೆ ಬಂದಿರುವವರು ಸ್ವಯಂಪ್ರೇರಿತರಾಗಿ ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮನವಿ ಮಾಡಿದರು.
ಬುಧವಾರ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬ್ರಿಟನ್ನಿಂದ ಕೊರೋನಾ ಸೋಂಕು ವೇಗವಾಗಿ ಹರಡುತ್ತಿದೆ. ಕಳೆದ ಎರಡು ತಿಂಗಳಿಂದೀಚೆಗೆ ಯುಕೆಯಿಂದ ಆಗಮಿಸಿರುವವರು ಕಡ್ಡಾಯವಾಗಿ ಕೋವಿಡ್ ಪರೀಕ್ಷೆಗೆ ಒಳಗಾಗಬೇಕು ಎಂದರು.
ಈಗಾಗಲೇ ಕೇಂದ್ರ ಆರೋಗ್ಯ ಇಲಾಖೆಯು ಕಟ್ಟೆಚ್ಚರ ವಹಿಸಿ, ಹೊರಗಿನಿಂದ ಬಂದವರನ್ನು ಚಾಚೂತಪ್ಪದೆ ಸರಿಯಾದ ರೀತಿ ಪರೀಕ್ಷೆ ಮಾಡಿ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚನೆ ನೀಡಿದೆ.
ವಿದೇಶಗಳಿಂದ ಬಂದಿರುವವರು ಕಣ್ತಪ್ಪಿಸಿಕೊಂಡು ಓಡಾಡುವುದನ್ನು ಬಿಟ್ಟು, ಪರೀಕ್ಷೆ ಮಾಡಿಸಿಕೊಳ್ಳುವುದು ಒಳಿತು. ಈ ವೈರಾಣುವು ಬಹಳ ದೊಡ್ಡ ಪ್ರಮಾಣದಲ್ಲಿ ಹರಡುವ ಸಾಮರ್ಥ್ಯ ಇರುವುದರಿಂದ ತಡೆಗಟ್ಟಲು ಅನುಕೂಲ ಆಗಲಿದೆ. ಎರಡು ತಿಂಗಳಿನಿಂದ ಹೊರಗಿನಿಂದ ಬಂದವರು ಒಂದು ಬಾರಿ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಬೇಕು. ಇಲ್ಲದಿದ್ದರೆ ಬೇರೆಯವರಿಗೆ ತೊಂದರೆ ಆಗುತ್ತದೆ. ಅದಕ್ಕೆ ಅವಕಾಶ ಕೊಡದೆ ಕೊರೋನಾ ತಡೆಯುವದಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಮಾರ್ಗಸೂಚಿ ಬದಲಾವಣೆ ಇಲ್ಲ:
ಕೊರೋನಾ ಸೋಂಕು ತಡೆ ಹಿನ್ನೆಲೆಯಲ್ಲಿ ಹಾಲಿ ಅನುಸರಿಸುತ್ತಿರುವ ಮಾರ್ಗಸೂಚಿ ಮುಂದುವರಿಯಲಿದೆ. ಸದ್ಯ ಮಾರ್ಗಸೂಚಿ ಬದಲಾವಣೆ ಇಲ್ಲ. ಕೇಂದ್ರದಿಂದ ಸೂಚನೆ ಬಂದಲ್ಲಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ವಿವರಿಸಿದರು.