ಬೆಂಗಳೂರು: ಅಂಬೇಡ್ಕರ್ ಅವರ ಆಶಯದಂತೆ ಜಾತಿರಹಿತ, ಶೋಷಣೆಮುಕ್ತ ಸಮಸಮಾಜ ನಿರ್ಮಾಣ ಮಾಡುವುದು ಸರ್ಕಾರ ಗುರಿಯಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಆಯೋಜಿಸಿರುವ ಸಂವಿಧಾನ ಶಿಲ್ಪಿ ಬಿ.ಆರ್. ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನದ ಅಂಗವಾಗಿ ವಿಧಾನಸೌಧದ ಆವರಣದಲ್ಲಿರುವ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಮಾತನಾಡಿದ ಅವರು, ಅಂಬೇಡ್ಕರ್ ಅವರು ವಿಶ್ವಕಂಡ ಪ್ರಭಾವಶಾಲಿ ವ್ಯಕ್ತಿ, ಬಹುಮುಖ ವ್ಯಕ್ತಿತ್ವ ಹೊಂದಿದ್ದ, ದೇಶದ ಏಳಿಗೆಗೆ ಅವರ ಪಾತ್ರಬಹುಮುಖ್ಯ. ಅವರು ಅತ್ಯುತ್ತಮ ಅರ್ಥ ಶಾಸ್ತ್ರಜ್ಞರಾಗಿದ್ದರು. ಮಹಿಳೆಯರಿಗೆ ಸಮಾನತೆ, ಕಾರ್ಮಿಕರ ಕಲ್ಯಾಣ, ಶಿಕ್ಷಣ, ವಿದ್ಯುತ್ ಉತ್ಪಾದನೆ, ಸ್ವಾತಂತ್ರ್ಯದ ಹಕ್ಕುಗಳ ಬಗ್ಗೆ ಅಪಾರ ಕೆಲಸ ಮಾಡಿದ್ದಾರೆ. ವಿಶ್ವದಲ್ಲಿ ಶ್ರೇಷ್ಠವಾದ ಸಂವಿಧಾನ ರಚಿಸಿಕೊಟ್ಟು ಪ್ರಜಾಪ್ರಭುತ್ವಕ್ಕೆ ಮೂರ್ತ ರೂಪ ನೀಡಿದರು. ಅವರ ಆದರ್ಶಗಳನ್ನು ಅನುಕರಣನೀಯ, ಎಲ್ಲರೂ ಅವರು ಹಾಕಿಕೊಟ್ಟ ಹಾದಿಯಲ್ಲೇ ನಡೆಯಬೇಕು ಎಂದರು.
ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯ ತಲುಪಿಸಬೇಕು ಮತ್ತು ಸಮಸಮಾಜ ನಿರ್ಮಾಣ ಮಾಡುವುದು ನಮ್ಮ ಸರ್ಕಾರ ಗುರಿಯಾಗಿದೆ. ಸಮಸಮಾಜ ಗುರಿ ಸಾಸಲು ಅಗತ್ಯ ಯೋಜನೆ ರೂಪಿಸಲಾಗುವುದು ಎಂದರು.
ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು, ಮಾಜಿ ಸಚಿವ ಎಚ್.ಆಂಜನೇಯ, ಸಮಾಜ ಕಲ್ಯಾಣ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ನಾಗಲಾಂಬಿಕಾದೇವಿ ಇದ್ದರು