ಮಡಿಕೇರಿ: ಕಳೆದ 2-3 ತಿಂಗಳಿಂದ ಪೊಲೀಸ್ ಇಲಾಖೆ ಡ್ರಗ್ಸ್ ವಿರುದ್ಧ ಯುದ್ಧವನ್ನು ಆರಂಭಿಸಿದೆ. ಡ್ರಗ್ಸ್ ನ ಬಳಕೆ, ಮಾರಾಟ, ಸಾಗಾಟಕ್ಕೆ ಸಂಪೂರ್ಣ ಕಡಿವಾಣ ಹಾಕುವ ಉದ್ದೇಶದಿಂದ ಈ ಯುದ್ಧ ಪ್ರಾರಂಭಿಸಲಾಗಿದ್ದು, ಈ ಮಾರಕ ಜಾಲವನ್ನು ರಾಜ್ಯದಿಂದಲೇ ಕಿತ್ತು ಹಾಕಬೇಕಿದೆ. ಹೀಗಾಗಿ ಸಾರ್ವಜನಿಕರು ಇಂತಹ ಮಾದಕ ಅವ್ಯವಹಾರಗಳ ಬಗ್ಗೆ ಮಾಹಿತಿ ಇದ್ದಲ್ಲಿ, ಪೊಲೀಸ್ ಇಲಾಖೆಗೆ ನೀಡಬೇಕು ಎಂದು ದಕ್ಷಿಣ ವಲಯ ಪೊಲೀಸ್ ಮಹಾ ನಿರೀಕ್ಷಕ ವಿಪುಲ್ ಕುಮಾರ್ ತಿಳಿಸಿದರು.
ಮುಂದಿನ 2 ತಿಂಗಳಲ್ಲಿ ಎಲ್ಲ ರೀತಿಯ ತುರ್ತು ಸೇವೆಗಳಿಗೆ ಡಯಲ್ 112 ಆರಂಭವಾಗಲಿದ್ದು, ಈ ಬಗ್ಗೆಯೂ ವಾಹನ ಜಾಥಾದ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತಿದೆ. ಪೊಲೀಸ್, ಅಗ್ನಿ ಶಾಮಕ ಇಲಾಖೆ, ಆರೋಗ್ಯ ಇಲಾಖೆ ಸೇರಿದಂತೆ ಎಲ್ಲ ರೀತಿಯ ತುರ್ತು ಸೇವೆಗಳನ್ನು ಪಡೆಯಲು 112 ಡಯಲ್ ಆರಂಭವಾಗಿದ್ದು, ಮುಂದಿನ 2 ತಿಂಗಳ ಒಳಗಾಗಿ ಕೊಡಗು ಜಿಲ್ಲೆಯಲ್ಲಿಯೂ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬರಲಿದೆ ಎಂದು ಹೇಳಿದರು.
ಕೂಂಬಿಂಗ್ ನಿರಂತರ
ಕೊಡಗಿನ ಗಡಿ ಭಾಗಗಳಲ್ಲಿ ಎಎನ್ಎಫ್, ಅರಣ್ಯ ಇಲಾಖೆ ಮೂಲಕ ನಿರಂತರವಾಗಿ ಕೂಂಬಿಂಗ್ ಕಾರ್ಯಾಚರಣೆ ನಡೆಯುತ್ತಿದೆ. ಕೊಡಗು ಜಿಲ್ಲೆಯಲ್ಲಿ ಸಮಾಜ ಘಾತುಕ ಶಕ್ತಿಗಳ ಚಟುವಟಿಕೆ ಇಲ್ಲದಿದ್ದರೂ ಕೂಡ ಅದರ ಬಗ್ಗೆ ಎಲ್ಲಾ ರೀತಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ವಿಪುಲ್ ಕುಮಾರ್ ಹೇಳಿದರು.
ಭಾನುವಾರ ವೀರಾಜಪೇಟೆಗೆ ತೆರಳಿ ಅಲ್ಲಿ ಸಾರ್ವಜನಿಕರ ಸಭೆ ನಡೆಸಿ ಸಲಹೆಗಳನ್ನು ಪಡೆದಿರುವುದಾಗಿ ತಿಳಿಸಿದ ವಿಪುಲ್ ಕುಮಾರ್ ಕೊಡಗು, ಕೇರಳ, ಮೈಸೂರು ಜಿಲ್ಲೆಗಳ ಅರಣ್ಯ ಪ್ರದೇಶದಲ್ಲಿ ಸ್ವತಃ ಕೂಂಬಿಂಗ್ ನಡೆಸಿರುವುದಾಗಿ ಮಾಹಿತಿ ನೀಡಿದರು. ಕೊಡಗು ಜಿಲ್ಲೆಯ ಪೊಲೀಸ್ ಬಲದಲ್ಲಿಯೇ ಕೂಂಬಿಂಗ್ ಕಾರ್ಯಾಚರಣೆ ನಡೆಯಲಿದೆ ಎಂದು ಅವರು ನುಡಿದರು.
ಜಾಗೃತಿ ಜಾಥಾ: ಕೋವಿಡ್ ಜಾಗೃತಿ, ಮಾದಕ ವಸ್ತುವಿನ ವಿರುದ್ಧ ಯುದ್ಧ ಹಾಗೂ ಡಯಲ್ 112 ಕುರಿತು ಕೊಡಗು ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ವಾಹನ ಜಾಗೃತಿ ಜಾಥಾ ನಡೆಯಿತು.
ಜಿಲ್ಲಾ ಪೊಲೀಸ್ ವರಿಷ್ಠಾ„ಕಾರಿಗಳ ಕಚೇರಿ ಮುಂದೆ ಪೊಲೀಸ್ ವಾಹನ ಜಾಗೃತಿ ಜಾಥಾಕ್ಕೆ ದಕ್ಷಿಣ ವಲಯ ಪೊಲೀಸ್ ಮಹಾ ನಿರೀಕ್ಷಕ ವಿಪುಲ್ ಕುಮಾರ್ ಅವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ಬಳಿಕ ನಗರದ ಮುಖ್ಯ ರಸ್ತೆಗಳಲ್ಲಿ ಸಂಚರಿಸಿದ ಪೊಲೀಸ್ ವಾಹನ ಜಾಗೃತಿ ಜಾಥಾ ಸಾರ್ವಜನಿಕರಲ್ಲಿ ಅರಿವು ಮೂಡಿಸಿತು.