ಆಲಮಟ್ಟಿ: ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯದ ಕಾಲುವೆ ಜಾಲಗಳಿಗೆ ಹಿಂಗಾರು ಹಂಗಾಮಿಗೆ ನೀರಾವರಿ ಉದ್ದೇಶದಿಂದ ಡಿ.1ರಿಂದ 2021ರ ಮಾ.21ರ ವರೆಗೆ ನೀರು ಹರಿಸಲಾಗುವುದು ಎಂದು ನೀರಾವರಿ ಸಲಹಾ ಸಮಿತಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದ್ದಾರೆ.
ಕೆಬಿಜೆಎನ್ಎಲ್ ವ್ಯವಸ್ಥಾಪಕ ನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ಹಿಂಗಾರು ಹಂಗಾಮಿನ ನೀರಾವರಿ ಸಲಹಾ ಸಮಿತಿ ಸಭೆ ನಡೆಸಿ ನಂತರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯದಲ್ಲಿ ಲಭ್ಯವಿರುವ ಒಟ್ಟು 120 ಟಿಎಂಸಿ ನೀರಿನಲ್ಲಿ ನ.18ರಿಂದ ಜೂನ್ 30ರವರೆಗೆ ಕುಡಿಯುವ ನೀರು, ಕೆರೆ ತುಂಬಿಸಲು, ಕೈಗಾರಿಕೆ ಹಾಗೂ ಇತರೆ ಉದ್ದೇಶಕ್ಕಾಗಿ ಒಟ್ಟು 38.82 ಟಿಎಂಸಿ ನೀರನ್ನು ಕಾಯ್ದಿರಿಸಿಕೊಂಡು, ಉಳಿದ 77 ಟಿಎಂಸಿ ನೀರು ಕಾಲುವೆ ಮೂಲಕ ರೈತರ ಜಮೀನುಗಳಿಗೆ ಹರಿಸಲಾಗುವುದು ಎಂದರು.
ನಾರಾಯಣಪುರ ಜಲಾಶಯದ ಕಾಲುವೆ ಜಾಲಕ್ಕೆ ನಿತ್ಯ 0.94 ಟಿಎಂಸಿ ಹಾಗೂ ಆಲಮಟ್ಟಿ ಜಲಾಶಯದ ಕಾಲುವೆ ಜಾಲಕ್ಕೆ 0.12 ಟಿಎಂಸಿ ಬೇಡಿಕೆಯಂತೆ ಒಟ್ಟು 1.06 ಟಿಎಂಸಿ ನೀರು ಬಿಡುಗಡೆಗೊಳಿಸಲು ತೀರ್ಮಾನಿಸಲಾಗಿದೆ. ಮಾ.31ರ ವರೆಗೆ ಕಾಲುವೆ ಜಾಲಕ್ಕೆ ನೀರು ಹರಿಸಲು ಬೇಡಿಕೆ ಇದ್ದು ಲಭ್ಯವಿರುವ ನೀರಿನ ಪ್ರಮಾಣಕ್ಕೆ ತಕ್ಕಂತೆ 71 ದಿನ ಹರಿಸಲಾಗುವುದು ಎಂದು ವಿವರಿಸಿದರು.
ನಾರಾಯಣಪುರ ಜಲಾಶಯದಲ್ಲಿ ಕಳೆದ ಹಿಂಗಾರು ಹಂಗಾಮಿನಲ್ಲಿ ಯಶಸ್ವಿಯಾಗಿ ಕೈಗೊಂಡ 14 ದಿನ ಚಾಲೂ ಹಾಗೂ 8 ದಿನ ಬಂದ್ ಪದ್ಧತಿ ಈ ಬಾರಿಯೂ ಮುಂದುವರಿಸಲಾಗಿದ್ದು, ಡಿ.1ರಿಂದ ಮಾ.21ರ ವರೆಗೆ ಕಾಲುವೆಗಳಿಗೆ ನೀರು ಹರಿಸಲಾಗುವುದು ಎಂದರು.
ಆಲಮಟ್ಟಿ ಜಲಾಶಯದ ಏತ ನೀರಾವರಿ ಯೋಜನೆಗಳಿದ್ದು ವಿದ್ಯುತ್ ಅಡಚಣೆಯಿಂದಾಗಿ ಸತತವಾಗಿ ಕಾಲುವೆಗಳಿಗೆ ನೀರು ಪೂರೈಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಲಭ್ಯವಿರುವ ನೀರನ್ನು 8 ದಿನ ಚಾಲೂ ಹಾಗೂ 7 ದಿನ ಬಂದ್ ಪದ್ಧತಿ ಅನುಸರಿಸಿ ಡಿ.1ರಿಂದ ಮಾ.21ರ ವರೆಗೆ ನೀರು ಹರಿಸಲಾಗುವುದು. ಮಾ.22ರ ನಂತರ ಎರಡೂ ಜಲಾಶಯಗಳಲ್ಲಿ ಲಭ್ಯವಾಗುವ ನೀರನ್ನು ಆಧರಿಸಿ ಹಿಂಗಾರು ಹಂಗಾಮು ವಿಸ್ತರಿಸಲು ತೀರ್ಮಾನಿಸಲಾಗುವುದು ಎಂದು ಹೇಳಿದರು.
ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯದಲ್ಲಿನ ಮುಖ್ಯ ಕಾಲುವೆ ಹೊರತುಪಡಿಸಿ ಉಪ ಕಾಲುವೆಗಳ ನವೀಕರಣ ಮಾಡುವ ಕುರಿತು ಕೆಲ ಕಾಮಗಾರಿಗಳು ಕೊರೋನಾ ಹಿನ್ನೆಲೆ ಬಂದ್ ಆಗಿವೆ. ಯಾವುದೇ ಕಾಮಗಾರಿಗಳನ್ನು ನಿಲ್ಲಿಸುವುದಿಲ್ಲ. ಆದರೆ, ಅವುಗಳನ್ನು ಹಂತ ಹಂತವಾಗಿ ಆರಂಭಿಸಲಾಗುವುದು ಎಂದರು.
ಆಲಮಟ್ಟಿ ವಲಯದ ಅಂದಾಜು 1 ಸಾವಿರ ಕೋಟಿ ರೂ.ಗಳ ನಾನಾ ಕಾಮಗಾರಿಗಳ 2020-21ರ ಕ್ರಿಯಾಯೋಜನೆಯ ಆರ್ಥಿಕ ಮಂಜೂರು ಆಗದಿರುವುದರ ಕುರಿತು ಹಾಗೂ ಯೋಜನಾ ನಿರಾಶ್ರಿತರ ಮೀಸಲು ನ.23ರಂದು ಕೊನೆಗೊಳ್ಳಲಿದ್ದು ಅದನ್ನು ಮುಂದುವರುಸುವ ಕುರಿತು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಸಭೆ ಶೀಘ್ರವೇ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕಾಲುವೆ ಜಾಲದ ನೀರನ್ನು ಕೆಲವರು ಅಕ್ರಮವಾಗಿ ಬಳಕೆ ಮಾಡುತ್ತಿರುವ ಕುರಿತು ಅಕಾರಿಗಳಿಗೆ ಪದೇಪದೆ ಸೂಚನೆ ನೀಡಲಾಗುತ್ತಿದೆ. ಸಿಬ್ಬಂದಿ ಕೊರತೆ ಇರುವ ಕಾರಣ ತಡೆಗಟ್ಟಲು ವಿಳಂಬವಾಗುತ್ತಿದೆ. ರೈತರಿಗೆ ನೀರು ಬಳಕೆದಾರರ ಸಂಘದ ಮೂಲಕ ನೀರು ನಿರ್ವಹಿಸುವ ಕುರಿತು ಸಭೆಯಲ್ಲಿ ಪ್ರಸ್ತಾಪವಾಗಿ ಚರ್ಚಿಸಲಾಗಿದೆ. ಮುಂದಿನ ಸಭೆಯಲ್ಲಿ ಅಕ್ರಮ ನೀರು ಬಳಕೆಗೆ ಕಡಿವಾಣ ಹಾಕುವ ಕುರಿತು ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.