ಪಾಟ್ನಾ: ಬಿಹಾರದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಈಗಾಗಲೇ ದಿನಗಣನೇ ಆರಂಭಗೊಂಡಿದ್ದು, ಇದೇ ತಿಂಗಳ 28ರಂದು ಮೊದಲನೇ ಹಂತದ ಚುನಾವಣೆ ನಡೆಯಲಿದೆ. ಹೀಗಾಗಿ ಎಲ್ಲ ಪಕ್ಷದ ಮುಖಂಡರು ತಮ್ಮ ಅಭ್ಯರ್ಥಿಗಳ ಪರ ಕಣಕ್ಕಿಳಿದು ಪ್ರಚಾರ ನಡೆಸುತ್ತಿದ್ದಾರೆ.
ಇದೀಗ ಪ್ರಧಾನಿ ನರೇಂದ್ರ ಮೋದಿ ಕೂಡ ಪ್ರಚಾರ ಸಭೆಯಲ್ಲಿ ಭಾಗಿಯಾಗಲಿದ್ದು, ಇದೇ ತಿಂಗಳ 23 ರಿಂದ ಒಟ್ಟು 12 ರಯಾಗ ಲಿಗಳಲ್ಲಿ ಭಾಗಿಯಾಗಲಿದ್ದಾರೆ. ಸಸಾರಾಮ್, ಗಯಾ, ಬಾಗಲ್ಪೂರ್, ಮುಜಾಫುರ್ಪುರ್, ಪಾಟ್ನಾಗಳಲ್ಲಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಬಿಹಾರ ಬಿಜೆಪಿ ಚುನಾವಣಾ ಪ್ರಚಾರದ ವಕ್ತಾರ ದೇವೇಂದ್ರ ಫಡ್ನವಿಸ್ ಮಾಹಿತಿ ನೀಡಿದ್ದಾರೆ.
ಅಕ್ಟೋಬರ್ 23, ಅಕ್ಟೋಬರ್ 28,ನವೆಂಬರ್ 1 ಹಾಗೂ ನವೆಂಬರ್ 3ರಂದು ನಮೋ ಪ್ರಚಾರ ಸಭೆಗಳಲ್ಲಿ ಭಾಗಿಯಾಗಲಿದ್ದಾರೆ. ಕೊನೆಯ ದಿನ ಚಂಪಾರಣ್ಯದಲ್ಲಿ ನಮೋ ಚುನಾವಣಾ ಭಾಷಣ ಮಾಡಲಿದ್ದಾರೆ. ಬಿಹಾರ ಚುನಾವಣೆಗಾಗಿ ಈಗಾಗಲೇ ಬಿಜೆಪಿ – ಜೆಡಿಯು ಮೈತ್ರಿ ಮಾಡಿಕೊಂಡು ಕಣಕ್ಕಿಳಿದಿದ್ದು, ನಿತೀಶ್ ಕುಮಾರ್ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದಾರೆ.
ಬಿಹಾರದ 243 ಕ್ಷೇತ್ರಗಳ ಚುನಾವಣೆ ಅಕ್ಟೋಬರ್ 28, ನವೆಂಬರ್ 3ಮತ್ತು 7ರಂದು ಮೂರು ಹಂತಗಳಲ್ಲಿ ನಡೆಯಲಿದೆ. ಇದಕ್ಕಾಗಿ ಬಿಜೆಪಿ – ಜೆಡಿಯು ಮೈತ್ರಿ ಮಾಡಿಕೊಂಡಿದ್ದರೆ, ಕಾಂಗ್ರೆಸ್-ಆರ್ಜೆಡಿ ಮೈತ್ರಿ ಮಾಡಿಕೊಂಡು ಕಣಕ್ಕಿಳಿದಿವೆ.