ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಮತ ಎಣಿಕೆ ತುಮಕೂರು ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆಯಲಿದ್ದು, ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಲಿದ್ದು, ಮತ ಎಣಿಕೆಗೆ 14 ಟೇಬಲ್‍ಗಳ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಟೇಬಲ್‍ಗೆ ಒಬ್ಬ ಎಣಿಕೆ ಸೂಪರ್‍ವೈಸರ್, ಒಬ್ಬ ಎಣಿಕೆ ಸಹಾಯಕ ಹಾಗೂ ಒಬ್ಬ ಮೈಕ್ರೋ ಅಬ್ಸರ್ವರ್‍ನ್ನು ನೇಮಕ ಮಾಡಲಾಗಿದೆ. ಅಂಚೆ ಮತಯಂತ್ರ ಹಾಗೂ ಸರ್ವೀಸ್ ವೋಟ್‍ಗಳ ಎಣಿಕೆಯು 4 ಟೇಬಲ್‍ಗಳಲ್ಲಿ ನಡೆಯಲಿದೆ. ಸುಮಾರು 24 ಸುತ್ತಿನಲ್ಲಿ ಮತ ಎಣಿಕೆ ನಡೆಯಲಿದ್ದು, ಪ್ರತಿ ಟೇಬಲ್‍ಗೆ ಒಬ್ಬ ಅಭ್ಯರ್ಥಿಗೆ ಒಬ್ಬ ಏಜೆಂಟ್ ನಂತೆ ಹಾಜರಿರಲು ಅವಕಾಶ ನೀಡಲಾಗುವುದು. ಈಗಾಗಲೇ ಮತ ಎಣಿಕೆ ಏಜೆಂಟರುಗಳಿಗೆ ಪಾಸ್ ವಿತರಿಸಲಾಗಿದೆ. ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಹಾಗೂ ಚುನಾವಣಾ ಏಜೆಂಟರುಗಳಿಗೆ ಮತ ಎಣಿಕಾ ಕೇಂದ್ರಕ್ಕೆ ಪ್ರವೇಶಿಸಲು ಅವಕಾಶ ಕಲ್ಪಿಸಲಾಗುವುದು. ಅಭ್ಯರ್ಥಿಗಳ ಅನುಕೂಲಕ್ಕಾಗಿ ಎಣಿಕಾ ಕೇಂದ್ರದ ಆವರಣದಲ್ಲಿ ಅಭ್ಯರ್ಥಿಗಳ ಕೊಠಡಿಯನ್ನು ಪ್ರತ್ಯೇಕವಾಗಿ ವ್ಯವಸ್ಥೆ ಮಾಡಲಾಗಿದೆ. ಮತ ಎಣಿಕಾ ಕೇಂದ್ರವನ್ನು ಮತ ಎಣಿಕೆಗೂ ಮುನ್ನ ಮತ್ತು ಮತ ಎಣಿಕೆಯ ನಂತರ ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಲಾಗುವುದು. ಕೇಂದ್ರಕ್ಕೆ ಆಗಮಿಸುವ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು ಹಾಗೂ ವ್ಯಕ್ತಿಗತ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ