ನವದೆಹಲಿ : ಇಡೀ ದೇಶವನ್ನೇ ವ್ಯಾಪಿಸಿರುವ ಕೊರೋನಾ ವೈರಸ್ನಿಂದ ದೇಶದ ಜನರು ತತ್ತರಿಸಿಹೋಗಿದ್ದಾರೆ. ಲಾಕ್ಡೌನ್ ನಡುವೆಯೂ ಸೋಂಕಿತರ ಸಂಖ್ಯೆ ನಿಯಂತ್ರಣಕ್ಕೆ ಬಂದಿಲ್ಲ. ಇದೀಗ ದೇಶದ ರಾಷ್ಟ್ರಪತಿ ಭವನದಲ್ಲೂ ಭೀತಿ ಎದುರಾಗಿದ್ದು, ಇಲ್ಲಿ ಕೆಲಸ ಮಾಡುವ ಓರ್ವ ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿರುವುದರಿಂದ 125 ಕುಟುಂಬಗಳನ್ನು ಹೋಮ್ ಕ್ವಾರಂಟೈನ್ನಲ್ಲಿರಲು ಸೂಚಿಸಲಾಗಿದೆ.
ರಾಷ್ಟ್ರಪತಿ ಭವನದಲ್ಲಿ ಒಂದು ಕೊರೋನಾ ಸೋಂಕಿತ ಪ್ರಕರಣ ವರದಿಯಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ 125 ಕುಟುಂಬಗಳನ್ನು ಹೋಂ ಕ್ವಾರಂಟೈನ್ನಲ್ಲಿಡಲಾಗಿದೆ. ರಾಷ್ಟ್ರಪತಿ ಭವನದ ಸ್ವಚ್ಛತಾ ಕೆಲಸ ಮಾಡುತ್ತಿದ್ದ ಸಿಬ್ಬಂದಿಗೆ ಕೊರೋನಾ ಸೋಂಕು ತಗುಲಿದೆ. ಹೀಗಾಗಿ, ಕೇಂದ್ರ ಗೃಹ ಸಚಿವಾಲಯದ ಮಾರ್ಗಸೂಚಿಯಂತೆ ಮುನ್ನೆಚ್ಚರಿಕಾ ಕ್ರಮವಾಗಿ ಆ ಸಿಬ್ಬಂದಿಯ ಜೊತೆ ಸಂಪರ್ಕ ಹೊಂದಿದ್ದ 125 ಕುಟುಂಬಗಳಿಗೆ ಹೋಂ ಕ್ವಾರಂಟೈನ್ ವಿಧಿಸಲಾಗಿದೆ.
ಸೋಂಕಿತ ಸಿಬ್ಬಂದಿಯ ಹತ್ತಿರದ ಸಂಬಂಧಿಕರಿಗೆ ಕಳೆದ ವಾರ ಕೊರೋನಾ ಸೋಂಕು ಪತ್ತೆಯಾಗಿತ್ತು ಎನ್ನಲಾಗಿದೆ. ಅವರಿಂದಲೇ ರಾಷ್ಟ್ರಪತಿ ಭವನದ ಸ್ವಚ್ಛತಾ ಸಿಬ್ಬಂದಿಗೂ ಕೊರೋನಾ ಹರಡಿರುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಆ ವ್ಯಕ್ತಿಯೊಂದಿಗೆ ಸಂಪರ್ಕದಲ್ಲಿದ್ದ ರಾಷ್ಟ್ರಪತಿ ಭವನದ ಸಿಬ್ಬಂದಿಗಳ ಕುಟುಂಬ ಮತ್ತು ಅವರ ಮನೆಯ ಅಕ್ಕಪಕ್ಕದ ಕುಟುಂಬ ಸೇರಿದಂತೆ ಒಟ್ಟು 125 ಕುಟುಂಬಗಳನ್ನು ಹೋಂ ಕ್ವಾರಂಟೈನ್ನಲ್ಲಿರಲು ಸೂಚಿಸಲಾಗಿದೆ. ಈ ಕುರಿತು ರಾಷ್ಟ್ರಪತಿ ಭವನ ಇನ್ನೂ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ.