ಕೊರೋನಾ ಎಫೆಕ್ಟ್‌; ಅಮೆರಿಕ ಇತಿಹಾಸದಲ್ಲೇ ಮೊದಲ ಬಾರಿಗೆ ಪಾತಾಳಕ್ಕೆ ಕುಸಿದ ತೈಲ ಬೆಲೆ

ನ್ಯೂಯಾರ್ಕ್‌ ; ಮಾರಣಾಂತಿಕ ಕೊರೋನಾ ವೈರಸ್ಕಾರಣದಿಂದಾಗಿ ವಿಶ್ವದ ದೊಡ್ಡಣ್ಣ ಎನಿಸಿಕೊಂಡಿರುವ ಅಮೆರಿಕದಲ್ಲಿ ಕಚ್ಚಾತೈಲಕ್ಕೆ ಬೇಡಿಕೆ ಕುಸಿದಿದೆ. ಪರಿಣಾಮ ಅಮೆರಿಕ ಇತಿಹಾಸದಲ್ಲೇ ಮೊದಲ ಬಾರಿಗೆ ಪೆಟ್ರೋಲ್ಡೀಸೆಲ್ ಸೇರಿದಂತೆ ಎಲ್ಲಾ ತೈಲದ ಬೆಲೆ ಪಾತಾಳಕ್ಕೆ ಕುಸಿದಿದೆ.

ಮೇ ತಿಂಗಳ ವೇಳೆ ಶೇಖರಣೆಯಾಗಿರುವ ಕಚ್ಚಾತೈಲ ಖಾಲಿಯಾಗಬಹುದು ಎಂದು ಅಮೆರಿಕದ ತೈಲ ಕಂಪೆನಿಗಳು ಮುಂಜಾಗ್ರತಾ ಕ್ರಮವಾಗಿ ಅಧಿಕ ತೈಲವನ್ನು ಅಂತಾರಾಷ್ಟ್ರೀ ಮಾರುಕಟ್ಟೆಯಲ್ಲಿ ಖರೀದಿಸಿ ಶೇಖರಿಸಿವೆ. ಆದರೆ, ಕೊರೋನಾ ವೈರಸ್‌ ಭಯಕ್ಕೆ ಧಿಡೀರೆಂದು ಲಾಕ್‌ಡೌನ್ ಘೋಷಿಸಲಾಗಿದ್ದು ಅಮೆರಿಕದಲ್ಲಿ ತೈಲದ ಬೇಡಿಕೆ ಸಂಪೂರ್ಣವಾಗಿ ಕಡಿಮೆಯಾಗಿದೆ.

ಈ ನಡುವೆ ಹೆಚ್ಚುವರಿ ತೈಲ ಶೇಖರಣೆಗೆ ಕಂಪೆನಿಗಳು ಟ್ಯಾಂಕರ್‌ಗಳನ್ನು ಬಾಡಿಗೆಗೆ ಪಡೆದಿದ್ದು ಈ ಹಣವನ್ನೂ ಪಾವತಿಸಬೇಕಾದ ಪರಿಸ್ಥಿತಿ ಎದುರಾಗಿದ್ದು ಅಮೆರಿಕದ ಇತಿಹಾಸದಲ್ಲೇ ಕಚ್ಚಾತೈಲದ ಬೆಲೆ ಮೊದಲ ಬಾರಿಗೆ ಪಾತಾಳಕ್ಕೆ ಕುಸಿದಿದೆ ಎಂದು ಹೇಳಲಾಗುತ್ತಿದೆ.

ಯುಎಸ್ ತೈಲದ ಮಾನದಂಡವಾದ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೆಟ್ (ಡಬ್ಲ್ಯುಟಿಐ) ನಲ್ಲಿ ಬ್ಯಾರೆಲ್‌ ಕಚ್ಚಾತೈಲದ ಬೆಲೆ ಮೈನಸ್ $ 37.63 ಡಾಲರ್‌ಗೆ ಕುಸಿದಿದೆ ಎಂದು ವರದಿಯಾಗಿದೆ. ಈ ಬೆಳವಣಿಗೆ ಅಮೆರಿಕ ತೈಲ ಕ್ಷೇತ್ರದ ಉದ್ಯೋಗ ಕಡಿತಕ್ಕೂ ಕಾರಣವಾಗಲಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಅಮೆರಿಕ ಮಾತ್ರವಲ್ಲ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಳೆದ ಎರಡು ತಿಂಗಳಿನಿಂದ ತೈಲಗಳ ಬೇಡಿಕೆ ಪಾತಾಳಕ್ಕೆ ಕುಸಿದಿದೆ. ಪರಿಣಾಮ ಈ ತಿಂಗಳ ಆರಂಭದಲ್ಲೇ ಅಂತಾರಾಷ್ಟ್ರೀಯ ಪೆಟ್ರೋಲಿಯಂ ರಫ್ತುಗಾರ ರಾಷ್ಟ್ರಗಳ ಸಂಘಟನೆಯಾದ ಒಪೆಕ್ ಸದಸ್ಯರು ಮತ್ತು ಅದರ ಮಿತ್ರರಾಷ್ಟ್ರಗಳು ಜಾಗತಿಕ ಉತ್ಪಾದನೆಯನ್ನು ಸುಮಾರು 10% ರಷ್ಟು ತೈಲ ಉತ್ಪಾದನೆಯನ್ನು ಕಡಿತಗೊಳಿಸುವ ದಾಖಲೆ ಒಪ್ಪಂದಕ್ಕೆ ಸಹಿಹಾಕಿದ್ದಾರೆ. ಈ ಒಪ್ಪಂದವನ್ನು ಈವರೆಗೆ ಅತಿದೊಡ್ಡ ತೈಲ ಉತ್ಪಾದನಾ ಕಡಿತ ಒಪ್ಪಂದ ಎನ್ನಲಾಗುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ