ನೆಲಮಂಗಲ: ರಾಜ್ಯವೇ ಸಂಕಷ್ಟದಲ್ಲಿ ಸಿಲುಕಿಕೊಂಡಿರುವಾಗ ಸಚಿವರಾದ ಡಾ.ಸುಧಾಕರ್ ಮತ್ತು ಸಿ.ಟಿ.ರವಿ ಅವರು ಬೇಜವಾಬ್ದಾರಿತನ ತೋರುತ್ತಿರುವುದು ಅಕ್ಷಮ್ಯ. ಅವರುಗಳು ನೈತಿಕ ಹೊಣೆಹೊತ್ತು ಸ್ವಯಂಪ್ರೇರಣೆಯಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒತ್ತಾಯಿಸಿದರು.
ತಾಲೂಕಿನ ಜಕ್ಕಸಂದ್ರ ಮತ್ತು ಅರಿಶಿನಕುಂಟೆ ಗ್ರಾಮಗಳಲ್ಲಿ ಮಾಜಿ ಸಚಿವ ಅಂಜನಮೂರ್ತಿ ನೇತೃತ್ವದಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡರು ಹಮ್ಮಿಕೊಂಡಿದ್ದ ಆಹಾರಪದಾರ್ಥಗಳ ಕಿಟ್ಗಳನ್ನು ವಿತರಿಸಿ ಮಾತನಾಡಿ, ರಾಜ್ಯ ಸೇರಿದಂತೆ ರಾಷ್ಟ್ರವೇ ಕೊರೋನಾದಿಂದ ತತ್ತರಿಸುತ್ತಿದೆ. ರಾಜ್ಯದ ಕೊರೋನಾ ಹೋರಾಟದ ಟೀಮ್ಲೀಡರ್ ಎಂದೇ ಬಿಂಬಿಸಿಕೊಂಡಿದ್ದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಅವರು ಈಜುಕೊಳದಲ್ಲಿ ಈಜಾಡುತ್ತಾ ಸಮಯ ಕಳೆಯುತ್ತಿದ್ದಾರೆ. ಸಚಿವ ಸಿ.ಟಿ.ರವಿ ಅವರು ತಮ್ಮ ಮುದ್ದಿನ ನಾಯಿಗೆ ಸ್ನಾನಮಾಡಿಸಿಕೊಂಡು ಕುಳಿತಿರುವುದು ಅವರು ಜವಾಬ್ದಾರಿಯನ್ನು ತೋರುತ್ತದೆ ಎಂದು ಟೀಕಿಸಿದರು.
ತರಕಾರಿ , ಹಣ್ಣು ಖರೀದಿಸಿ ಹಂಚಲಿ:
ಸರಕಾರ ಜನರಿಗೆ ದವಸ ಧಾನ್ಯವನ್ನು ನೀಡುವ ಬದಲಿಗೆ ಮುಂದಿನ ದಿನಗಳಲ್ಲಿ ರೈತರಿಂದಲೆ ಸ್ಥಳೀಯವಾಗಿ ಖರೀದಿಸಿ ತರಕಾರಿ ಹಣ್ಣುಗಳನ್ನು ಹಂಚಬೇಕು. ಇದರಿಂದ ರೈತರನ್ನು ಬದುಕಿಸುವ ಕೆಲಸಮಾಡಬೇಕೆಂದರು.