ಎರಡು ಸಾರಿಗೆ ಸಂಜೀವಿನಿ-ಮೊಬೈಲ್ ಸ್ಯಾನಿಟೈಜರ್ ಬಸ್‍ಗಳಿಗೆ ಚಾಲನೆ ಸದ್ಯಕ್ಕೆ ರಾಜ್ಯದಲ್ಲಿ ಕೆಎಸ್‍ಆರ್‍ಟಿಸಿ ಬಸ್‍ಗಳ ಸಂಚಾರವಿಲ್ಲ

ಮೈಸೂರು: ಕೊರೋನಾ ವೈರಸ್ ಸೋಂಕು ಹರಡುವಿಕೆಯನ್ನು ತಡೆಯುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮೈಸೂರು ವಿಭಾಗದ ವತಿಯಿಂದ ಎರಡು `ಸಾರಿಗೆ ಸಂಜೀವಿನಿ-ಮೊಬೈಲ್ ಸ್ಯಾನಿಟೈಸರ್ ಬಸ್‍ಗಳಿಗೆ ಸೋಮವಾರ ಚಾಲನೆ ನೀಡಲಾಯಿತು. ಸಂಸ್ಥೆಯ ನಿರ್ದೇಶಕ ಡಾ.ರಾಮನಿವಾಸ ಸೆಪಟ್ ಮೊಬೈಲ್ ಸ್ಯಾನಿಟೈಸರ್ ಬಸ್‍ಗಳನ್ನು ಉದ್ಘಾಟಿಸಿದರು.

ಬಳಿಕ ಮಾತನಾಡಿ, ಕೆಎಸ್‍ಆರ್‍ಟಿಸಿ ಬಸ್ ಸೇವೆ ಸದ್ಯಕ್ಕೆ ಇಲ್ಲ, ಬಸ್ ಸೇವೆ ಆರಂಭಿಸುವ ಬಗ್ಗೆ ಸದ್ಯಕ್ಕೆ ಯಾವುದೇ ತೀರ್ಮಾನ ಆಗಿಲ್ಲ. ರಾಜ್ಯ ಸರ್ಕಾರ ಮುಂದಿನ ದಿನಗಳಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂದರು.

ಕೆಎಸ್‍ಆರ್‍ಟಿಸಿ ಸಿಬ್ಬಂದಿ ಅನುಕೂಲಕ್ಕಾಗಿ ಎರಡು ಬಸ್‍ಗಳನ್ನು ಸ್ಯಾನಿಟೈಸರ್ ಬಸ್‍ಗಳಾಗಿ ಪರಿವರ್ತಿಸಲಾಗಿದೆ. ನಮ್ಮಲ್ಲಿ ಸಾಕಷ್ಟು ಹಳೇ ಬಸ್‍ಗಳಿವೆ. ಜಿಲ್ಲಾಡಳಿತ ಕೋರಿದರೆ ಇನ್ನಷ್ಟು ಬಸ್‍ಗಳನ್ನು ಸ್ಯಾನಿಟೈಜರ್‍ಗಳಾಗಿ ಮಾಡಿಕೊಡಲಾಗುವುದು ಎಂದರು.

ಈ ಎರಡು ಸ್ಯಾನಿಟೈಜರ್ ಬಸ್‍ನಲ್ಲಿ 200 ಲೀ. ನೀರು, 12 ಸ್ಪಿಂಕ್ಲರ್ ಅಳವಡಿಕೆ ಮಾಡಲಾಗಿದ್ದು, ಪ್ರತಿ ವಾಹನಕ್ಕೆ ಸುಮಾರು 20,000ರೂ. ವೆಚ್ಚವಾಗಿದೆ. ಈ ಬಸ್ಸುಗಳಲ್ಲಿ ಮುಂದಿನ ಬಾಗಿಲಿನಲ್ಲಿ ಹತ್ತಿ, ಹಿಂಭಾಗದಲ್ಲಿ ಇಳಿದರೆ, ಸಂಪೂರ್ಣವಾಗಿ ದೇಹಕ್ಕೆ ವೈರಾಣು ನಿರೋಧಕ ದ್ರಾವಣ ಸಿಂಪಡಣೆಯಾಗಲಿದೆ. ಈ ಮೂಲಕ ಕೊರೋನಾ ಸೋಂಕು ನಿವಾರಣೆಗೆ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ