- ದಿನೇ ದಿನೇ ಗಂಭೀರವಾಗುತ್ತಿದೆ ಪರಿಸ್ಥಿತಿ, ದಿಗಿಲುಗೊಂಡಿರುವ ಜನರು ಪರಿಸ್ಥಿತಿಯ ನಿಯಂತ್ರಣಕ್ಕಾಗಿ ಹರಸಾಹಸ ನಡೆಸುತ್ತಿದೆ ಜಿಲ್ಲಾಡಳಿತ .
- ಇಡೀ ಕಾರ್ಖಾನೆಯ ಕಾರ್ಮಿಕರಿಗೆ ಕೊರೋನಾ ಅಂಟಿದೆಯಾ, ಇವರಿಂದ ಎಷ್ಟು ಮಂದಿಗೆ ಸೋಂಕು ಹರಡಿದೆ ಎಂಬ ಲೆಕ್ಕವೇ ಸಿಗುತ್ತಿಲ್ಲ.
ಮೈಸೂರು: ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿರುವ ಜುಬಿಲಿಯಂಟ್ ಔಷಧಿ ತಯಾರಿಕಾ ಕಾರ್ಖಾನೆಯಲ್ಲಿರುವ ಇಡೀ ಕಾರ್ಮಿಕರಿಗೆ ಮಹಾಮಾರಿ ಕೊರೋನಾ ವೈರಸ್ ಚೈನ್ ಲಿಂಕ್ ನಂತೆ ಹರಡಿಕೊಂಡು ಹೋಗಿದೆಯಾ, ಹಾಗೆ ಹರಡಿ ಹೋಗಿರುವ ಕೊರೋನಾ ಸೋಂಕು ಟೈಂಬಾಂಬ್ನಂತೆ ಸಿಡಿಯುವ ಸಾಧ್ಯತೆಯಿದೆಯಾ, ಇಂತಹ ಆತಂಕ ಇದೀಗ ಎಲ್ಲರನ್ನೂ ದಿಗಿಲುಗೊಳಿಸಿದೆ. ಯಾಕೇಂದರೆ ಕಾರ್ಖಾನೆಯಲ್ಲಿರುವ ಎಷ್ಟು ಕಾರ್ಮಿಕರಿಗೆ ಕೊರೋನಾ ವೈರಸ್ ಅಂಟಿದೆ, ಎಷ್ಟು ಮಂದಿಗೆ ಅಂಟಿಲ್ಲ ಎಂಬುದೇ ಇಲ್ಲಿಯ ತನಕ ಆರೋಗ್ಯ ಇಲಾಖೆ ಹಾಗೂ ಜಿಲ್ಲಾಡಳಿತಕ್ಕೆ ನಿಖರವಾದ ಮಾಹಿತಿಯೇ ಸಿಕ್ಕಿಲ್ಲ. ಯಾಕೇಂದರೆ ೧೩೦೦ಕ್ಕೂ ಹೆಚ್ಚು ಮಂದಿ ಕಾರ್ಮಿಕರ ರಕ್ತ ಹಾಗೂ ಗಂಟಲಿನ ಮಾದರಿಯ ಪರೀಕ್ಷೆಯನ್ನ ಮೈಸೂರಿನ ಪ್ರಯೋಗಾಲದ ಪರೀಕ್ಷಾ ಕೇಂದ್ರದಲ್ಲಿ ನಡೆಸಲಾಗುತ್ತಿದೆ. ಆದರೆ ಎಲ್ಲರ ಮಾದರಿಯನ್ನು ಪರೀಕ್ಷಿಸಲು ಇರುವ ಸಿಬ್ಬಂದಿಗಳು ಏತಕ್ಕೂ ಸಾಲದಾಗಿದೆ. ಹಗಲು, ರಾತ್ರಿ ಎನ್ನದ ಮಾದರಿಯನ್ನ ಪರೀಕ್ಷೆಗೆ ಒಳಪಡಿಸಿ, ವರದಿಯನ್ನು ಸಿದ್ಧಪಡಿಸಿ ನೀಡಲಾಗುತ್ತಿದೆ. ಕಾರ್ಖಾನೆಯ ಕಾರ್ಮಿಕರ ಮಾದರಿಯಷ್ಟನ್ನೇ ಅಲ್ಲ, ಮಂಡ್ಯ, ಚಾಮರಾಜನಗರ, ಕೊಡಗು ಜಿಲ್ಲೆಗಳಿಂದಲೂ ಕೊರೋನಾ ವೈರಸ್ ಲಕ್ಷಣ ಕಂಡು ಬರುತ್ತಿರುವವರ ರಕ್ತ, ಗಂಟಲಿನ ಮಾದರಿಯನ್ನು ಸಂಗ್ರಹಿಸಿ, ಮೈಸೂರಿನ ಪರೀಕ್ಷಾ ಕೇಂದ್ರಕ್ಕೆ ರವಾನಿಸಲಾಗುತ್ತಿದೆ. ಅವರುಗಳ ಮಾದರಿಯನ್ನೂ ಕೂಡ ಪರೀಕ್ಷಿಸಿ, ವರದಿಯನ್ನು ನೀಡಬೇಕಾಗಿದೆ. ಹೀಗಾಗಿ ಪರೀಕ್ಷಾ ಕೇಂದ್ರದ ಅಧಿಕಾರಿಗಳು ಹಾಗೂ ಸಿಬ್ಬಂದಿ ತೀವ್ರ ಒತ್ತಡಕ್ಕೆ ಸಿಲುಕಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಸಾಧ್ಯವಾದಷ್ಟು ವೇಗದಲ್ಲಿ ನಂಜನಗೂಡು ಕಾರ್ಖಾನೆಯ ಕಾರ್ಮಿಕರು, ಸಿಬ್ಬಂದಿಯ ಮಾದರಿಯನ್ನು ಪರೀಕ್ಷಿಸಿ, ವರದಿಯನ್ನು ನೀಡಿ, ಕೊರೋನಾ ವೈರಸ್ ಹರಡುವಿಕೆಯನ್ನು ತಡೆಯಬೇಕಾಗಿದೆ. ಇಲ್ಲದಿದ್ದರೆ ಪರಿಸ್ಥಿತಿ, ದಿನೇ ದಿನೇ ಹತೋಟಿ ಮೀರಿ ಕೈ ತಪ್ಪಿದರೆ ದೊಡ್ಡ ಗಂಡಾಂತರಕ್ಕೆ ಇಡೀ ರಾಜ್ಯವೇ ಸಿಲುಕಬೇಕಾಗುತ್ತದೆ.
ಸೋಂಕಿನ ಚೈನ್ ಲಿಂಕ್ ಜಾಡು ಹಿಡಿಯಬೇಕಾಗಿದೆ: ಜುಬಿಲಿಯಂಟ್ ಕಾರ್ಖಾನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮೊದಲ ಕೊರೋನಾ ಸೋಂಕಿತ ವ್ಯಕ್ತಿಯಿಂದ ಚೈನ್ ಲಿಂಕ್ ನಂತೆ ಕಾರ್ಖಾನೆಯ ೧೨ ಮಂದಿಗೆ ಕೊರೋನಾ ವೈರಸ್ ಸೋಂಕು ಅಂಟಿರುವುದು ಪರೀಕ್ಷೆಯಿಂದ ದೃಢಪಟ್ಟಿದೆ. ಹಾಗಾಗಿ ಕೊರೋನಾ ವೈರಸ್ ಎಷ್ಟು ಮಂದಿಗೆ ಚೈನ್ ಲಿಂಕ್ ನಂತೆ ಅಂಟಿಕೊಂಡು ಹೋಗುತ್ತಿದೆ ಎಂಬುದನ್ನು ಪತ್ತೆ ಹಚ್ಚಬೇಕಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ತೀವ್ರ ಪ್ರಯತ್ನ ನಡೆಸುತ್ತಿದೆ. ಅಲ್ಲದೆ ಕೊರೋನಾ ವೈರಸ್ ಚೈನ್ ಲಿಂಕ್ನಂತೆ ಹರಡಿಕೊಂಡು ಹೋಗುತ್ತಿದ್ದು, ಆ ಲಿಂಕ್ನ್ನು ತುಂಡರಿಸಬೇಕಾಗಿದೆ. ಆದರೆ ಕೊರೋನಾ ವೈರಸ್ ಸೋಂಕಿನ ಚೈನ್ ಲಿಂಕ್ ಹೇಗೆ ಹರಡಿಕೊಂಡು ಹೋಗಿದೆ ಎಂಬುದೇ ಸದ್ಯಕ್ಕೆ ತಿಳಿಯದೆ ಕಂಗಲಾಗುವಂತೆ ಮಾಡಿದೆ. ಚೈನ್ಲಿಂಕ್ನ ಜಾಡು ಹಿಡಿಯುವುದಕ್ಕೆ ಕಷ್ಟ ಸಾಧ್ಯವಾಗುತ್ತಿದೆ. ವೈರಸ್ನ ಸೋಂಕಿನ ಚೈನ್ ಲಿಂಕ್ನ್ನು ತುಂಡು ಮಾಡಲು ಕಾರ್ಮಿಕರು ಹಾಗೂ ಸಿಬ್ಬಂದಿಯನ್ನು ಹೋಂ ಕ್ವಾರಂಟೈನ್ ಮಾಡಿ, ನಿಗಾದಲ್ಲಿ ಇರಿಸಲಾಗಿದೆ. ಆದರೆ ಈ ಕಾರ್ಮಿಕರ ಸಂಪರ್ಕಕ್ಕೆ ಯರ್ಯಾರು ಬಂದಿದ್ದರು, ಅವರಿಂದ ಕೊರೋನಾ ವೈರಸ್ ಹರಡುವಿಕೆಯ ಚೈನ್ ಲಿಂಕ್ ಯಾವ ಸ್ವರೂಪವನ್ನು ಪಡೆದುಕೊಂಡು ಹೋಗಿದೆ ಎಂದು ಪತ್ತೆ ಹಚ್ಚುವ ಕೆಲಸವನ್ನೂ ಮಾಡಬೇಕಾಗಿದೆ. ಕೊರೋನಾ ವೈರಸ್ ಚೈನ್ ಲಿಂಕ್ ಒಂದೇ ಹಾದಿಯಲ್ಲಿ ಹರಡಿ ಹೋಗಿದ್ದರೆ, ಅದನ್ನು ತುಂಡರಿಸಿ, ಮುಂದೆ ಲಿಂಕ್ ಆಗಿ ಹರಡಿ ಹೋಗುವುದನ್ನು ತಡೆಯಬಹುದು, ಆದರೆ ವೈರಸ್ನ ಚೈನ್ ಲಿಂಕ್ ಹಲವು ಹಾದಿಯಲ್ಲಿ ಸಾಗಿ ಹೋಗಿದ್ದರೆ, ಅದನ್ನು ಪತ್ತೆ ಹಚ್ಚುವಷ್ಟರಲ್ಲಿಯೇ ಪರಿಸ್ಥಿತಿ ಕೈಮೀರಿ, ದೊಡ್ಡ ಅನಾಹುತವೇ ಸಂಭವಿಸಬಹುದು ಎಂಬ ಆತಂಕ ಎಲ್ಲರನ್ನೂ ಕಾಡುತ್ತಿದೆ. ಎಲ್ಲಕ್ಕಿಂತ ಹೆಚ್ಚಾಗಿ ಚೈನ್ ಲಿಂಕ್ನಂತೆ ಹರಡಿ ಹೋಗಿರುವ ಕೊರೋನಾ ವೈರಸ್ ಒಮ್ಮೆಲೇ ಏಕಾ ಏಕಿ ಟೈಂ ಬಾಂಬ್ನಂತೆ ಸಿಡಿದು ಹೋದರೆ ಎಂಬ ದಿಗಿಲು ಈಗ ಎಲ್ಲರನ್ನೂ ತೀವ್ರವಾಗಿ ಕಾಡುತ್ತಿದೆ.
ಕೊರೋನಾ ಸೋಂಕಿನ ಲಕ್ಷಣ ಲೇಟಾಗಿ ಕಾಣಿಸಿಕೊಳ್ಳುತ್ತಿದೆ: ಜುಬಿಲಿಯಂಟ್ ಕಾರ್ಖಾನೆಯ ಕಾರ್ಮಿಕರಲ್ಲಿ ಕೆಲಸ ನಿರ್ವಹಿಸುತ್ತಿದ್ದವೆಲ್ಲಾ ೩೦ ರಿಂದ ೪೧ ವಯಸ್ಸಿನ ಆಸು ಪಾಸಿನಲ್ಲಿರುವವರು. ಹಾಗೂ ಇವರಲ್ಲಿ ಬಹುತೇಕರು ಸದೃಢವಾಗಿದ್ದಾರೆ. ಹಾಗಾಗಿ ಮಹಾಮಾರಿ ಕೊರೋನಾ ವೈರಸ್ ಸೋಂಕಿನ ಲಕ್ಷಣಗಳು ಸೋಂಕಿತರಲ್ಲಿ ಲೇಟಾಗಿ ಕಾಣಿಸಿಕೊಳ್ಳುತ್ತಿದೆ. ಇದು ಆರೋಗ್ಯ ಇಲಾಖೆಯವರಿಗೆ ತೀವ್ರ ತಲೆನೋವುಂಟು ಮಾಡಿದೆ.