ದೆಹಲಿ ಧಾರ್ಮಿಕ ಸಭೆಗೆ ಕೊಡಗಿನಿಂದ ೧೧ ಮಂದಿ ಭಾಗಿ

  • ೫ಮಂದಿಗೆ ದೆಹಲಿಯಲ್ಲೇ ಸಂಪರ್ಕ ತಡೆ: ೫ಮಂದಿ ಹೊರ ಜಿಲ್ಲೆಗಳಲ್ಲಿ ವಾಸ

ಮಡಿಕೇರಿ: ದೇಶದಲ್ಲಿ ಕೊರೋನಾ ವೈರಸ್ ಸೋಂಕು ತೀವ್ರವಾಗಿ ಹರಡಲು ಕಾರಣವೆನ್ನಲಾದ ದೆಹಲಿಯ ನಿಜಾಮುದ್ದೀನ್ ಮರ್ಕಝ್‌ನಲ್ಲಿ ನಡೆದ ತಬ್ಲಿಕ್ ಜಮಾತ್  ಧಾರ್ಮಿಕ ಸಭೆಯಲ್ಲಿ ಕೊಡಗು ಜಿಲ್ಲೆಯಿಂದಲೂ ಹಲವರು ಭಾಗವಹಿಸಿದ್ದು, ಈ ಪೈಕಿ ೧೧ ಮಂದಿಯನ್ನು ಪತ್ತೆ ಹಚ್ಚುವಲ್ಲಿ ಜಿಲ್ಲಾಡಳಿತ ಯಶಸ್ವಿಯಾಗಿದೆ.

ದೆಹಲಿಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನೂರಾರು ಮಂದಿಗೆ ಕೊರೋನಾ ವೈರಸ್ ಸೋಂಕು ತಗುಲಿರುವುದಾಗಿ ವರದಿಯಾಗಿರುವ ಬೆನ್ನಲ್ಲೇ ಜಿಲ್ಲಾಡಳಿತದ ತಂಡವು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರೆನ್ನಲಾದವರ ಮನೆಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದು, ೧೧ ಜನರ ಪೈಕಿ ೫ ಜನರು ದೆಹಲಿಯಲ್ಲೇ ಕ್ವಾರಂಟೈನ್‌ನಲ್ಲಿದ್ದಾರೆ ಹಾಗೂ ಇತರ ೫ ಮಂದಿ ಹೊರ ಜಿಲ್ಲೆಗಳಲ್ಲಿ ವಾಸವಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಅಲ್ಲದೆ ಈ ಬಗ್ಗೆ ಸಂಬಂಧಪಟ್ಟ ಜಿಲ್ಲೆಗಳಿಗೆ ಮಾಹಿತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.

ಉಳಿದ ಒಂದು ಪ್ರಕರಣದಲ್ಲಿ ಮಾತ್ರ ವ್ಯಕ್ತಿಯು ಕೊಡಗಿನಲ್ಲೇ ವಾಸವಿದ್ದು, ಅವರ ೧೪ ದಿನಗಳ ಕ್ವಾರಂಟೈನ್ ಅವಧಿ ಮುಗಿದಿದೆ. ಆದರೂ ಅವರನ್ನು ಮುನ್ನೆಚ್ಚರಿಕಾ ಕ್ರಮವಾಗಿ ಕ್ವಾರಂಟೈನ್‌ನಲ್ಲಿಡಲು ಕ್ರಮ ವಹಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಕೊಡಗಿನ ಜನತೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಆದರೂ ಜಿಲ್ಲಾಡಳಿತದ ಪರಿಶೀಲನೆಯಿಂದ ದೆಹಲಿ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದವರು ಬಿಟ್ಟು ಹೋಗಿದ್ದಲ್ಲಿ ಕೂಡಲೇ ಹತ್ತಿರದ ಸರ್ಕಾರಿ ಆಸ್ಪತ್ರೆಯನ್ನು ಸಂಪರ್ಕಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

ಊರಿಗೆ ಹೊರಟಿದ್ದ ಕಾರ್ಮಿಕರಿಗೆ ತಡೆ: ಕೊಡಗಿಗೆ ಕೂಲಿ ಅರಸಿ ಬಂದಿದ್ದ ೬೬ ಕಾರ್ಮಿಕರು ಕೊರೋನಾ ಭೀತಿ ಹಿನ್ನೆಲೆಯಲ್ಲಿ ತಮ್ಮ ಸ್ವಂತ ಊರಿಗೆ ತೆರಳಲು ಮುಂದಾಗಿದ್ದು, ಇವರನ್ನು ತಡೆದಿರುವ ಜಿಲ್ಲಾಡಳಿತ ಅವರಿಗೆ ನೈತಿಕ ಸ್ಥೈರ್ಯ ತುಂಬಿ ತಂಗಲು ಬೇಕಾದ ವ್ಯವಸ್ಥೆ ಕಲ್ಪಿಸಿದೆ.

ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ರಾಮಾಪುರ ಗ್ರಾಮದಿಂದ ಕೊಡಗು ಜಿಲ್ಲೆಯ ನೆಲ್ಲಿಹುದಿಕೇರಿ, ಸಿದ್ದಾಪುರ ಹಾಗೂ ಕುಂಬೂರು ಗ್ರಾಮದ ಕಾಫಿ ತೋಟಗಳಿಗೆ ಕಳೆದ ಮೂರು ತಿಂಗಳ ಹಿಂದೆ ೧೨ ಮಂದಿ ಮಕ್ಕಳೂ ಸೇರಿದಂತೆ ೬೬ ಮಂದಿ ಕೂಲಿ ಅರಸಿ ಬಂದಿದ್ದರೆನ್ನಲಾಗಿದೆ.

ಇದೀಗ ಕೊರೋನಾ ಭಿತಿಯ ಹಿನ್ನೆಲೆಯಲ್ಲಿ ಈ ಕುಟುಂಬಗಳಿಗೆ ತೆರಳಲು ಮಂಗಳವಾರ ಲಾರಿಯಲ್ಲಿ ಹೊರಟಿದ್ದರು. ಆದರೆ ಸೋಮವಾರಪೇಟೆಯಲ್ಲಿ ಪೋಲೀಸರು ಇವರನ್ನು ತಡೆದಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೂಚನೆ ಮೇರೆಗೆ ಅವರನ್ನು ಮಡಿಕೇರಿಗೆ ಕಳುಹಿಸಿಕೊಟ್ಟಿದ್ದಾರೆ.

ಬಳಿಕ ಅವರಿಗೆ ಈ ಸಂದರ್ಭದಲ್ಲಿ ಸ್ವಗ್ರಾಮಕ್ಕೆ ತೆರಳಲು ಸಾಧ್ಯವಿಲ್ಲ ಎಂದು ತಿಳಿಸಿ, ಅವರಲ್ಲಿ ನೈತಿಕ ಸ್ಥೈರ್ಯ ತುಂಬಿ ಅವರಿಗೆ ತಂಗಲು ಬೇಕಾದ ಅಗತ್ಯ ಸವಲತ್ತುಗಳನ್ನು ನೀಡಿ ಮಡಿಕೇರಿಯ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಇವರ ಮೇಲ್ವಿಚಾರಣೆಗಾಗಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಆರೋಗ್ಯ ತಪಾಸಣೆಗೆ ಒಳಪಡಿಸಿದಾಗ ಎಲ್ಲರೂ ಆರೋಗ್ಯದಿಂದಿರುವುದು ದೃಢಪಟ್ಟಿದೆ.

ಮಡಿಕೇರಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಿ ಅವರ ನೇತೃತ್ವದಲ್ಲಿ ಅವರಿಗೆ ಯಾವುದೇ ಸಮಸ್ಯೆಯಾಗದಂತೆ ಸೂಕ್ತ ವ್ಯವಸ್ಥೆ ಮಾಡಲಾಗಿದ್ದು, ಲಾಕ್‌ಡೌನ್ ಅವಧಿ ಮುಗಿಯುವವರೆಗೆ ಇಲ್ಲೇ ಇರುವಂತೆ ಸೂಚಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ