ಬೆಂಗಳೂರು : ಕರ್ನಾಟಕದಲ್ಲಿ ಕೊರೋನಾ ವೈರಸ್ ಅಟ್ಟಹಾಸ ಮುಂದುವರೆದಿದ್ದು, 7 ಹೊಸ ಪ್ರಕರಣಗಳು ಪತ್ತೆಯಾಗುವ ಮೂಲಕ ಸೋಂಕಿತರ ಸಂಖ್ಯೆ 62ಕ್ಕೆ ಏರಿಕೆಯಾಗಿದೆ. ಈ 7 ಪ್ರಕರಣಗಳಲ್ಲಿ ನಾಲ್ವರು ಬೆಂಗಳೂರಿನವರೇ ಆಗಿದ್ದಾರೆ.
ಇದೀಗ 7 ಹೊಸ ಕೊರೋನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಯಾವುದೇ ದೇಶಕ್ಕೂ ಪ್ರಯಾಣಿಸಿರದ 10 ತಿಂಗಳ ಮಗುವಿಗೆ ಕೂಡ ಕೊರೋನಾ ಸೋಂಕು ತಗುಲಿರುವುದು ಖಚಿತವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ 10 ತಿಂಗಳ ಗಂಡುಮಗುವನ್ನು ಕೆಲವು ದಿನಗಳ ಹಿಂದೆ ಪೋಷಕರು ಕೇರಳಕ್ಕೆ ಕರೆದುಕೊಂಡು ಹೋಗಿದ್ದರು. ಕೇರಳದಿಂದಲೇ ಮಗುವಿಗೆ ಸೋಂಕು ತಗುಲಿದೆಯಾ? ಅಥವಾ ಬೇರಾವುದಾದರೂ ಹಿನ್ನೆಲೆ ಇದೆಯಾ? ಎಂಬುದನ್ನು ಇನ್ನೂ ಪರಿಶೀಲನೆ ನಡೆಸಲಾಗುತ್ತಿದೆ.
ಕೊಲಂಬೋದಿಂದ ವಾಪಸಾಗಿದ್ದ ಬೆಂಗಳೂರಿನ 20 ವರ್ಷದ ಯುವಕನಿಗೂ ಕೊರೋನಾ ಸೋಂಕು ಪತ್ತೆಯಾಗಿದೆ. ಮಾರ್ಚ್ 15ರಂದು ಈತ ಭಾರತಕ್ಕೆ ವಾಪಸಾಗಿದ್ದ. ನಂತರ ಈತನನ್ನು ಬೆಂಗಳೂರಿನ ಆಸ್ಪತ್ರೆಯಲ್ಲಿ ಐಸೋಲೇಷನ್ನಲ್ಲಿ ಇರಿಸಲಾಗಿತ್ತು.
ಬೆಂಗಳೂರಿನ 25 ವರ್ಷದ ಯುವತಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಲಂಡನ್ಗೆ ತೆರಳಿದ್ದ ಈ ಯುವತಿ ಮಾರ್ಚ್ 18ರಂದು ಬೆಂಗಳೂರಿಗೆ ಮರಳಿದ್ದರು. 35 ವರ್ಷದ ಬೆಂಗಳೂರಿನ ಇನ್ನೋರ್ವ ವ್ಯಕ್ತಿಗೂ ಸೋಂಕು ತಗುಲಿರುವುದು ಖಚಿತವಾಗಿದೆ. ಇವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ಈಗಾಗಲೇ ಕೊರೋನಾ ಸೋಂಕು ದೃಢಪಟ್ಟಿದೆ. ಹೀಗಾಗಿ, ಅವರಿಂದಲೇ ಈ ವ್ಯಕ್ತಿಗೆ ಕೊರೋನಾ ವೈರಸ್ ಹರಡಿರುವ ಸಾಧ್ಯತೆಯಿದೆ.
ತುಮಕೂರಿನ 60 ವರ್ಷದ ವ್ಯಕ್ತಿಗೆ ಕೊರೋನಾ ವೈರಸ್ ಹರಡಿರುವುದು ಖಚಿತವಾಗಿದೆ. ಇವರು ಇಂದು ಬೆಳಗ್ಗೆ ಮೃತಪಟ್ಟಿದ್ದು, ರಾಜ್ಯದಲ್ಲಿ ಕೊರೋನಾಗೆ ಬಲಿಯಾದವರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ. ದೆಹಲಿಯಿಂದ ಮಾರ್ಚ್ 13ರಂದು ಇವರು ರೈಲಿನಲ್ಲಿ ತುಮಕೂರಿಗೆ ಆಗಮಿಸಿದ್ದರು. ಅವರ ಸಂಪರ್ಕದಲ್ಲಿದ್ದ ಮೂವರನ್ನು ಐಸೋಲೇಷನ್ನಲ್ಲಿ ಇರಿಸಲಾಗಿದೆ.
33 ವರ್ಷದ ಬೆಂಗಳೂರಿನ ಯುವತಿಯಲ್ಲೂ ಕೊರೋನಾ ಸೋಂಕು ದೃಢಪಟ್ಟಿದೆ. ಇವರ ಮನೆಯಲ್ಲಿ ಕೆಲಸ ಮಾಡುತ್ತಿದ್ದವರಿಗೆ ಕೊರೋನಾ ಸೋಂಕು ತಗುಲಿತ್ತು. ಅವರಿಂದಲೇ ಈ ಮಹಿಳೆಗೆ ಸೋಂಕು ಹರಡಿರುವ ಸಾಧ್ಯತೆಯಿದೆ.
ಉತ್ತರ ಕನ್ನಡ ಜಿಲ್ಲೆಯ 22 ವರ್ಷದ ಯುವತಿ ಕೆಲವು ದಿನಗಳ ಹಿಂದೆ ದುಬೈನಿಂದ ಆಗಮಿಸಿದ್ದರು. ಅವರಿಗೆ ಕೊರೋನಾ ಸೋಂಕು ಖಚಿತವಾಗಿದ್ದು, ಉತ್ತರ ಕನ್ನಡದ ಆಸ್ಪತ್ರೆಯಲ್ಲಿ ಐಸೋಲೇಷನ್ನಲ್ಲಿ ಇರಿಸಲಾಗಿದೆ.