9 ದಿನಗಳ ಕಾಲ ಕರ್ನಾಟಕ ಕರ್ಫ್ಯೂ- ಇಂದು ಸಂಜೆ ಅಧಿಕೃತ ಘೋಷಣೆ ಸಾಧ್ಯ

ಬೆಂಗಳೂರು: ಕೊರೊನಾ ವ್ಯಾಪಕವಾಗಿ ಹರಡುವುದನ್ನು ತಡೆಗಟ್ಟಲು ವಿವಿಧ ದೇಶಗಳಲ್ಲಿ ಈಗಾಗಲೇ ಅಳವಡಿಸಿಕೊಂಡಿರುವ ಲಾಕ್‍ಡೌನ್ ಕರ್ನಾಟಕದಲ್ಲೂ ಜಾರಿಯಾಗುವ ಸಾಧ್ಯತೆಯಿದೆ.

ಲಾಕ್‍ಡೌನ್ ಘೋಷಿಸಿದರೂ ಎಂದಿನಂತೆ ಸಂಚಾರ ವ್ಯವಸ್ಥೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕಾನೂನಿನ ಮೂಲಕ ಕ್ರಮ ಕೈಗೊಳ್ಳಿ ಎಂದು ಆದೇಶ ಕೊಟ್ಟ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ ಕರ್ನಾಟಕವನ್ನು ಲಾಕ್‍ಡೌನ್ ಮಾಡಲು ಸಿದ್ಧತೆ ನಡೆಸಿದೆ.

ನಾಳೆಯಿಂದ ಮಾರ್ಚ್ 31ರವರೆಗೆ ಲಾಕ್‍ಡೌನ್ ಮಾಡಲು ಸರ್ಕಾರ ಮುಂದಾಗಿದ್ದು, ವಾಣಿಜ್ಯ ಅಂಗಡಿಗಳು ಸಂಪೂರ್ಣ ಬಂದ್ ಆಗಲಿದೆ. ಮುಖ್ಯಮಂತ್ರಿಗಳ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಇವತ್ತು ಸಂಜೆ ವಿಪಕ್ಷ ನಾಯಕರ ಸಭೆ ಬಳಿಕ ಅಧಿಕೃತವಾಗಿ ಸಿಎಂ ನಿರ್ಧಾರ ಪ್ರಕಟಿಸಲಿದ್ದಾರೆ.

ಇಂದು ಸಿಎಂ ಬಿ.ಎಸ್.ಯಡಿಯೂರಪ್ಪ ತುರ್ತು ಸುದ್ದಿಗೋಷ್ಠಿ ನಡೆಸಿದ್ದು, ಮಾಚ್ 31ರವರೆಗೂ ಕೆಎಸ್ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್‍ಗಳ ಸಂಚಾರವನ್ನು ಸಂಪೂರ್ಣವಾಗಿ ರದ್ದು ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ, ಕೆಎಸ್ಆರ್‌ಟಿಸಿ, ಬಿಎಂಟಿಸಿ ಬಸ್ ಸಂಚಾರ ಇರುವುದಿಲ್ಲ. ಅಂಗಡಿ ಮುಂಗಟ್ಟುಗಳು ಕ್ಲೋಸ್ ಆಗಿರುತ್ತವೆ. ಅಗತ್ಯ ವಸ್ತುಗಳ ಅಂಗಡಿಗಳು ಮಾತ್ರ ತೆರೆದಿರುತ್ತವೆ. ಹಾಲು, ತರಕಾರಿ, ಹಣ್ಣು, ಆಸ್ಪತ್ರೆ, ಮೆಡಿಕಲ್ ಶಾಪ್ ಓಪನ್ ಇರುತ್ತದೆ. ಖಾಸಗಿ ವಾಹನಗಳು ಸೇರಿದಂತೆ ಎಲ್ಲವೂ ರಸ್ತೆಯಲ್ಲಿ ಓಡಾಡುವಂತಿಲ್ಲ. ವಾಣಿಜ್ಯ ಅಂಗಡಿಗಳು ಫುಲ್ ಬಂದ್ ಆಗಲಿವೆ ಎಂದು ಹೇಳಿದರು.

ಖಾಸಗಿ ಆಸ್ಪತ್ರೆ ವೈದ್ಯರ ಜೊತೆ ಸಾಕಷ್ಟು ಚರ್ಚೆ ಆಗಿದೆ. ಕೊರೊನಾ ಸೋಂಕಿತರ ಸಂಪರ್ಕದಲ್ಲಿದ್ದವರನ್ನ ಹುಡುಕಿ ಕ್ವಾರಂಟೈನ್ ಮಾಡುವುದೇ ದೊಡ್ಡ ಸವಾಲಾಗಿದೆ. ಗಂಭೀರತೆ ಅರಿತು ಸ್ವಯಂ ಪ್ರೇರಣೆಯಿಂದ ಮನೆಯಲ್ಲಿರಬೇಕು. ನಗರ ಪ್ರದೇಶದ ಜನ ಗ್ರಾಮೀಣ ಪ್ರದೇಶಕ್ಕೆ ಹೋಗಿ ಅಲ್ಲಿ ತೊಂದರೆ ಮಾಡಬೇಡಿ. ಬೆಂಗಳೂರು ನಗರದಲ್ಲಿ 144 ಸೆಕ್ಷನ್ ಮುಂದುವರಿಯುತ್ತದೆ. ಬಡವರಿಗೆ ಮಾತ್ರ ದಿನಪೂರ್ತಿ ಉಚಿತ ಊಟ ಕೊಡಲಾಗುತ್ತದೆ. ಇಂದಿರಾ ಕ್ಯಾಂಟಿನ್‍ನಲ್ಲಿ ಬಡವರಿಗೆ ಉಚಿತ ಊಟವನ್ನು ನೀಡಲಾಗುತ್ತದೆ ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ