ಬೆಂಗಳೂರು: ಭಾನುವಾರ ದೇಶದಾದ್ಯಂತ ಜನತಾ ಕರ್ಫ್ಯೂ ಇರುವ ಹಿನ್ನೆಲೆ ಸಾರ್ವಜನಿಕರು ಮನೆಯಲ್ಲೇ ಇದ್ದು ಸಹಕರಿಸಬೇಕು. ಪ್ರವಾಸ, ವಾಕಿಂಗ್, ಕಾರ್ಯಕ್ರಮ ಅಂತ ಓಡಾಡುವಂತಿಲ್ಲ. ರಸ್ತೆ ಮೇಲೆ ತಿರುಗಾಡಿದ್ರೆ act 31(L) ಅಡಿಯಲ್ಲಿ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಎಚ್ಚರಿಕೆ ನೀಡಿದ್ದಾರೆ.
ಗುರುವಾರ ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, “ಮಾರಣಾಂತಿಕ ಕೊರೋನಾ ಹಬ್ಬುತ್ತಿರುವ ಇಂತಹ ಸಂಕಷ್ಟಕರ ಸಮಯದಲ್ಲಿ ಜನರು ತಮ್ಮಷ್ಟಕ್ಕೆ ತಾವೇ ಕರ್ಫ್ಯೂ ವಿಧಿಸಿಕೊಳ್ಳಬೇಕು. ಈ ಮೂಲಕ ಮಾರಕ ಸೋಂಕು ಹರಡದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ಇದೇ ಮಾರ್ಚ್ 22ರ ಭಾನುವಾರದಂದು ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ದೇಶದ ಪ್ರತಿಯೊಬ್ಬರು ಜನತಾ ಕರ್ಫ್ಯೂ ಪಾಲಿಸಬೇಕು. ಈ ಸಮಯದಲ್ಲಿ ಯಾರೊಬ್ಬರೂ ಕೂಡ ತಮ್ಮ ಮನೆಯಿಂದ ಹೊರಗೆ ಬರಬಾರದು” ಎಂದು ಕರೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ ನಾಳೆ ದೇಶದಾದ್ಯಂತ ಜನಾ ಕರ್ಫ್ಯೂ ಆಚರಿಸಲಾಗುತ್ತಿದೆ. ಹೀಗಾಗಿ ಈ ಕುರಿತು ಇಂದು ಮಾತನಾಡಿರುವ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, “ಜನತಾ ಕರ್ಫ್ಯೂವನ್ನು ಸಾರ್ವಜನಿಕರು ಬಹಳ ಗಂಭಿರವಾಗಿ ಪರಿಗಣಿಸಬೇಕು. ಕುಟುಂಬದ ಸದಸ್ಯರು ಮನೆಯಲ್ಲಿರಬೇಕು. ಅಲ್ಲದೆ, ಯಾರೂ ಪ್ರವಾಸ , ವಾಕಿಂಗ್ , ಕಾರ್ಯಕ್ರಮ ಅಂತ ಓಡಾಂಡಗಿಲ್ಲ. ರಸ್ತೆ ಮೇಲೆ ತಿರುಗಾಡ್ತಿದ್ರೆ act 31(L) ಅಡಿಯಲ್ಲಿ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತೆ” ಎಂದು ಎಚ್ಚರಿಕೆ ನೀಡಿದ್ದಾರೆ.
“ಬೆಂಗಳೂರಿನಲ್ಲಿ ಎಲ್ಲಾ ಕಡೆ ಬ್ಯಾರಿಕೇಡ್ಗಳನ್ನು ಹಾಕಿ ಪೊಲೀಸರು ಗಸ್ತು ತಿರುಗುತ್ತಿರುತ್ತಾರೆ. ಹೊರಗಡೆ ಇರುವ ಪ್ರತಿಯೊಬ್ಬ ಸಿಬ್ಬಂದಿಗೂ ಮಾಸ್ಕ್ , ಸ್ಯಾನಿಟೈಸರ್ ಕೊಡ್ಬೇಕು ಅಂತ ಹೇಳಿದ್ದೇವೆ. ಈ ಕುರಿತು ಎಲ್ಲಾ ಡಿಸಿಪಿಗಳಿಗೆ ಈಗಾಗ್ಲೇ ಸಭೆ ನಡೆಸಿ ಸೂಚನೆ ನೀಡಿದ್ದೇನೆ. ಇನ್ನೂ ಪೊಲೀಸ್ ಇಲಾಖೆ ಆರೋಗ್ಯ ಇಲಾಖೆ ಮತ್ತು ಬಿಬಿಎಂಪಿ ಜೊತೆ ಮಾತುಕತೆ ನಡೆಸಿದ್ದೇವೆ. ಸೊಂಕಿತರು ವಿಷಯ ಮುಚ್ಚಿಡುತ್ತಿರುವುದು ಬೆಳಕಿಗೆ ಬಂದಿದೆ. ಇಂತವರ ವಿರುದ್ಧವೂ ಶಿಸ್ತುಕ್ರಮ ಕೈಗೊಳ್ಳಲಾಗುತ್ತದೆ” ಎಂದು ಅವರು ತಿಳಿಸಿದ್ದಾರೆ.