ಹಂತಕ ಮುಖೇಶ್‍ಸಿಂಗ್ ತಾಯಿಯ ಮಾತೃಹೃದಯಿ ರೋದನೆ

ನವದೆಹಲಿ, ಮಾ.20- ಸೆರಗೊಡ್ಡಿ ಬೇಡಿಕೊಳ್ಳುತ್ತೇನೆ. ನನ್ನ ಮಗನಿಗೆ ಪ್ರಾಣಭಿಕ್ಷೆ ನೀಡಿ. ಆತನಿಗೆ ಜೀವದಾನ ಮಾಡಿ ನನ್ನ ಮಡಿಲಿಗೆ ಹಾಕಿ…

ಇದು ನಿರ್ಭಯಾ ಹಂತಕ ಮುಖೇಶ್‍ಸಿಂಗ್ ತಾಯಿಯ ಮಾತೃಹೃದಯಿ ರೋದನ…

ನ್ಯಾಯಾಧೀಶರ ಮುಂದೆಯೇ ಮುಖೇಶ್‍ಸಿಂಗ್ ತಾಯಿ ನಿರ್ಭಯಾ ತಾಯಿಯ ಎದುರು ಮಂಡಿಯೂರಿ ಕುಳಿತು ಸೆರಗೊಡ್ಡಿ ನನ್ನ ಮಗನಿಗೆ ಪ್ರಾಣಭಿಕ್ಷೆ ನೀಡಿ ಎಂದು ಬೇಡಿಕೊಂಡಿದ್ದು ನ್ಯಾಯಾಲಯದಲ್ಲಿದ್ದವರ ಕಣ್ಣಂಚಿನಲ್ಲಿ ನೀರು ತರಿಸಿತು.

ನಿರ್ಭಯಾ ಹಂತಕರ ಗಲ್ಲುಶಿಕ್ಷೆ ಕುರಿತಂತೆ ತಡರಾತ್ರಿ 3.30ರ ವರೆಗೂ ನ್ಯಾಯಾಲಯದಲ್ಲಿ ವಾದ-ವಿವಾದ ನಡೆಯುತ್ತಿದ್ದ ಸಂದರ್ಭದಲ್ಲೇ ಇಬ್ಬರು ತಾಯಂದಿರ ನಡುವಿನ ಸಂಭಾಷಣೆ ಮೈ ಜುಮ್ಮೆನಿಸುವಂತಿತ್ತು.

ನ್ಯಾಯಾಲಯದಲ್ಲಿ ಹಂತಕರಿಗೆ ಗಲ್ಲುಶಿಕ್ಷೆ ನೀಡುವಂತೆ ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ನ್ಯಾಯಾಧೀಶರು ಕೆಲ ಕ್ಲ್ಯಾರಿಫಿಕೇಷನ್‍ಗೋಸ್ಕರ ವಿಚಾರಣೆಯನ್ನು ಸ್ವಲ್ಪಕಾಲ ನಿಲ್ಲಿಸಿದ್ದ ಸಂದರ್ಭದಲ್ಲಿ ದಿಢೀರನೆ ಎದ್ದುನಿಂತ ಮುಖೇಶ್‍ಸಿಂಗ್ ತಾಯಿ ನಿರ್ಭಯಾ ತಾಯಿ ಆಶಾದೇವಿ ಅವರ ಮುಂದೆ ಸೆರಗೊಡ್ಡಿ ತಮ್ಮ ಮಗನಿಗೆ ಪ್ರಾಣಭಿಕ್ಷೆ ನೀಡುವಂತೆ ಬೇಡಿಕೊಂಡರು.

ಹಂತಕನ ತಾಯಿ ಪ್ರಾಣಭಿಕ್ಷೆ ಕೇಳಿದ ಸಂದರ್ಭದಲ್ಲಿ ತನ್ನ ಕಣ್ಣಾಲಿಗಳಲ್ಲಿ ನೀರು ತುಂಬಿದರೂ ಅಷ್ಟೇ ದಿಟ್ಟತನದಿಂದ ಉತ್ತರ ನೀಡಿದ ಆಶಾದೇವಿಯವರು ನನಗೂ ಮಗಳಿದ್ದಳು. ಅವಳಿಗೆ ಅನ್ಯಾಯವಾಗಿದೆ. ಅದನ್ನು ನಾನು ಹೇಗೆ ಸಹಿಸಿಕೊಳ್ಳಲಿ. ಹಂತಕರಿಗೆ ಗಲ್ಲು ಶಿಕ್ಷೆಯಾಗಬೇಕೆಂದು ಕಳೆದ ಏಳು ವರ್ಷಗಳಿಂದ ಚಾತಕ ಪಕ್ಷಿಯಂತೆ ಕಾಯುತ್ತಿದ್ದೇನೆ ಎಂದು ಪ್ರತ್ಯುತ್ತರ ನೀಡಿದರು.

ತಮ್ಮ ಕಣ್ಣೆದುರಲ್ಲೇ ಇಬ್ಬರು ತಾಯಂದಿರ ನಡುವಿನ ಈ ಸಂಭಾಷಣೆ ಕೇಳಿ ಕೆಲಕಾಲ ಮೂಕವಿಸ್ಮಿತರಾದ ನ್ಯಾಯಾಧೀಶರು ನಂತರ ಸಾವರಿಸಿಕೊಂಡು ವಿಚಾರಣೆ ಮುಂದುವರಿಸಿದರು.

ವಿಚಾರಣೆ ಸಂದರ್ಭದಲ್ಲಿ ನ್ಯಾಯಾಲಯದಲ್ಲಿ ಹಾಜರಿದ್ದ ನಾಲ್ವರು ಹಂತಕರ ತಾಯಂದಿರಲ್ಲಿ ಇಬ್ಬರು ತಮ್ಮ ಮಕ್ಕಳ ಉಳಿವಿಗಾಗಿ ಹೋರಾಟ ನಡೆಸಿದರೆ, ಮತ್ತೊಬ್ಬ ತಾಯಿ ಗಲ್ಲುಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸಿ ಎಂದು ಬೇಡಿಕೊಂಡರೆ, ಇನ್ನೊಬ್ಬ ಮಹಾತಾಯಿ ಮಾತ್ರ ತಪ್ಪು ಮಾಡಿದವರಿಗೆ ಗಲ್ಲುಶಿಕ್ಷೆಯೇ ಸೂಕ್ತ ಎಂದು ಮನವಿ ಮಾಡಿಕೊಂಡಿದ್ದು ವಿಶೇಷವಾಗಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ