ವಿಶ್ವಾದ್ಯಂತ 2.75 ಲಕ್ಷ ಮಂದಿಗೆ ಕೊರೊನಾ: ಭಾರತದಲ್ಲಿ ಸೋಂಕಿತರ ಸಂಖ್ಯೆ 249ಕ್ಕೆ ಏರಿಕೆ

ನವದೆಹಲಿ: ವಿಶ್ವದಾದ್ಯಂತ ರಣಕೇಕೆ ಹಾಕುತ್ತಿರುವ ಡೆಡ್ಲಿ ಕೊರೊನಾ ವೈರಸ್‍ಗೆ 185 ರಾಷ್ಟ್ರ ಹಾಗೂ ಪ್ರಾಂತ್ಯಗಳು ತುತ್ತಾಗಿವೆ. ಈವರೆಗೆ ಸೋಂಕಿಗೆ 11,399 ಮಂದಿ ಬಲಿಯಾಗಿದ್ದಾರೆ. ಇತ್ತ ಭಾರತದಲ್ಲಿ ಸೋಂಕಿತರ ಸಂಖ್ಯೆ 249ಕ್ಕೆ ಏರಿದ್ದು, 5 ಮಂದಿ ಸಾವನ್ನಪ್ಪಿದ್ದಾರೆ. ಹಾಗೆಯೇ ಕರ್ನಾಟಕದಲ್ಲಿ 15 ಮಂದಿಗೆ ಕೊರೊನಾ ತಗುಲಿರುವುದು ವರದಿಯಾಗಿದೆ. ಇತ್ತ ಕೇರಳದ ಕಾಸರಗೋಡಿನಲ್ಲಿ 5 ಹೊಸ ಸೋಂಕು ಶಂಕಿತ ಪ್ರಕರಣ ವರದಿಯಾಗಿದ್ದರೆ, ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 52ಕ್ಕೆ ಏರಿಕೆಯಾಗಿದೆ. ಕಳೆದ 10 ದಿನಗಳಲ್ಲಿ ಸೋಂಕಿತರ ಸಂಖ್ಯೆ 5 ಪಟ್ಟು ಹೆಚ್ಚಳವಾಗಿದೆ.

ಒಟ್ಟು 185 ರಾಷ್ಟ್ರ ಹಾಗೂ ಪ್ರಾಂತ್ಯಗಳ ಮೇಲೆ ತನ್ನ ಕರಿನೆರಳು ಬೀರುತ್ತಿರುವ ಕೊರೊನಾ ವೈರಸ್‍ಗೆ ಈವರೆಗೆ ಸುಮಾರು 2,75,953 ಮಂದಿಗೆ ಸೋಂಕು ತಗುಲಿದೆ. ಅಲ್ಲದೇ ವಿಶ್ವದೆಲ್ಲೆಡೆ ಒಟ್ಟು 11,399 ಮಂದಿ ಕೊರೊನಾ ಸೋಂಕು ತಗುಲಿ ಜೀವ ಕಳೆದುಕೊಂಡಿದ್ದಾರೆ. ಸುಮಾರು 91,912 ಮಂದಿ ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದು, ಪ್ರಸ್ತುತ 1,72,642 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ.

ಡೆಡ್ಲಿ ಕೊರೊನಾಗೆ ಭಾರತದಲ್ಲಿ ಈವರೆಗೆ 249 ಮಂದಿ ತುತ್ತಾಗಿದ್ದು, 23 ಮಂದಿ ಗುಣಮುಖರಾಗಿದ್ದಾರೆ. ಪ್ರಸ್ತುತ 221 ಮಂದಿ ಕೊರೊನಾದಿಂದ ಬಳಲುತ್ತಿದ್ದಾರೆ. ಈಗಾಗಲೇ ಕೊರೊನಾಗೆ 5 ಮಂದಿ ಸಾವನ್ನಪ್ಪಿದ್ದಾರೆ.

ಭಾರತದಲ್ಲಿ ಕೊರೊನಾ ಹಬ್ಬಿದ್ದು ಹೇಗೆ?
ಭಾರತದಲ್ಲಿ ಇದುವರೆಗೆ ಸೋಂಕಿತ ಪ್ರಕರಣ 246 (ಅಧಿಕೃತ ಪಟ್ಟಿ, ನಿನ್ನೆ ರಾತ್ರಿ 12 ಗಂಟೆಯವರೆಗೆ) ವರದಿಯಾಗಿದೆ. ಇದರಲ್ಲಿ ವಿದೇಶದಿಂದ ಬಂದ 136 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ವಿದೇಶದಿಂದ ಬಂದವರ ಜೊತೆ ಸಂಪರ್ಕದಿಂದ 105 ಮಂದಿಗೆ ಸೋಂಕು ತಗುಲಿದೆ.

ಜನವರಿ 30ರಂದು ಕೇರಳದಲ್ಲಿ ಕೊರೊನಾ ವೈರಸ್ ಸೋಂಕಿತ ಮೊದಲ ಕೇಸ್ ವರದಿಯಾಗಿತ್ತು. ಆದರೆ ಮಾರ್ಚ್ 10ರಂದು ದೇಶದಲ್ಲಿ ಸೋಂಕಿತರ ಸಂಖ್ಯೆ 50ಕ್ಕೆ ಮುಟ್ಟಿತ್ತು. ಸದ್ಯ ಮಾರ್ಚ್ 20ರವರೆಗೆ ಸೋಂಕಿತರ ಸಂಖ್ಯೆ 249ಕ್ಕೆ ತಲುಪಿದೆ.

24 ಗಂಟೆಗಳಲ್ಲಿ ಪತ್ತೆಯಾದ ಹೊಸ ಪ್ರಕರಣಗಳು:
ಭಾರತದಲ್ಲಿ 55 ಹೊಸ ಪ್ರಕರಣ ದಾಖಲಾಗಿದೆ. ಇತ್ತ ಇಟಲಿಯಲ್ಲಿ 5,986, ಸ್ಪೇನ್‍ನಲ್ಲಿ 3,494, ಜರ್ಮನಿಯಲ್ಲಿ 4,528, ಅಮೆರಿಕದಕಲ್ಲಿ 5,861, ಇರಾನ್‍ನಲ್ಲಿ 1,237, ಫ್ರಾನ್ಸ್ ನಲ್ಲಿ 1,617 ಕೊರೊನಾ ಸೋಂಕಿತ ಪ್ರಕರಣಗಳು ವರದಿಯಾಗಿದೆ.

ಚೀನಾ, ಇಟಲಿ, ಇರಾನ್, ದಕ್ಷಿಣ ಕೊರಿಯಾ, ಸ್ಪೇನ್, ಫ್ರಾನ್ಸ್, ಜರ್ಮನಿ, ಅಮೆರಿಕದಲ್ಲಿ ಕೊರೊನಾ ವ್ಯಾಪಕವಾಗಿ ಹರಡಿದೆ. ಚೀನಾದಲ್ಲಿ ಮೊದಲು ಕಾಣಿಸಿಕೊಂಡ ಕೊರೊನಾ ಮರಣ ಮೃದಂಗ ಭಾರಿಸುತ್ತಿತ್ತು. ವೈದ್ಯರು ಹಾಗೂ ಇತರೆ ವೈದ್ಯಕೀಯ ಸಿಬ್ಬಂದಿಯ ಸತತ ಪರಿಶ್ರಮ, ಸರ್ಕಾರದ ಕ್ರಮಗಳಿಂದ ಚೀನಾದಲ್ಲಿ ಸದ್ಯ ಸೋಂಕಿತರ ಸಂಖ್ಯೆ ಕಡಿಮೆ ಆಗುತ್ತಿದೆ. ಆದರೆ ಇಟಲಿಯಲ್ಲಿ ವ್ಯಾಪಕವಾಗಿ ಕೊರೊನಾ ಹರಡುತ್ತಿದ್ದು, ಶುಕ್ರವಾರ ಒಂದೇ ದಿನಕ್ಕೆ 627 ಮಂದಿ ಕೋರೊನಾಗೆ ಬಲಿಯಾಗಿದ್ದಾರೆ.

  1. ಚೀನಾಈವರೆಗೆ ಕೊರೊನಾ ಸೋಂಕಿಗೆ 81,008 ಮಂದಿ ತುತ್ತಾಗಿದ್ದಾರೆ. ಅವರಲ್ಲಿ 71,740 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದು, 3,255 ಮಂದಿ ಸಾವನ್ನಪ್ಪಿದ್ದಾರೆ. ಸದ್ಯ 6,013 ಮಂದಿ ಕೊರೊನಾದಿಂದ ಬಳಲುತ್ತಿದ್ದಾರೆ.
  2. ಇಟಲಿಸೋಂಕಿಗೆ ಈವರೆಗೆ ಇಟಲಿಯಲ್ಲಿ ಸುಮಾರು 47,021 ಮಂದಿ ತುತ್ತಾಗಿದ್ದು, ಅವರಲ್ಲಿ 5,129 ಮಂದಿ ಚೇತರಿಸಿಕೊಂಡಿದ್ದಾರೆ. ಪ್ರಸ್ತುತ 37,860 ಮಂದಿ ಕೊರೊನಾದಿಂದ ಬಳಲುತ್ತಿದ್ದು, 4,032 ಮಂದಿ ಮೃತಪಟ್ಟಿದ್ದಾರೆ.
  3. ಇರಾನ್19,644 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಅವರಲ್ಲಿ 6,745 ಮಂದಿ ಸೊಂಕಿನಿಂದ ಚೇತರಿಸಿಕೊಂಡಿದ್ದಾರೆ. ಸದ್ಯ 11,466 ರೋಗಿಗಳು ಸೋಂಕಿನಿಂದ ಬಳಲುತ್ತಿದ್ದು, 1,433 ಸೋಂಕಿತರು ಸಾವನ್ನಪ್ಪಿದ್ದಾರೆ.
  4. ಸ್ಪೇನ್21,571 ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಅವರಲ್ಲಿ 1,588 ಮಂದಿ ಗುಣಮುಖರಾಗಿದ್ದಾರೆ. ಪ್ರಸ್ತುತ 18,890 ರೋಗಿಗಳು ಕೊರೊನಾ ಸೋಂಕಿನಿಂದ ಬಳಲುತ್ತಿದ್ದು, 1,093 ಮಂದಿ ಬಲಿಯಾಗಿದ್ದಾರೆ.
  5. ದಕ್ಷಿಣ ಕೊರಿಯಾ8,799 ಮಂದಿಗೆ ಸೋಂಕು ತಗುಲಿತ್ತು. ಆದರೆ ಅವರಲ್ಲಿ 2,612 ರೋಗಿಗಳು ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ. 102 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಪ್ರಸ್ತುತ 6,085 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ.
  6. ಜರ್ಮನಿ19,648 ಮಂದಿಯಲ್ಲಿ ಕಾಣಿಕೊಂಡ ಕೊರೊನಾ ಸೋಂಕಿನಿಂದ 180 ರೋಗಿಗಳು ಚೇತರಿಸಿಕೊಂಡಿದ್ದಾರೆ. ಸದ್ಯ 68 ಮಂದಿ ಬಲಿಯಾಗಿದ್ದು, ಪ್ರಸ್ತುತ 19,600 ರೋಗಿಗಳು ಕೊರೊನಾದಿಂದ ನರಳುತ್ತಿದ್ದಾರೆ.
  7. ಫ್ರಾನ್ಸ್12,612 ಮಂದಿ ಕೊರೊನಾಗೆ ತುತ್ತಾಗಿದ್ದರು. ಅವರಲ್ಲಿ 1,587 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಸದ್ಯ 10,575 ಮಂದಿ ಸೋಂಕಿನಿಂದ ಬಳಲುತ್ತಿದ್ದು, 450 ಮಂದಿ ಜೀವ ಕಳೆದುಕೊಂಡಿದ್ದಾರೆ.
  8. ಅಮೆರಿಕಯುಎಸ್‍ಎನಲ್ಲಿ ಕೊರೊನಾಗೆ 263 ಮಂದಿ ಬಲಿಯಾಗಿದ್ದಾರೆ. 19,650 ಮಂದಿಯಲ್ಲಿ ಕಾಣಿಸಿಕೊಂಡ ಸೋಂಕಿನಿಂದ 147 ಮಂದಿ ಗುಣಮುಖರಾಗಿದ್ದಾರೆ. ಸದ್ಯ 19,240 ರೋಗಿಗಳು ಸೋಂಕಿನಿಂದ ಬಳಲುತ್ತಿದ್ದಾರೆ.
  9. ಪಾಕಿಸ್ತಾನಭಾರತದ ನೆರೆಯ ರಾಷ್ಟ್ರ ಪಾಕಿಸ್ತಾನದಲ್ಲೂ ಹರಡಿರುವ ಕೊರೊನಾ ವೈರಸ್‍ಗೆ ಈವರೆಗೆ 501 ಮಂದಿ ತುತ್ತಾಗಿದ್ದು, 13 ಮಂದಿ ಚೇತರಿಸಿಕೊಂಡಿದ್ದಾರೆ. ಮೂವರು ಸೋಂಕಿತರು ಸಾವನ್ನಪ್ಪಿದ್ದು, ಪ್ರಸ್ತುತ 485 ಮಂದಿ ಸೋಂಕಿನಿಂದ ನರಳುತ್ತಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ